ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11ನೇ ಶತಮಾನದ ಮಾಸ್ತಿಗಲ್ಲು ಪತ್ತೆ

ಮಹಾಸತಿ ಆಚರಣೆಯ ವಿವರವಿರುವ ಪ್ರಾಚೀನ ಶಿಲ್ಪ
Last Updated 1 ಏಪ್ರಿಲ್ 2023, 20:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಚ್.ಎ.ಎಲ್. ಸಮೀಪದ ದೊಡ್ಡನೆಕ್ಕುಂದಿಯಲ್ಲಿ ಗಂಗರ ಕಾಲದ 11ನೇ ಶತಮಾನದ ಮಹಾಸತಿ ಆಚರಣೆಯ ಅಪರೂಪದ ಮಾಸ್ತಿಗಲ್ಲು ಪತ್ತೆಯಾಗಿದೆ.

ರಾಜ್ಯ ಸರ್ಕಾರದ ಭಾಷಾಂತರ ನಿರ್ದೇಶನಾಲಯದ ಉಪನಿರ್ದೇಶಕಿ ಸ್ಮಿತಾ ರೆಡ್ಡಿ ಅವರು ಈ ಮಾಸ್ತಿಗಲ್ಲನ್ನು ಶೋಧಿಸಿದ್ದಾರೆ.

‘ಮಹಾಸತಿ ಅಥವಾ ಮಾಸ್ತಿ ಶಿಲ್ಪಗಳು ಕರ್ನಾಟಕದಾದ್ಯಂತ ಹತ್ತನೇ ಶತಮಾನದಿಂದಲೇ ದೊರೆಯುತ್ತವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಹ ಹನ್ನೆರಡನೆ ಶತಮಾನದಿಂದ ಹೆಚ್ಚಾಗಿ ಕಂಡುಬರುತ್ತವೆ. ಆದರೆ, ಮಹಾಸತಿ ಆಚರಣೆಯನ್ನು ಸೂಚಿಸುವಂತಹ ಇಂತಹ ಶಿಲ್ಪಗಳು ಕರ್ನಾಟಕದಲ್ಲಿ ತುಂಬಾ ವಿರಳ. ಹೆಗ್ಗಡದೇವನಕೋಟೆಯ ಬೆಳತೂರಿನ ದೇಕಬ್ಬೆಯ ಶಿಲ್ಪವನ್ನು ಬಿಟ್ಟರೆ, ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಹಾಸತಿ ಆಚರಣೆ ವಿವರವನ್ನು ಒಳಗೊಂಡಿರುವ ಪ್ರಾಚೀನ ಶಿಲ್ಪ ಇದಾಗಿದೆ’ ಎಂದು ಸ್ಮಿತಾ ರೆಡ್ಡಿ ತಿಳಿಸಿದ್ದಾರೆ.

‘ಇದು ಬೆಂಗಳೂರಿನಲ್ಲಿ ದೊರೆತಂತಹ ಮೊಟ್ಟ ಮೊದಲ ಮಾಸ್ತಿಗಲ್ಲಾಗಿದೆ. ಕರ್ನಾಟಕದಲ್ಲಿ ಸತಿ ಆಚರಣೆಯನ್ನು ಚಿತ್ರಿಸಿರುವ ಕ್ರಿ.ಶ. 1058ರ ದೇಕಬ್ಬೆ ಶಾಸನಕ್ಕಿಂತಲೂ ಪ್ರಾಚೀನವಾದ ಮೊಟ್ಟ ಮೊದಲ ಶಾಸನವೆಂಬ ಹೆಗ್ಗಳಿಕೆಗೆ ಈ ಮಾಸ್ತಿಗಲ್ಲು ಪಾತ್ರವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಈ ಶಾಸನವು ದೊಡ್ಡನೆಕ್ಕುಂದಿಯ ಕೆರೆಯ ಸಮೀಪವಿದ್ದು, ಇತ್ತೀಚೆಗೆ ಕೆರೆಯನ್ನು ಪುನಶ್ಚೇತನಗೊಳಿಸುವಾಗ ಪತ್ತೆಯಾಗಿದೆ. ಸ್ಥಳೀಯರಾದ ರಾಧಾಕೃಷ್ಣ ರೆಡ್ಡಿ ಅವರು ಅದನ್ನು ದೇವಾಲಯದ ಬಳಿ ಸುರಕ್ಷಿತವಾಗಿಟ್ಟು, ಸಂರಕ್ಷಿಸಿದ್ದರು. ಈ ಶಿಲ್ಪದ ಶೋಧದಲ್ಲಿ ಸ್ಥಳೀಯರಾದ ಎಸ್. ರಾಹುಲ್ ರೆಡ್ಡಿ, ಗೋಪಾಲ ರೆಡ್ಡಿ ನೆರವಾಗಿದ್ದಾರೆ’ ಎಂದು ಹೇಳಿದ್ದಾರೆ.

ಅನುಗಮನ ಪ್ರಕಾರ: ‘ಮಹಾಸತಿ ಆಚರಣೆಯಲ್ಲಿ ಸಹಗಮನ ಹಾಗೂ ಅನುಗಮನ ಎಂಬ ಎರಡು ವಿಧಾನಗಳಿವೆ. ಸಹಗಮನದಲ್ಲಿ ವೀರನು ಮರಣ ಹೊಂದಿದಾಗ ಅವನ ಸತಿಯೂ ಅವನೊಂದಿಗೆ ಮರಣ ಹೊಂದುತ್ತಾಳೆ. ವೀರನು ಯುದ್ಧರಂಗ ಅಥವಾ ಬೇರೆಲ್ಲೊ ಮರಣ ಹೊಂದಿದಾಗ, ಅವನ ಇಷ್ಟದ ವಸ್ತುವಿನೊಂದಿಗೆ
ವೀರನ ಪತ್ನಿ ಚಿತೆಗೇರುವುದನ್ನು ಅನುಗಮನ ಎಂದು ಕರೆಯಲಾಗುತ್ತದೆ. ದೊಡ್ಡ ನೆಕ್ಕುಂದಿಯಲ್ಲಿ ಪತ್ತೆಯಾದ ಮಾಸ್ತಿಗಲ್ಲು ಅನುಗಮನ ಪ್ರಕಾರಕ್ಕೆ ಸೇರುತ್ತದೆ’ ಎಂದು ಸ್ಮಿತಾ ರೆಡ್ಡಿ ತಿಳಿಸಿದ್ದಾರೆ.

‘ಈ ಮಾಸ್ತಿಗಲ್ಲಿನಲ್ಲಿ ಮೂರು ಹಂತಗಳಲ್ಲಿ ಶಿಲ್ಪವಿದ್ದು, ಮೊದಲ ಹಂತದಲ್ಲಿ ವಾದ್ಯಗಳ ಸಮೇತ ಮೆರವಣಿಗೆಯಲ್ಲಿ ಬಂದಿರುವ ಸತಿ ಜ್ವಲಿಸುತ್ತಿರುವ ಅಗ್ನಿಕುಂಡದಲ್ಲಿ ಕುಳಿತಿದ್ದಾಳೆ. ಆಕೆ ವೀರನೊಟ್ಟಿಗೆ ಸಹಗಮನ ಮಾಡಿಲ್ಲವೆಂಬುದಕ್ಕೆ ವೀರನ ಸಂಕೇತವಾಗಿ ಪಕ್ಕದಲ್ಲಿ ಕುದುರೆಯ ಶಿಲ್ಪವನ್ನು ಬಿಡಿಸಲಾಗಿದೆ. ಎರಡನೆಯ ಹಂತದಲ್ಲಿ ಪ್ರಧಾನವಾಗಿ ವೀರ ಮತ್ತು ಆತನ ಪತ್ನಿಯನ್ನು ಬಿಡಿಸಲಾಗಿದೆ. ವೀರ ಕೈಮುಗಿದುಕೊಂಡು ಕುಳಿತಿದ್ದು, ಅವನ ಬಲಭಾಗದಲ್ಲಿ ಪತ್ನಿಯು ಬಲಗೈಯಲ್ಲಿ ಮಂಗಲದ ಸಂಕೇತಗಳಾದ ಕನ್ನಡಿಯನ್ನು, ಇನ್ನೊಂದು ಕೈಯಲ್ಲಿ ಗಿಂಡಿಯಂತಹ ವಸ್ತುವನ್ನು ಹಿಡಿದುಕೊಂಡಿದ್ದಾಳೆ’ ಎಂದು ಹೇಳಿದ್ದಾರೆ.

‘ಮೂರನೆಯ ಹಂತದಲ್ಲಿ ಎಡ ಮತ್ತು ಬಲ ಭಾಗಗಳಲ್ಲಿ ಸಮಾನಾಂತರವಾಗಿ ವೀರನನ್ನು ಹಾಗೂ ಸತಿಯನ್ನು ಅಪ್ಸರೆಯರು ಪ್ರತ್ಯೇಕವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವಂತೆ ಬಿಡಿಸಲಾಗಿದೆ. ಸಾಮಾನ್ಯವಾಗಿ ವೀರ ಮತ್ತು ಅವನ ಸತಿಯನ್ನು ಒಟ್ಟಿಗೆ ಸ್ವರ್ಗಕ್ಕೆ ಕರೆದೊಯ್ಯುವಂತೆ ಬಿಡಿಸುವುದು ಸಾಮಾನ್ಯ. ಆದರೆ, ಇಲ್ಲಿ ಅವರಿಬ್ಬರನ್ನೂ ಅಪ್ಸರೆಯರು ಪ್ರತ್ಯೇಕವಾಗಿ
ಹೊತ್ತೊಯ್ಯುತ್ತಿರುವುದು ಈ ಶಿಲ್ಪದ ವಿಶೇಷ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT