ಬೆಂಗಳೂರು: ಮಲ್ಲೇಶ್ವರದ ರಾಜಾಶಂಕರ್ ಆಟದ ಮೈದಾನದಲ್ಲಿ ಕಬ್ಬಿಣದ ಗೇಟ್ ಬಿದ್ದು ಬಾಲಕನೊಬ್ಬ ಭಾನುವಾರ ಮೃತಪಟ್ಟಿದ್ದಾನೆ.
ಪ್ಯಾಲೇಸ್ ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್‌ನ ನಿವಾಸಿ ವಿಜಯ್ ಪವಾರ್ ಎಂಬುವರ ಪುತ್ರ ನಿರಂಜನ್ (11) ಮೃತ ಬಾಲಕ. ಈ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟದ ಮೈದಾನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿದೆ. ತೀವ್ರ ಗಾಯಗೊಂಡಿದ್ದ ಬಾಲಕನನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಒಯ್ದಿದ್ದು, ಅಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
5ನೇ ತರಗತಿ ಓದುತ್ತಿದ್ದ ಬಾಲಕ ಭಾನುವಾರ ರಜೆಯಿದ್ದರಿಂದ ಮಧ್ಯಾಹ್ನ ಆಟವಾಡಲು ರಾಜಾಶಂಕರ್ ಆಟದ ಮೈದಾನಕ್ಕೆ ತೆರಳಿದ್ದ. ಕಬ್ಬಿಣದ ಗೇಟ್ ತೆಗೆಯುವಾಗ ಏಕಾಏಕಿ ಮೈಮೇಲೆ ಬಿದ್ದಿದ್ದು, ತಲೆಗೆ ತೀವ್ರವಾಗಿ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದಿದ್ದ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೋಷಕರು ಆತನನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಸೇರಿಸಿದ್ದರು . ಆದರೆ ರಕ್ತಸ್ರಾವದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದರು.
ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಸ್ಥಳೀಯರು ಹಾಗೂ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದರು.