ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು, ಪತ್ರಕರ್ತರ ಮೇಲಿದೆ ದೊಡ್ಡ ಹೊಣೆಗಾರಿಕೆ: ಬಿ.ಎಂ. ಹನೀಫ್‌

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೊಸಪೇಟೆ ಘಟಕದಿಂದ ಪತ್ರಿಕಾ ದಿನಾಚರಣೆ
Last Updated 7 ಜುಲೈ 2019, 13:09 IST
ಅಕ್ಷರ ಗಾತ್ರ

ಹೊಸಪೇಟೆ: ‘ಸಮಾಜದಲ್ಲಿ ಶಿಕ್ಷಕರು ಹಾಗೂ ಪತ್ರಕರ್ತರಿಗೆ ವಿಶೇಷ ಗೌರವ ಇದೆ. ಅವರಿಬ್ಬರೂ ಮಾಡುವ ಕೆಲಸದಿಂದ ಇಡೀ ಸಮಾಜದಲ್ಲಿ ದೊಡ್ಡ ಬದಲಾವಣೆ ಉಂಟು ಮಾಡುವ ಶಕ್ತಿಯಿದೆ. ಹೀಗಾಗಿ ಇಬ್ಬರ ಮೇಲಿನ ಹೆಚ್ಚಿನ ಹೊಣೆಗಾರಿಕೆ ಇದೆ’ ಎಂದು ‘ಪ್ರಜಾವಾಣಿ’ ಸಹ ಸಂಪಾದಕ ಬಿ.ಎಂ. ಹನೀಫ್‌ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೊಸಪೇಟೆ ಘಟಕದಿಂದ ಭಾನುವಾರ ನಗರ ಹೊರವಲಯದ ಗುಂಡಾ ಸಸ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಶಿಕ್ಷಕರು, ಪತ್ರಕರ್ತರು ಮೌಲ್ಯಗಳಿಗೆ ಬದ್ಧರಾಗಿ ಕೆಲಸ ಮಾಡುತ್ತಾರೆ. ಅವರು ವೈಯಕ್ತಿಕ ನಿಲುವುಗಳನ್ನು ಬದಿಗೊತ್ತಿ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಆರೋಗ್ಯಪೂರ್ಣ ಸಮಾಜದ ಬೆಳವಣಿಗೆಯಲ್ಲಿ ಈ ಇಬ್ಬರ ಪಾತ್ರ ಬಹಳ ಪ್ರಮುಖವಾದುದು’ ಎಂದರು.

‘ಪತ್ರಕರ್ತರನ್ನು ಹೊಗಳುವವರು ಇದ್ದಾರೆ. ತೆಗಳುವರರು ಇದ್ದಾರೆ. ಅವರು ಸಮಾಜದ ಓರೆ ಮತ್ತು ಕೊರೆ ತಿದ್ದುತ್ತಾರೆ. ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಆಶ್ವಾಸನೆಗಳನ್ನು ನೀಡುತ್ತಾರೆ. ಆದರೆ, ಅವುಗಳನ್ನು ಈಡೇರಿಸುತ್ತಿಲ್ಲ’ ಎಂದು ಹೇಳಿದರು.

‘ಜನಪ್ರತಿನಿಧಿಗಳು ತಪ್ಪು, ಸರಿ ಕೆಲಸ ಮಾಡುತ್ತಿರುವುದನ್ನು ವರದಿಗಳ ಮೂಲಕ ಜನರಿಗೆ ತಿಳಿಸಬೇಕು. ಜತೆಗೆ ಕನ್ನಡ ಭಾಷೆಯನ್ನು ಬೆಳೆಸಬೇಕಿದೆ. ಬಸವಣ್ಣ, ಸಂತ ಶಿಶುನಾಳ ಷರೀಫ್‌, ರೆವರೆಂಡ್‌ ಫಾದರ್‌ ಕಿಟ್ಟೆಲ್‌, ಕುವೆಂಪು, ನಟ ರಾಜಕುಮಾರ ಅವರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು’ ಎಂದರು.

ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಸಂಸದ ವೈ. ದೇವೇಂದ್ರಪ್ಪ, ‘ಪತ್ರಕರ್ತರು ಜನಪ್ರತಿನಿಧಿಗಳಿಗೆ ಅಂಕುಶವನ್ನು ಹಾಕಬೇಕು. ತಮ್ಮ ಬರಹಗಳ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕು. ಅಭಿವೃದ್ಧಿಯ ವಿಚಾರದಲ್ಲಿ ಸಲಹೆಗಳನ್ನು ಕೊಡಬೇಕು’ ಎಂದು ಮನವಿ ಮಾಡಿದರು.

‘ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕರಿಸಲಾಗುವುದು. ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ ನಿವೇಶನ ಒದಗಿಸಿಕೊಡಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ಶಾಸಕ ಆನಂದ ಸಿಂಗ್ ಮಾತನಾಡಿ, ‘ಬ್ರೇಕಿಂಗ್ ಸುದ್ದಿಯಿಂದ ಮಾಧ್ಯಮಗಳು ಹೊರಗಡೆ ಬರಬೇಕು. ವಾಸ್ತವ ಸುದ್ದಿಗಳನ್ನು ಬಿತ್ತರಿಸಬೇಕು. ಸಮಾಜವನ್ನು ಸರಿ ದಾರಿಯಲ್ಲಿ ನಡೆಸಬೇಕು. ಅವರು ಅದನ್ನು ಸರಿಯಾಗಿ ನಿಭಾಯಿಸಬೇಕು’ ಎಂದು ಹೇಳಿದರು.

‘ಸೈನಿಕರು ದೇಶದ ಗಡಿಯನ್ನು ರಕ್ಷಣೆ ಮಾಡುತ್ತಾರೆ. ಆದರೆ, ಪತ್ರಕರ್ತರು ದೇಶದ ಒಳಗಿನ ಸಮಾಜವನ್ನು ಕಾಯುವ ಸೈನಿಕರು. ಹೊಗಳಿಕೆ ಮತ್ತು ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಬೇಕು. ಪತ್ರಕರ್ತರಿಗೆ ನಿವೇಶನ ನೀಡಲು ಅಗತ್ಯ ಸಹಕಾರವನ್ನು ನೀಡಲಾಗುವುದು’ ಎಂದು ಭರವಸೆ ಕೊಟ್ಟರು.

ಸಂಘದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ ಮಾತನಾಡಿ, ‘ಎಲ್ಲ ಪತ್ರಕರ್ತರನ್ನು ಸಂಘಟಿಸಿ ಸಂಕಷ್ಟದಲ್ಲಿರುವ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುವೆ’ ಎಂದರು.

ಹಿರಿಯ ಪತ್ರಕರ್ತ ಓಂಕಾರ, ಪರಶುರಾಮ ಕಲಾಲ್‌, ಅಬ್ದುಲ್‌ ಗಫೂರ್‌, ಕೆ.ಬಿ. ಖವಾಸ್‌,ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದು ತೇರ್ಗಡೆ ಹೊಂದಿರುವ ಪತ್ರಕರ್ತ ಬಸಾಪುರ ಬಸವರಾಜ ಅವರ ಮಗಳು ಮಧುಮಿತಾ, ಭೀಮಾ ನಾಯ್ಕ ಅವರ ಮಗ ಎಲ್‌.ಬಿ. ಚೇತನ್‌ ಅವರನ್ನು ಸತ್ಕರಿಸಲಾಯಿತು.

ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಜಿಲ್ಲಾ ಅಧ್ಯಕ್ಷ ವಿ. ಜಗನ್‌ಮೋಹನ್‌ ರೆಡ್ಡಿ, ಸಂಘದ ತಾಲ್ಲೂಕು ಗೌರವ ಅಧ್ಯಕ್ಷ ಟೈಗರ್ ಪಂಪಣ್ಣ, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಎಚ್‌. ಶ್ರೀನಿವಾಸರಾವ್, ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಗುಜ್ಜಲ್ ಶಿವರಾಮಪ್ಪ, ಅರಣ್ಯ ಇಲಾಖೆಯ ಎ.ಸಿ.ಎಫ್‌. ಎಂ.ಡಿ. ಮೋಹನ್, ಆರ್‌.ಎಫ್‌.ಒ. ಎನ್.ಬಸವರಾಜ, ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುನಾಥ, ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಇಮಾಮ್‌ ನಿಯಾಜಿ, ಬಿಜೆಪಿ ಮುಖಂಡ ರಾಮಚಂದ್ರಗೌಡ ಸೇರಿದಂತೆ ಪತ್ರಕರ್ತರು, ಪತ್ರಿಕಾ ಏಜೆಂಟ್‍ರು, ಪತ್ರಿಕಾ ವಿತರಕರು ಇದ್ದರು. ಅಂಗಡಿ ವಾಮದೇವ, ಅಂಜಲಿ ಭರತ ನಾಟ್ಯ ಕಲಾ ತಂಡದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT