ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಲಸಿಕೆ; ದಾರಿ ದೂರ.. ದೂರ

ಕೆಲವೇ ಕಾಲೇಜುಗಳಲ್ಲಿ ಲಸಿಕೆ ಹಾಕಿಸುವ ವ್ಯವಸ್ಥೆ * ಅಭಿಯಾನಕ್ಕೆ ಅಡ್ಡಿಯಾದ ಲಸಿಕೆ ಕೊರತೆ
Last Updated 5 ಜುಲೈ 2021, 5:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜುಲೈ ಎರಡನೇ ವಾರ ಕಾಲೇಜು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಯೋಚಿಸುತ್ತಿದೆ. ಆದರೆ, ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ಬಹುತೇಕ ವಿದ್ಯಾರ್ಥಿಗಳು ಇದುವರೆಗೆ ಲಸಿಕೆ ಹಾಕಿಸಿಕೊಂಡಿಲ್ಲ.

ಕೆಲವು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಅವರೇ ವೆಬ್‌ಸೈಟಿನಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡು ಕುಟುಂಬ ಸದಸ್ಯರ ಜೊತೆಗೆ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಒಂದೆರಡು ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿದರೆ ಬಹುತೇಕ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಲಸಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಲ್ಲ.

ಕಾಲೇಜು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಉನ್ನತ ಶಿಕ್ಷಣ ಇಲಾಖೆಯು ಸೂಚನೆ ಕೊಟ್ಟಿದೆ. ಆದರೆ, ಇಂತಹದೇ ನಿರ್ದಿಷ್ಟ ದಿನಾಂಕ ಆರಂಭಿಸಲಾಗುವುದು ಎಂದು ತಿಳಿಸಿಲ್ಲ. ಹೀಗಿದ್ದರೂ ಕೆಲ ಶಿಕ್ಷಣ ಸಂಸ್ಥೆಗಳು ಲಸಿಕೆ ಪಡೆದ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕುತ್ತಿವೆ. ಯಾರು ಲಸಿಕೆ ಪಡೆದಿಲ್ಲವೋ ಅವರಿಗಾಗಿ ಲಸಿಕೆ ಹಾಕುವ ವ್ಯವಸ್ಥೆಗೆ ಮುಂದಾಗಿವೆ. ಆದರೆ, ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಉನ್ನತ ಶಿಕ್ಷಣ ಇಲಾಖೆಯ ಸ್ಪಷ್ಟ ನಿರ್ದೇಶನದ ನಿರೀಕ್ಷೆಯಲ್ಲಿವೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ಷೇಮಪಾಲನ ಅಧಿಕಾರಿ ಇತ್ತೀಚೆಗೆ ತಾಲ್ಲೂಕು ಆರೋಗ್ಯ ಅಧಿಕಾರಿಯನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ. ಅವರ ಸೂಚನೆಯ ಮೇರೆಗೆ ಲಸಿಕೆ ಪಡೆಯದ ವಿದ್ಯಾರ್ಥಿಗಳ ಸಂಖ್ಯೆ ಕಲೆ ಹಾಕುತ್ತಿದ್ದಾರೆ. ಬಹುತೇಕ ಶಿಕ್ಷಣ ಸಂಸ್ಥೆಗಳು ಕೂಡ ಇದೇ ಮಾರ್ಗ ಅನುಸರಿಸಿವೆ.

ಆಯಾ ಶಿಕ್ಷಣ ಸಂಸ್ಥೆಗಳು ರಚಿಸಿದ ವಾಟ್ಸ್‌ ಆ್ಯಪ್‌ ಗ್ರುಪ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಲಾಗುತ್ತಿದೆ. ‘ ಕಡ್ಡಾಯವಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಪಡೆದವರಿಗಷ್ಟೇ ತರಗತಿಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಲಸಿಕೆಗೆ ನಿರ್ದಿಷ್ಟ ದಿನಾಂಕದಂದು ವ್ಯವಸ್ಥೆ ಮಾಡಲಾಗಿದೆ ಎಂದು ಸಂದೇಶದಲ್ಲಿ ತಿಳಿಸಿದ್ದರೆ, ಕೆಲವು ಸಂಸ್ಥೆಗಳು ಅದರ ಬಗ್ಗೆ ಉಲ್ಲೇಖಿಸಿಲ್ಲ. ಇದು ಸಹಜವಾಗಿಯೇ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳಿದೆ. ಹೀಗಾಗಿ ಅನೇಕ ವಿದ್ಯಾರ್ಥಿಗಳು ಅವರೇ ಕೇಂದ್ರಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಆದರೆ, ಹಲವು ಕೇಂದ್ರಗಳಲ್ಲಿ ಲಸಿಕೆಯ ದಾಸ್ತಾನು ಇಲ್ಲದೆ ಇರುವುದರಿಂದ ಅದನ್ನು ಪಡೆಯಲು ಸಾಧ್ಯವಾಗಿಲ್ಲ. ಇನ್ನು, ಗ್ರಾಮೀಣ ಭಾಗದಲ್ಲಿ ಲಸಿಕೆಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಅವರು ನಗರದ ಯಾವ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿ ಇದ್ದಾರೆ.

‘ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳಬೇಕು ಎಂದರೆ ವಿಶ್ವವಿದ್ಯಾಲಯದಲ್ಲಿನ ಹಾಸ್ಟೆಲ್‌ ಆರಂಭಿಸಬೇಕು. ಆಗ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಎಲ್ಲರಿಗೂ ಲಸಿಕೆ ಹಾಕಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ.

ಒಂದೆಡೆ ಶಿಕ್ಷಣ ಇಲಾಖೆಯು ಕಾಲೇಜು ಆರಂಭಕ್ಕೆ ಉತ್ಸಾಹ ತೋರಿಸುತ್ತಿದ್ದರೆ, ಇನ್ನೊಂದೆಡೆ ಕಾಲೇಜುಗಳು ಈಗಷ್ಟೇ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದರಿಂದ ಸಕಾಲಕ್ಕೆ ಕಾಲೇಜು ಆರಂಭವಾಗುವುದರ ಬಗ್ಗೆ ಅನುಮಾನ ಮೂಡಿದೆ.

ಕಾಲೇಜಿನಲ್ಲಿ ಲಸಿಕೆ ಅಭಿಯಾನ
ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ, ಇಂದು ಹಾಗೂ ಗಂಗೋತ್ರಿ ಪದವಿ ಕಾಲೇಜುಗಳಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಆದರೆ, ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿಕೊಳ್ಳಲು ತೊಂದರೆ ಆಗುತ್ತಿದೆ. ಬಸ್‌ ವ್ಯವಸ್ಥೆ ಕಲ್ಪಿಸಿ, ಲಸಿಕೆ ಪಡೆಯಲು ವ್ಯವಸ್ಥೆ ಮಾಡಬೇಕು ಎನ್ನುವುದು ವಿದ್ಯಾರ್ಥಿಗಳ ಹಕ್ಕೊತ್ತಾಯ.

ಪ್ರತ್ಯೇಕ ಕಾರ್ಯಕ್ರಮ ಇಲ್ಲ
ಮರಿಯಮ್ಮನಹಳ್ಳಿ: ಪಟ್ಟಣದ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಪಿಯು ಕಾಲೇಜು ಸೇರಿದಂತೆ ಎರಡು ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಯಾವುದೇ ಪ್ರತ್ಯೇಕ ಕಾರ್ಯಕ್ರಮ ನಡೆದಿಲ್ಲ. ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳಲು ಆಸಕ್ತಿ ತೋರಿ ಕೇಂದ್ರಗಳಿಗೆ ಹೋದರೆ ನಾಳೆ ಬನ್ನಿ ಎಂಬ ಉತ್ತರ ಸಿಗುತ್ತಿದೆ.

ಲಸಿಕಾಕರಣಕ್ಕೆ ಹಿನ್ನಡೆ
ಹೂವಿನಹಡಗಲಿ : ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಜಾರಿಯಾಗಿದ್ದರೂ, ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಆರಂಭವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಲಸಿಕಾಕರಣಕ್ಕೆ ಹಿನ್ನಡೆಯಾಗಿದೆ. ಕೆಲವರಷ್ಟೇ ತಮ್ಮ ಊರುಗಳ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಬಹುತೇಕರು ಇನ್ನೂ ಲಸಿಕೆಯ ನಿರೀಕ್ಷೆಯಲ್ಲಿ ಇದ್ದಾರೆ.

ನಿಧಾನಗತಿಯಲ್ಲಿ ಲಸಿಕೆ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ನಿಧಾನವಾಗಿ ಸಾಗಿದೆ.
ತಾಲ್ಲೂಕಿನ ಎಂಟು ಕಡೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಾಕುತ್ತಿಲ್ಲ. ಕಾಲೇಜು ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಹುತೇಕ ಕಾಲೇಜಿನವರು ಈಗಷ್ಟೇ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಮುಂದಾಗಿದ್ದಾರೆ.

ಸರ್ಕಾರದ ಆದೇಶದ ನಿರೀಕ್ಷೆಯಲ್ಲಿ
ಸಂಡೂರು: ತಾಲ್ಲೂಕಿನ ಬಹುತೇಕ ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಇನ್ನುಳಿದವರು ಇಷ್ಟರಲ್ಲೇ ಪಡೆಯಬಹುದು. ಹೀಗಾಗಿ ಇಲ್ಲಿನ ಶಿಕ್ಷಣ ಸಂಸ್ಥೆಯವರು ಕಾಲೇಜು ಆರಂಭಿಸುವುದರ ಬಗ್ಗೆ ಸರ್ಕಾರದ ಆದೇಶದ ನಿರೀಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಆರೋಗ್ಯ ಇಲಾಖೆಯವರು ಕಾಲೇಜುಗಳಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸಿದ್ದಾರೆ.
‘ಯಶವಂತನಗರ ಪಾಲಿಟೆಕ್ನಿಕ್, ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ತೋರಣಗಲ್ಲಿನ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಶೀಘ್ರ ಲಸಿಕೆ ಹಾಕಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಕುಶಾಲ್ ರಾಜ್ ತಿಳಿಸಿದರು.

ಕೋವಿಡ್ ಲಸಿಕೆ ಮರೀಚಿಕೆ
ಕಂಪ್ಲಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎರಡು ಖಾಸಗಿ ಐಟಿಐ ಕಾಲೇಜು ಸೇರಿದಂತೆ ಒಟ್ಟು 932 ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಇನ್ನೂ ಹಾಕಿಲ್ಲ. ಈ ಕಾಲೇಜುಗಳ 26 ಸಿಬ್ಬಂದಿಗೂ ಲಸಿಕೆ ದೊರೆತಿಲ್ಲ. ಈ ಕುರಿತು ಕಾಲೇಜುಗಳಿಂದ ಮಾಹಿತಿ ಪಡೆದಿರುವ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದವರು ಪಟ್ಟಿ ಮಾಡಿ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಪದವಿ ಕಾಲೇಜಿನಲ್ಲಿ ಲಸಿಕಾ ಕೇಂದ್ರ
ಸಿರುಗುಪ್ಪ : ತಾಲ್ಲೂಕಿನಲ್ಲಿ 15 ಕಾಲೇಜುಗಳಿದ್ದು, ಒಟ್ಟು 2,927 ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ನಡೆದಿದೆ.
ಇದರಲ್ಲಿ 324 ಸಿಬ್ಬಂದಿ ಪೈಕಿ 135 ಜನ, 2,927 ವಿದ್ಯಾರ್ಥಿಗಳಲ್ಲಿ 534 ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಕಾಲೇಜಿನಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಎಚ್‌.ಎಸ್‌. ಶ್ರೀಹರಪ್ರಸಾದ್‌, ಕೆ. ಸೋಮಶೇಖರ್‌, ಸಿ. ಶಿವಾನಂದ, ಜಿ. ಕರಿಬಸವರಾಜ, ವಿ.ಎಂ. ನಾಗಭೂಷಣ, ಎಚ್‌.ಎಂ. ಪಂಡಿತಾರಾಧ್ಯ, ಎಂ. ಬಸವರಾಜಯ್ಯ, ಬಿ. ಯರ್ರಿಸ್ವಾಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT