ಮಂಗಳವಾರ, ನವೆಂಬರ್ 24, 2020
21 °C
ನ. 10ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ

ಹಣಮಂತ ದಡ್ಡಿ, ವೂಡೇ ಕೃಷ್ಣ ಅವರಿಗೆ ನಾಡೋಜ ಗೌರವ ಪ್ರಕಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Hampi Kannada University

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ 28ನೇ ನುಡಿಹಬ್ಬ ನ. 10ರಂದು ಮಂಟಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಈ ಸಾಲಿಗೆ ಡಾ. ಹಣಮಂತ ಗೋವಿಂದಪ್ಪ ದಡ್ಡಿ, ವೂಡೇ ಪಿ. ಕೃಷ್ಣ ಅವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಲಾಗುತ್ತದೆ.

ಜಮಖಂಡಿಯ ದಡ್ಡಿ ಅವರಿಗೆ ವೈದ್ಯಕೀಯ ಕ್ಷೇತ್ರ ಮತ್ತು ಬೆಂಗಳೂರಿನ ವೂಡೇ ಕೃಷ್ಣ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಾಡೋಜ ಗೌರವಕ್ಕೆ ಆಯ್ಕೆ ಮಾಡಲಾಗಿದೆ. 


ಹಣಮಂತ ಗೋವಿಂದಪ್ಪ ದಡ್ಡಿ

ಅಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಪಿಎಚ್‌.ಡಿ ಮತ್ತು ಡಿ.ಲಿಟ್‌ ಪದವಿ ಪ್ರದಾನ ಮಾಡುವರು. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್‌.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡುವರು. ಕುಲಪತಿ ಪ್ರೊ.ಸ.ಚಿ. ರಮೇಶ ಉಪಸ್ಥಿತರಿರುವರು.


ವೂಡೇ ಪಿ. ಕೃಷ್ಣ

ಕೋವಿಡ್‌–19 ಕಾರಣಕ್ಕಾಗಿ ಈ ವರ್ಷ ಸೀಮಿತ ಸಂಖ್ಯೆಯ ಜನರೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಯಲು ರಂಗಮಂದಿರದ ಬದಲು ಮಂಟಪ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆಯ ಬದಲು ಬೆಳಿಗ್ಗೆ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಲಾಗಿದೆ. ಬೋಧಕ–ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಯೂಟ್ಯೂಬ್‌ನಲ್ಲಿ ಕಾರ್ಯಕ್ರಮ ವೀಕ್ಷಿಸಬೇಕೆಂದು ಕೋರಲಾಗಿದೆ.

ಪ್ರತಿ ವರ್ಷ ನುಡಿಹಬ್ಬಕ್ಕೂ ಎರಡು ದಿನ ಮುಂಚಿತವಾಗಿ ಕುಲಪತಿ ಸುದ್ದಿಗೋಷ್ಠಿ ಕರೆದು ವಿಷಯ ತಿಳಿಸುತ್ತಿದ್ದರು. ಈ ವರ್ಷ ಅದನ್ನು ಕೈಬಿಡಲಾಗಿದ್ದು, ಎಂಟು ದಿನಗಳ ಮೊದಲೇ ವಾರ್ತಾ ಇಲಾಖೆಯ ಮೂಲಕ ಮಾಧ್ಯಮಗಳಿಗೆ ವಿಷಯ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು