ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಪಕರಿಗೆ ₹10 ಲಕ್ಷ ವಂಚನೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಚಿವರ ಜತೆಗಿರುವ ಆರೋಪಿ ಫೋಟೊ
Last Updated 9 ಜನವರಿ 2021, 19:20 IST
ಅಕ್ಷರ ಗಾತ್ರ

ಬೆಂಗಳೂರು: ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ, ಕನ್ನಡ ಸಿನಿಮಾ ನಿರ್ಮಾಪಕರೊಬ್ಬರಿಂದ ₹ 10 ಲಕ್ಷ ಪಡೆದು ವಂಚಿಸಿರುವ ಸಂಗತಿ ಹೊರಬಿದ್ದಿದೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಬಗ್ಗೆ ಸಿಸಿಬಿ ಮಾಹಿತಿ ಕಲೆಹಾಕುತ್ತಿದೆ.

‘ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮುಖಂಡರು ತನಗೆ ಪರಿಚಿತರು ಎಂದು ಹೇಳಿಕೊಳ್ಳುತ್ತಿದ್ದ ಯುವರಾಜ್, ಸರ್ಕಾರಿ ಕೆಲಸ ಹಾಗೂ ಕಾಮಗಾರಿಗಳ ಗುತ್ತಿಗೆ ಕೊಡಿಸುವ ಆಮಿಷವೊಡ್ಡಿ ಅನೇಕರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಅವುಗಳ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ನಿರ್ಮಾಪಕ ಸಹದೇವ್ ಎಂಬುವರು 2000ರಲ್ಲಿ ಯುವರಾಜ್ ಅವರನ್ನು ಭೇಟಿಯಾಗಿದ್ದರು. ಸಿನಿಮಾ ಮಾಡುವ ಬಯಕೆಯನ್ನು ಸಹದೇವ್ ವ್ಯಕ್ತಪಡಿಸಿದ್ದರು. ‘ಸಿನಿಮಾ ನಿರ್ಮಾಣದಲ್ಲಿ ಹೂಡಿಕೆ ಮಾಡುವವರು ನನಗೆ ಪರಿಚಯ. ಅವರಿಂದ ₹ 70 ಲಕ್ಷ ಕೊಡಿಸು
ತ್ತೇನೆ. ಅದಕ್ಕೂ ಮುನ್ನ ನನಗೆ ₹ 10 ಲಕ್ಷ ನೀಡಬೇಕು’ ಎಂದು ಯುವರಾಜ್ ಹೇಳಿದ್ದರು.’

‘ಅದನ್ನು ನಂಬಿದ್ದ ಸಹದೇವ್, ಆರೋಪಿಗೆ ₹ 10 ಲಕ್ಷ ಕೊಟ್ಟಿದ್ದರು. ಹಣ ಪಡೆದಿದ್ದ ಆರೋಪಿ ಬಳಿಕ ತಲೆಮರೆಸಿಕೊಂಡಿದ್ದರು. ನೊಂದ ನಿರ್ಮಾಪಕ, ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ಹೇಳಿವೆ.

ಸಚಿವರ ಜೊತೆ ಯುವರಾಜ್ ಫೋಟೊ: ಸಚಿವರಾದ ಲಕ್ಷ್ಮಣ ಸವದಿ, ವಿ. ಸೋಮಣ್ಣ, ಪರಿಷತ್‌ನ ಬಿಜೆಪಿ ಸದಸ್ಯ ಸಿ.‍ಪಿ. ಯೋಗೇಶ್ವರ್‌ ಸೇರಿದಂತೆ ಹಲವರ ಜೊತೆಯಲ್ಲಿ ಯುವರಾಜ್ ಫೋಟೊ ತೆಗೆಸಿಕೊಂಡಿದ್ದು, ಅವುಗಳೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಯುವರಾಜ್‌ ತಮ್ಮ ಜೊತೆ ಕಾಣಿಸಿಕೊಂಡ ಫೋಟೊ ಕುರಿತು ಪ್ರತಿಕ್ರಿಯಿಸಿರುವ ವಿ. ಸೋಮಣ್ಣ, ‘ಆತನಿಗೂ ನನಗೂ ಯಾವುದೇ ವೈಯಕ್ತಿಕ ಸಂಬಂಧವಿಲ್ಲ’ ಎಂದಿದ್ದಾರೆ.

‘ಬಿಜೆಪಿ ಕಾರ್ಯಕರ್ತನೆಂದು ಆತ ಗುರುತಿಸಿಕೊಂಡಿದ್ದ. ನನ್ನನ್ನು ಒತ್ತಾಯದಿಂದ ಮನೆಗೆ ಕರೆದೊಯ್ದಿದ್ದ. ಮನಸ್ಸು ನೋಯಿಸಬಾರದೆಂದು ನಾನು ಹೋಗಿದ್ದೆ. ಅಲ್ಲಿಯೇ ತಿಂಡಿ ತಿಂದಿದ್ದೆ. ಆತನ ಐಷಾರಾಮಿ ಮನೆ ಹಾಗೂ ಆತ ಕೊಟ್ಟ ತಟ್ಟೆ ನೋಡಿಯೇ ದಿಗಿಲಾಗಿತ್ತು. ನಂತರ, ಆತನ ಮನೆಗೆ ಹೋಗಿಲ್ಲ’ ಎಂದೂ ಹೇಳಿದರು.

ಅಕ್ರಮ ಹಣ ವರ್ಗಾವಣೆ; ಇ.ಡಿ, ಐ.ಟಿ.ಗೆ ಮಾಹಿತಿ

‘ಯುವರಾಜ್ ಅವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT