ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಹಣವಿದ್ದರೂ ಕೆಲಸವಿಲ್ಲ, ತಪ್ಪದ ಜನರ ಪರದಾಟ

ಭರಪೂರ ಅನುದಾನವಿದ್ದರೂ ಮೇಲ್ಸೇತುವೆ ಕಾಮಗಾರಿ ಕುಂಠಿತ; ಇಚ್ಛಾಶಕ್ತಿಯ ಕೊರತೆ
Last Updated 15 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಅನಂತಶಯನಗುಡಿ ಮಾರ್ಗವೂ ಕಲ್ಯಾಣ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ನಡುವೆ ಸಂಪರ್ಕ ಬೆಸೆಯುವ ಕೊಂಡಿಯಾಗಿದೆ. ಆದರೆ, ಈ ಮಾರ್ಗ ಮಧ್ಯದ ರೈಲ್ವೆ ಗೇಟ್‌ನಿಂದ ಜನರ ನೆಮ್ಮದಿ ಹಾಳಾಗಿದೆ. ಹಂಪಿಗೆ ಬರುವ ಪ್ರವಾಸಿಗರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಗೆ ಕಾರಣವೇನು ಎಂಬುದರ ಮೇಲೆ ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ. ಪ್ರತಿಕ್ರಿಯಿಸಿ: 94491 91319

ಹೊಸಪೇಟೆ: ಇಲ್ಲಿನ ಅನಂತಶಯನಗುಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ₹40 ಕೋಟಿ ಅನುದಾನ ಮಂಜೂರಾಗಿದೆ. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಇದುವರೆಗೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ.

ಮೂರು ವರ್ಷಗಳ ಹಿಂದೆ ₹22 ಕೋಟಿ ಅನುದಾನ ಮಂಜೂರಾಗಿತ್ತು. ಬಳಿಕ ಅದನ್ನು ₹40 ಕೋಟಿಗೆ ಹೆಚ್ಚಿಸಲಾಗಿದೆ. ಆದರೆ, ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಗತಿಯಾಗಿಲ್ಲ.

ಈ ಮಾರ್ಗವೂ ಹೈದರಾಬಾದ್‌ ಕರ್ನಾಟಕದ ಬೀದರ್‌, ಕಲಬುರ್ಗಿ, ಕೊಪ್ಪಳ, ರಾಯಚೂರು, ತೆಲಂಗಾಣದ ರಾಜಧಾನಿ ಹೈದರಾಬಾದ್‌ ಸೇರಿದಂತೆ ಇತರೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನೊಂದೆಡೆ ಆ ಭಾಗದವರು ಚಿತ್ರದುರ್ಗ, ತುಮಕೂರು, ದಾವಣೆಗೆರೆ, ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ಇತರೆ ಕಡೆಗಳಿಗೆ ಹೋಗುತ್ತಾರೆ.

ಇದೇ ಮಾರ್ಗದಲ್ಲಿ ವಿಶ್ವ ಪಾರಂಪರಿಕ ತಾಣ ಹಂಪಿ ಕೂಡ ಇರುವುದರಿಂದ ದೇಶ–ವಿದೇಶಗಳಿಂದ ಬರುವ ಪ್ರವಾಸಿಗರು ನಗರದ ಮೂಲಕ ಅಲ್ಲಿಗೆ ಹೋಗುತ್ತಾರೆ. ಆದರೆ, ಅದರ ಮಾರ್ಗ ಮಧ್ಯದಲ್ಲಿರುವ ಅನಂತಶಯನ ಗುಡಿ ರೈಲ್ವೆ ಗೇಟ್‌ ಎಲ್ಲರಿಗೂ ಕಿರಿಕಿರಿಯಾಗಿ ಪರಿಣಮಿಸಿದೆ.

ಅಲ್ಲಿಂದ ಜೋಡಿ ರೈಲು ಹಳಿಗಳು ಹಾದು ಹೋಗಿವೆ. ಅದರ ಮೂಲಕ ಅದಿರಿನ ಗಣಿ, ಉಕ್ಕಿನ ಕಾರ್ಖಾನೆಗಳಿಗೆ ಸರಕು ಸಾಗಣೆ ರೈಲುಗಳು ಓಡಾಡುತ್ತವೆ. ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಬೆಸೆಯುವುದರಿಂದ ಅನೇಕ ಪ್ರಯಾಣಿಕರ ರೈಲುಗಳು ಈ ಮಾರ್ಗದ ಮೂಲಕವೇ ಚಲಿಸುತ್ತವೆ. ಪದೇ ಪದೇ ರೈಲ್ವೆ ಗೇಟ್‌ ಹಾಕುವುದರಿಂದ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ದೂರದ ಊರುಗಳಿಗೆ ಹೋಗುವವರು ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ಹಂಪಿ ಪ್ರವಾಸಿಗರೂ ಅದಕ್ಕೆ ಹೊರತಾಗಿಲ್ಲ.

ಮೇಲ್ಸೇತುವೆ ನಿರ್ಮಾಣಕ್ಕೂ ಮುನ್ನ ಸರ್ವೇ ನಡೆಸಬೇಕು. ಇದುವರೆಗೆ ಆ ಕೆಲಸವೇ ಆಗಿಲ್ಲ. ಅದರ ಸುತ್ತಮುತ್ತ ಅನೇಕ ಮನೆಗಳಿದ್ದು, ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ. ಆದರೆ, ಯಾವ ಮಾಹಿತಿಯೂ ಕಲೆ ಹಾಕಿಲ್ಲ. ಹೀಗಾಗಿ ಇದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಈ ಸಮಸ್ಯೆ ಶಾಶ್ವತವಾಗಿ ನೀಗಿಸಬೇಕೆಂದು ಸ್ಥಳೀಯ ಸಂಘ ಸಂಸ್ಥೆಗಳು ಅನೇಕ ಸಲ ಹೋರಾಟ ನಡೆಸಿವೆ. ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಿದ್ದರಿಂದ ಸರ್ಕಾರ ಅನುದಾನ ಮಂಜೂರು ಮಾಡಿದೆ. ಆದರೆ, ಸ್ಥಳೀಯ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

‘ಗೇಟ್‌ ಬಳಿ ಆಂಜನೇಯ ದೇವಸ್ಥಾನವಿದೆ. ಹೀಗಾಗಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅದು ಸಮಸ್ಯೆಯೇ ಅಲ್ಲ. ಮೇಲ್ಸೇತುವೆ ನಿರ್ಮಾಣದಿಂದ ದೇಗುಲಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಇದೊಂದೆ ನೆಪ ಮಾಡಿ, ಕಾಮಗಾರಿ ಆರಂಭಿಸದಿರುವುದು ಸರಿಯಲ್ಲ’ ಎನ್ನುತ್ತಾರೆ ವಿಜಯನಗರ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ವೈ. ಯಮುನೇಶ್‌.

‘ಹಂಪಿ ಉತ್ಸವಕ್ಕೆ ಗಣ್ಯರು ಬಂದಾಗ ಅವರಿಗೂ ಅದರ ಬಿಸಿ ತಟ್ಟಿದೆ. ಈ ಕೆಲಸ ಆದಷ್ಟು ಬೇಗವಾದರೆ ಒಳಿತು ಎಂಬ ಕಾಳಜಿಯ ಮಾತುಗಳನ್ನು ಆಡುತ್ತಾರೆ. ಆದರೆ, ಸಂಬಂಧಿಸಿದವರ ಮೇಲೆ ಒತ್ತಡ ಹೇರಿ ಕೆಲಸ ಮಾಡುವಂತೆ ಯಾರು ಸೂಚಿಸುವುದಿಲ್ಲ’ ಎಂದು ನೋವು ತೋಡಿಕೊಂಡರು.

ರೈಲ್ವೆ ಗೇಟ್‌ ಮಧ್ಯದಲ್ಲಿಯೇ ರೈಲು ನಿಂತಿರುವುದು
ರೈಲ್ವೆ ಗೇಟ್‌ ಮಧ್ಯದಲ್ಲಿಯೇ ರೈಲು ನಿಂತಿರುವುದು

*
ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ, ಶೀಘ್ರ ಸರ್ವೇ ನಡೆಸಬೇಕು. ಅಲ್ಲಿದ್ದ ಮನೆಗಳನ್ನು ಸ್ಥಳಾಂತರಿಸಿ ಕೆಲಸ ಆರಂಭಿಸಬೇಕು.
–ವೈ.ಯಮುನೇಶ್‌, ಅಧ್ಯಕ್ಷ, ವಿಜಯನಗರ ರೈಲ್ವೆ ಹೋರಾಟ ಸಮಿತಿ

*
ಇದು ಬಹಳ ತುರ್ತಾಗಿ ಆಗಬೇಕಾದ ಕೆಲಸ. ಇದರ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನ ವಹಿಸಿದ್ದು ಸರಿಯಲ್ಲ.
–ನಾಗಲಿಂಗೇಶ್‌, ಅನಂಯಶಯನಗುಡಿ ನಿವಾಸಿ

*
ಅನೇಕ ಕಾಮಗಾರಿಗಳಿಗೆ ಅನುದಾನ ಇರುವುದಿಲ್ಲ. ಮೇಲ್ಸೇತುವೆಗೆ ಅನುದಾನ ಮಂಜೂರಾದರೂ ಕೆಲಸ ನಡೆಯದಿರುವುದು ದುರದೃಷ್ಟಕರ.
–ವಿನಯಕುಮಾರ, ಆಜಾದ್‌ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT