ಭಾನುವಾರ, ಮಾರ್ಚ್ 29, 2020
19 °C
77 ಕಟ್ಟಡ ಮಾಲೀಕರಿಗೆ ನೋಟಿಸ್‌ ಜಾರಿ

ಬಿಬಿಎಂಪಿ ವ್ಯಾಪ್ತಿಯಲ್ಲಿ 178 ಶಿಥಿಲಾವಸ್ಥೆ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಒಟ್ಟು 178 ಕಟ್ಟಡಗಳು ಶಿಥಿಲಾವಸ್ತೆಯಲ್ಲಿರುವುದನ್ನು ಬಿಬಿಎಂಪಿ ಗುರುತಿಸಿದೆ. ಈ ಪೈಕಿ 77 ಕಟ್ಟಡಗಳಿಗೆ ಕೆಂಎಸಿ ಕಾಯ್ದೆಯ ಸೆಕ್ಷನ್‌ 322 ರ ಅಡಿ ನೋಟಿಸ್‌ ಜಾರಿ ಮಾಡಿದೆ.

‘ಪಾಲಿಕೆ ವ್ಯಾಪ್ತಿಯಲ್ಲಿ ಹಳತಾಗಿ ಶಿಥಿಲಗೊಂಡಿರುವ ಕಟ್ಟಡಗಳ ವರದಿ ನೀಡುವಂತೆ ಎಲ್ಲ ವಲಯಗಳ ಅಧಿಕಾರಿಗಳಿಗೂ ಸೂಚನೆ ನೀಡಿದ್ದೆ. ಎಂಜಿನಿಯರ್‌ಗಳು ಕಟ್ಟಡಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ನನಗೆ ವರದಿ ನೀಡಿದ್ದಾರೆ’ ಎಂದು ಆಯುಕ್ತ ಬಿ.ಎಚ್‌.ಅನಿಲ್ ಕುಮಾರ್‌ ತಿಳಿಸಿದರು.

‘ಶಿಥಿಲಾವಸ್ಥೆಯ ಕಟ್ಟಡವನ್ನು ದುರಸ್ತಿ ಮಾಡುವ ಸಾಧ್ಯತೆ ಇರುವ ಹಾಗೂ ನೆಲಸಮ ಮಾಡಬೇಕಾದ ಕಟ್ಟಡಗಳ ಪಟ್ಟಿ ತಯಾರಿಸಿದ್ದೇವೆ. ಕಟ್ಟಡವನ್ನು ಮತ್ತೆ ಸದೃಢಗೊಳಿಸುವ ಸಾಧ್ಯತೆ ಇದ್ದರೆ, ಅದರ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಮಾಲೀಕರಿಗೆ ನೋಟಿಸ್‌ ನೀಡಲು ಸೂಚನೆ ನೀಡಿದ್ದೇನೆ. ಅವರು ದುರಸ್ತಿ ಮಾಡಿಸದಿದ್ದರೆ ಅದನ್ನು ನೆಲಸಮ ಮಾಡಲು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.

‘ಕಟ್ಟಡ ತೀರಾ ಹದಗೆಟ್ಟು ದುರಸ್ತಿ ಸಾಧ್ಯವೇ ಇಲ್ಲದಿದ್ದರೆ, ಅದನ್ನು ಬಳಸುತ್ತಿರುವವರನ್ನು ಅಲ್ಲಿಂದ ಸ್ಥಳಾಂತರಿಸಿ ನೆಲಸಮ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.

‘ಕಟ್ಟಡಗಳನ್ನು ನಿರ್ಮಿಸುವಾದ ಸೆಟ್‌ ಬ್ಯಾಕ್‌ ಸರಿಯಾಗಿ ಬಿಟ್ಟಿದ್ದಾರೆಯೇ, ನಿಲಯಮ ಪಾಲನೆ ಆಗಿದೆಯೇ ಎಂಬ ಬಗ್ಗೆ ನಿಗಾ ವಹಿಸುವ ಜವಾಬ್ದಾರಿ ಆಯಾ ವಾರ್ಡ್‌ನ ಅಧಿಕಾರಿಗಳದ್ದು. ನಮ್ಮಲ್ಲಿ ನಿಯಮಗಳು ಕಾಗದದಲ್ಲಿ ಮಾತ್ರ ಇರುತ್ತವೆ. ಅದರ ಅನುಷ್ಠಾನದ ಬಗ್ಗೆ ಗಮನ ವಹಿಸುತ್ತಿಲ್ಲ. ಅಧಿಕಾರಿಗಳು ವಿನ್ಯಾಸ ಮಂಜೂರಾತಿಗೆ ತೋರಿಸುವ ಆಸಕ್ತಿಯನ್ನು ಅದರ ಪ್ರಕಾರ ಕಟ್ಟಡ ನಿರ್ಮಿಸಲಾಗುತ್ತಿದೆಯೇ ಎಂಬ ಬಗ್ಗೆ ತೋರಿಸುವುದಿಲ್ಲ. ಕಟ್ಟಡ ಕಟ್ಟುವಾಗ ಮಾಲೀಕರು ತಮಗೆ ಮನಬಂದಂತೆ ಮಾರ್ಪಾಡು ಮಾಡುತ್ತಾರೆ’ ಎಂದು ಆಯುಕ್ತರು ಹೇಳಿದರು.

‘ಕಟ್ಟಡ ನಿರ್ಮಿಸುವವರು ಪಾಲಿಕೆಯಿಂದ ಪ್ರಾರಂಭಿಕ ಪ್ರಮಾಣಪತ್ರ ಪಡೆಯುವುದಿಲ್ಲ. ಕಟ್ಟಡ ಪೂರ್ಣಗೊಂಡ ಬಳಿಕ ಸ್ವಾಧೀನಾನುಭವ ಪ್ರಮಾಣಪತ್ರವನ್ನೂ ಪಡೆಯುತ್ತಿಲ್ಲ. ಇದು ಅವ್ಯಾಹತವಾಗಿ ನಡೆಯುತ್ತಿದೆ. ಕಟ್ಟಡ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಭಯದ ವಾತಾವರಣ ನಿರ್ಮಾಣವಾದರೆ ಮಾತ್ರ ಇಂತಹ ಉಲ್ಲಂಘನೆ ತಡೆಯಬಹುದು. ಕಟ್ಟಡ ನಿಯಮಗಳ ಅನುಷ್ಠಾನ ಕಟ್ಟುನಿಟ್ಟುಗೊಳಿಸಬೇಕು. ಎಫ್‌ಎಆರ್‌ ನಿಯಮ ಮೀರಿ ನಿರ್ಮಾಣ ಮಾಡಿದ್ದರೆ, ಯಾವುದೇ ನಿಯಮ ಉಲ್ಲಂಘನೆ ಮಾಡಿದ್ದರೆ ಅಂತಹವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ಅಧಿಕಾರಿಗಳು ನೋಟಿಸ್‌ ನೀಡಿದ ತಕ್ಷಣ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಅದನ್ನು ತೆರವುಗೊಳಿಸುವಷ್ಟರಲ್ಲಿ ಕಟ್ಟಡ ಪೂರ್ಣಗೊಳಿಸಿ ಬಾಡಿಗೆಗೆ ಕೊಟ್ಟಿರುತ್ತಾರೆ’ ಎಂದು ಅಸಹಾಯತೆ ವ್ಯಕ್ತವಪಡಿಸಿದರು.

‘ಸುಬ್ರಹ್ಮಣ್ಯನಗರದಲ್ಲಿ ಮುನ್ನೆಚ್ಚರಿಕೆ ವಹಿಸದೆ ನಿವೇಶನದಲ್ಲಿ ಅಡಿಪಾಯ ತೆಗೆದಿದ್ದರಿಂದ ಅಕ್ಕಪಕ್ಕದ ಕಟ್ಟಡಗಳು ಅಪಾಯಕ್ಕೆ ಸಿಲುಕಿವೆ ಎಂಬ ದೂರು ಬಂದಿತ್ತು. ಈ ಕಟ್ಟಡಗಳ ಬಗ್ಗೆ ವರದಿ ಕೇಳಿದ್ದೇವೆ. ಆ ಕಟ್ಟಡಗಳು ಸಧೃಡವಾಗಿರುವುದರಿಂದ ಸದ್ಯಕ್ಕೆ ಅಪಾಯ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ’ ಎಂದು ಆಯುಕ್ತರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು