ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ 500 ಎಂಎಲ್‌ಡಿ ನೀರಿನ ಕೊರತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 18 ಮಾರ್ಚ್ 2024, 16:07 IST
Last Updated 18 ಮಾರ್ಚ್ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ನಿತ್ಯವೂ 50 ಕೋಟಿ ಲೀಟರ್‌ (500 ಎಂಎಲ್‌ಡಿ) ನೀರಿನ ಕೊರತೆ ಇದೆ. ನೀರಿನ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜಧಾನಿಯಲ್ಲಿನ ನೀರಿನ ಕೊರತೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜತೆಗೂಡಿ ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಬಳಿಕ ‍ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಗರಕ್ಕೆ ಕುಡಿಯಲು ಮತ್ತು ಕೈಗಾರಿಕಾ ಉದ್ದೇಶಕ್ಕೆ ನಿತ್ಯವೂ 260 ಕೋಟಿ ಲೀಟರ್‌ ನೀರಿನ ಅಗತ್ಯವಿದೆ. ಕಾವೇರಿ ಮೂಲದಿಂದ 145 ಕೋಟಿ ಲೀಟರ್‌ ನೀರು ಪೂರೈಕೆಯಾಗುತ್ತಿದೆ. ಕೊಳವೆಬಾವಿಗಳಿಂದ 65 ಕೋಟಿ ಲೀಟರ್‌ ನೀರು ದೊರೆಯುತ್ತಿದೆ ಎಂದು ವಿವರ ನೀಡಿದರು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸರ್ಕಾರದಿಂದ ಕೊರೆದಿರುವ 14,000 ಕೊಳವೆಬಾವಿಗಳ ಪೈಕಿ 6,900 ಬತ್ತಿಹೋಗಿವೆ. ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರಿಸಿರುವ 110 ಹಳ್ಳಿಗಳ ಪೈಕಿ 55 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಸಮಸ್ಯೆ ಉಲ್ಬಣಿಸದಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕೊಳೆಗೇರಿಗಳು, ಎತ್ತರದ ಪ್ರದೇಶಗಳು ಮತ್ತು ಬಿಬಿಎಂಪಿಗೆ ಹೊಸದಾಗಿ ಸೇರಿರುವ 110 ಹಳ್ಳಿಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಕೊಳವೆಬಾವಿಗಳನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಸೂಚಿಸಲಾಗಿದೆ. ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್‌) ಟ್ಯಾಂಕರ್‌ಗಳು ಮತ್ತು ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆದು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

333 ಹೊಸ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ನಿಷ್ಕ್ರಿಯಗೊಂಡಿದ್ದ 1,200 ಕೊಳವೆಬಾವಿಗಳಿಗೆ ಮರುಜೀವ ನೀಡಲಾಗುವುದು. ಕೆ.ಸಿ. ವ್ಯಾಲಿ ಮಾದರಿಯಲ್ಲಿ ಸಂಸ್ಕರಿತ ತ್ಯಾಜ್ಯ ನೀರನ್ನು ಬಳಸಿಕೊಂಡು ನಗರದ 14 ಕೆರೆಗಳನ್ನು ಭರ್ತಿ ಮಾಡಲು ಸೂಚಿಸಲಾಗಿದೆ. ಇದರಿಂದ ನಗರದಲ್ಲಿ ಕೊಳವೆ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಪ್ರತಿ ದಿನ ಸಭೆ: ಕುಡಿಯುವ ನೀರಿನ ಸಮಸ್ಯೆ ಕುರಿತು ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ನಿತ್ಯವೂ ಸಭೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಅವಲೋಕಿಸಿ ವಾರಕ್ಕೊಮ್ಮೆ ಕ್ರಿಯಾಯೋಜನೆ ರೂಪಿಸುತ್ತಿದ್ದಾರೆ. ಕುಡಿಯುವ ನೀರಿನ ಪೂರೈಕೆಗೆ ಹಣದ ಕೊರತೆ ಇಲ್ಲ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಅಗತ್ಯವಿರುವಷ್ಟು ಹಣ ಒದಗಿಸಲಿವೆ ಎಂದು ಹೇಳಿದರು.

ಭವಿಷ್ಯದಲ್ಲಿ ನೀರಿನ ಕೊರತೆ ಉದ್ಭವಿಸದಂತೆ ತಡೆಯಲು ತಜ್ಞರ ಸಮಿತಿ ರಚಿಸಲಾವುದು. ಖಾಸಗಿಯಾಗಿ ನೀರು ಪೂರೈಸುವ 1,700 ಟ್ಯಾಂಕರ್‌ಗಳು ಈವರೆಗೆ ನೋಂದಣಿಯಾಗಿವೆ. ನೀರಿನ ಸಮಸ್ಯೆ ನಿರ್ವಹಣೆಗೆ 143 ಕಾರ್ಯಪಡೆಗಳನ್ನು ರಚಿಸಲಾಗಿದೆ. ನೀರಿನ ಕೊರತೆ ಕುರಿತು ಕೇಂದ್ರೀಯ ಸಹಾಯವಾಣಿ ಸಂಖ್ಯೆ 1916 ಮತ್ತು ವಾಟ್ಸ್‌ ಆ್ಯಪ್‌ ಮೂಲಕವೂ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT