ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಗಾಂಧಿನಗರದಲ್ಲಿ 1 ಕಿ.ಮೀ ವಾಹನ ನಿಲುಗಡೆ ನಿಷೇಧ

ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಕ್ಕೆ ಚಾಲನೆ
Published 21 ಜೂನ್ 2024, 15:33 IST
Last Updated 21 ಜೂನ್ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ಸುಗಮ ಸಂಚಾರ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕೆ ಗಾಂಧಿನಗರದ ಒಂದು ಕಿ.ಮೀ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಡಿ ಫ್ರೀಡಂ ಪಾರ್ಕ್ ಸಮೀಪ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಕಮಿಷನರ್‌ ಅವರು ಗಾಂಧಿನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧ ಮಾಡಿದ್ದಾರೆ. ಇಲ್ಲಿನ ರಸ್ತೆ ವಿಶಾಲವಾಗಿರಬೇಕು. ಎಲ್ಲ ವ್ಯಾಪಾರಿಗಳಿಗೆ ಲಾಭವಾಗಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದಲ್ಲಿ ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದು, ಪ್ರತಿ ಗಂಟೆಗೆ ವಾಹನ ನಿಲುಗಡೆಗೆ ₹20ರಿಂದ ₹30 ನಿಗದಿ ಮಾಡಲಾಗಿದೆ. ಎರಡು ಮೂರು ಕಾರು ಹೊಂದಿರುವವರು ಕೂಡ ಇಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿಧಾನಸೌಧ, ಹೈಕೋರ್ಟ್, ರೈಲು ನಿಲ್ದಾಣ ಸೇರಿದಂತೆ ಗಾಂಧಿನಗರದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋಗಲು ಗುತ್ತಿಗೆದಾರರು ಉಚಿತ ಸಂಚಾರ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.  ಗಾಂಧಿನಗರಕ್ಕೆ ಮಧ್ಯಮ ವರ್ಗದ ಜನ ಹೆಚ್ಚಾಗಿ ಬರುತ್ತಾರೆ. ವಾಹನ ನಿಲುಗಡೆ ಸಮಸ್ಯೆ ಎದುರಾಗುತ್ತಿತ್ತು. ಈಗ ಅದಕ್ಕೆ ಪರಿಹಾರ ನೀಡಲಾಗುತ್ತಿದೆ. ಫ್ರೀಡಂಪಾರ್ಕ್‌ನಲ್ಲಿ ಹೋರಾಟ ಮಾಡಲು ಬರುವವರಿಗೂ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಈ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ ಮಾದರಿಯಾಗಿದ್ದು, ನಗರದ ಇತರೆ ಕಡೆಗಳಲ್ಲೂ ಜಾರಿ ಮಾಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಎರಡು ಮೂರು ದಿನಗಳಲ್ಲಿ ಜಾಹೀರಾತು ನೀತಿ: ‘ಬೆಂಗಳೂರಿಗೆ ಹೊಸ ರೂಪ ನೀಡಲು ನಾವು ಮುಂದಾಗಿದ್ದೇವೆ. ಮುಂದಿನ ಎರಡು ಮೂರು ದಿನಗಳಲ್ಲಿ ಜಾಹೀರಾತು ನೀತಿಯನ್ನು ಜಾರಿಗೆ ತರುತ್ತೇವೆ. ಟಿಡಿಆರ್ ಸಮಸ್ಯೆ, ಪ್ರೀಮಿಯಂ ಎಫ್ಎಆರ್ ಸೇರಿದಂತೆ ಎಲ್ಲಾ ವಿಚಾರವಾಗಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.

ಎಲ್ಲೆಡೆ ಡಬಲ್‌ ಡೆಕರ್‌: ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಡಬಲ್ ಡೆಕರ್ ಕಾರಿಡಾರ್ ಮೂಲಕ ಮೇಲ್ಸೇತುವೆ ಹಾಗೂ ಅದರ ಮೇಲೆ ನಮ್ಮ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲಾಗುವುದು. ಮುಂದಿನ ನಮ್ಮ ಮೆಟ್ರೊ ಮಾರ್ಗದಲ್ಲಿ ಈ ವ್ಯವಸ್ಥೆ ಇರಲಿದೆ. ಇದರಿಂದ ಭೂಸ್ವಾಧೀನದ ಸಮಸ್ಯೆಯೂ ನಿವಾರಣೆಯಾಗುತ್ತದೆ. ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಸಹಯೋಗದಲ್ಲಿ ಡಬಲ್‌ ಡೆಕರ್‌ ಕಾರಿಡಾರ್‌ ಕಾಮಗಾರಿಗಳನ್ನು ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರ ಹೇಳಿಕೆ ನಿಜ. 2032ರ ವೇಳೆಗೆ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಆಗಬೇಕು ಎಂಬ ಪ್ರಸ್ತಾವ ಸಲ್ಲಿಸಲಾಗಿದೆ. ಪಕ್ಕದ ರಾಜ್ಯಗಳು ಈ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಾವು ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ರಾಜ್ಯದ ಟ್ರಾಫಿಕ್ ಬೇರೆ ರಾಜ್ಯದ ಪಾಲಾಗಬಾರದು ಎಂಬ ಉದ್ದೇಶದಿಂದ ಈ ತಯಾರಿ ಮಾಡಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.

‘ಸ್ಕೈಡೆಕ್ ನಿರ್ಮಾಣ ವಿಚಾರವಾಗಿ ಕೆಲವು ಜಾಗ ಶಿಫಾರಸು ಮಾಡಲಾಗಿತ್ತು. ಅಷ್ಟೊಂದು ಜಾಗ ಅಲ್ಲಿ ಸಿಗುತ್ತಿಲ್ಲ. ಹೀಗಾಗಿ ಇನ್ನೂ ಹಲವೆಡೆ ಜಾಗ ನೋಡುತ್ತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT