ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್‌ ಹಾವಳಿಯಿಂದ ಮುಕ್ತಿ ಪಡೆಯಿತು ನಗರ

ಹೈಕೋರ್ಟ್‌ನಿಂದ ಮೇಲಿಂದ ಮೇಲೆ ತರಾಟೆಗೊಳಗಾದ ಪಾಲಿಕೆಯಿಂದ ಫ್ಲೆಕ್ಸ್ ತೆರವಿಗೆ ಸಮರೋಪಾದಿ ಕಾರ್ಯಾಚರಣೆ
Last Updated 29 ಡಿಸೆಂಬರ್ 2018, 20:39 IST
ಅಕ್ಷರ ಗಾತ್ರ

ಬೆಂಗಳೂರು: ಕಂಡ ಕಂಡಲ್ಲೆಲ್ಲಾ ತಲೆ ಎತ್ತುತ್ತಿದ್ದ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಪೋಸ್ಟರ್‌ಗಳ ಹಾವಳಿಯಿಂದ ರಾಜಧಾನಿಗೆ ಮುಕ್ತಿ ಸಿಕ್ಕಿದ್ದು 2018ರ ಮಹತ್ವದ ಹೆಜ್ಜೆ ಗುರುತುಗಳಲ್ಲೊಂದು.

ಹೈಕೋರ್ಟ್‌ನಿಂದ ಪದೇ ಪದೇ ತರಾಟೆಗೆ ಒಳಗಾದ ಬಳಿಕ ಎಚ್ಚೆತ್ತ ಬಿಬಿಎಂಪಿ ಆಡಳಿತ ಆಗಸ್ಟ್‌ ತಿಂಗಳಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಕೇವಲ 15 ದಿನಗಳಲ್ಲಿ ನಗರದಲ್ಲಿ
ಸಾರ್ವಜನಿಕ ಸ್ಥಳಗಳ ಸ್ವರೂಪವನ್ನೇ ಬದಲಾಯಿಸಿ ಬಿಟ್ಟಿತು.

ಫ್ಲೆಕ್ಸ್‌ ಹಾಗೂ ಪೋಸ್ಟರ್‌ಗಳ ಬಳಿಕ ಅನಧಿಕೃತ ಜಾಹೀರಾತುಗಳನ್ನೂ ಕಿತ್ತು ಹಾಕಲಾಯಿತು. ಜಾಹೀರಾತು ಅಳವಡಿಕೆಗೆ ಬಳಸಿರುವ ಚೌಕಟ್ಟುಗಳನ್ನೂ ತೆರವುಗೊಳಿಸುವಂತೆಯೂ ಹೈಕೋರ್ಟ್‌ ಆದೇಶ ಮಾಡಿತ್ತು. ಆದರೆ, ಬಹುತೇಕ ಕಡೆ ಅವುಗಳಿನ್ನೂ ತೆರವಾಗಿಲ್ಲ.

ಜಾಹೀರಾತು ನೀತಿ

ಪಾಲಿಕೆಯುಹೈಕೋರ್ಟ್‌ ಸೂಚನೆ ಮೇರೆಗೆ ಹೊರಾಂಗಣ ಜಾಹೀರಾತು ನೀತಿಯನ್ನು ಆಗಸ್ಟ್‌ನಲ್ಲಿ ಅಂಗೀಕರಿಸಿತು. ಜಾಹಿರಾತು ನೀತಿಗೆ ಸಂಬಂಧಿಸಿದ ಉಪನಿಯಮಗಳ (ಬೈಲಾ) ಕರಡನ್ನು ರೂಪಿಸಿತು.

ಇದಕ್ಕೆ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿ ಬೈಲಾಕ್ಕೆ ಅಂತಿಮ ಸ್ಪರ್ಶ ನೀಡಲಾಗಿದ್ದು, ಇದಕ್ಕೆ ಸರ್ಕಾರದ ಅನುಮೋದನೆ ಸಿಗುವುದಷ್ಟೇ ಬಾಕಿ ಇದೆ.

ಕಸದ ರಾಶಿ ಮಾಯ: ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಕಸದ ರಾಶಿಯೂ ಹೈಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿತ್ತು.

‘ನಗರದಲ್ಲಿ ಎಲ್ಲೂ ಕಸದ ರಾಶಿ ಕಾಣಿಸಿಕೊಳ್ಳಬಾರದು’ ಎಂದು ನ್ಯಾಯಾಲಯ ಕಟ್ಟು ನಿಟ್ಟಾಗಿ ಆದೇಶ ಮಾಡಿದ ಬಳಿಕ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಚುರುಕಾದರು. ಕಸ ತೆರವುಗೊಳಿಸಿದ ಜಾಗದಲ್ಲಿ ಜನ
ಮತ್ತೆ ತ್ಯಾಜ್ಯ ಸುರಿಯುವುದನ್ನು ತಡೆಯಲು, ಅಲ್ಲಿ ರಂಗೋಲಿ ಬಿಡಿಸುವ ವಿನೂತನ ಪ್ರಯತ್ನಕ್ಕೆ ಪಾಲಿಕೆ ನವೆಂಬರ್‌ನಲ್ಲಿ ಕೈ ಹಾಕಿತು. ‘ಅಗ್ಲಿ ಇಂಡಿಯನ್ಸ್‌’ ಸರ್ಕಾರೇತರ ಸಂಘಟನೆ ನೆರವಿನಿಂದ ನಡೆಸಿದ ಈ ಪ್ರಯತ್ನ ಸಾಕಷ್ಟು ಯಶಸ್ವಿಯೂ ಆಯಿತು.

ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲೂ ಹೈಕೋರ್ಟ್‌ ಮಧ್ಯಪ್ರವೇಶ ಮಾಡಿತು. ನಗರದ ಎಂಟೂ ವಲಯಗಳ ಗುಂಡಿಗಳನ್ನು ಎಂಟು ದಿನಗಳ ಒಳಗೆ ಮುಚ್ಚುವಂತೆ ಕೋರ್ಟ್‌ ಆದೇಶ ಮಾಡಿತು. ಸಮರೊಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡ ಬಿಬಿಎಂಪಿ ಯಾವ ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆ, ಎಷ್ಟನ್ನು ಮುಚ್ಚಲಾಗಿದೆ ಎಂಬ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT