ಸೋಮವಾರ, ಜನವರಿ 17, 2022
27 °C

‘ಮೆಟ್ರೊ’ ಕಾರ್ಮಿಕರ ಬದುಕು–ಬವಣೆಯ ಅನಾವರಣ ‘ಸಬೂತ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

'ನಾವು ಕೆಲಸ ಮಾಡದಿದ್ದರೆ, ನಿಮ್ಮ ಮೆಟ್ರೊ ಮಾರ್ಗದ ಕೆಲಸ ಹೇಗೆ ಸಾಗುತ್ತದೆ?' ಉತ್ತರ ಭಾರತದ ಕಾರ್ಮಿಕರ ಪ್ರಶ್ನೆಯೇ ‘ನಮ್ಮ ಮೆಟ್ರೊ’ ಯಶಸ್ಸಿನ ಹಿಂದಿನ ಶಕ್ತಿ ಎನ್ನಬಹುದೇನೋ?

ಬೆಂಗಳೂರಿನ ಅಭಿವೃದ್ಧಿಯಲ್ಲಿ ‘ನಮ್ಮ ಮೆಟ್ರೊ’ ಪಾಲು ದೊಡ್ಡದು. ಇದರ ಕಾಮಗಾರಿಯಲ್ಲಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್‌, ಪಂಜಾಬ್‌, ಅಸ್ಸಾಂ ಕಾರ್ಮಿಕರ ಸಂಖ್ಯೆಯೇ ಹೆಚ್ಚು.

ಈ ಕಾರ್ಮಿಕರಿಗೆ ಯಾವುದೇ ಅಗತ್ಯ ಸೌಕರ್ಯ ನೀಡದೆ ಅವರನ್ನು ದುಡಿಸಿಕೊಳ್ಳಲಾಗುತ್ತದೆ. ತಾತ್ಕಾಲಿಕ ಟಿನ್‌ ಶೀಟ್‌ ಶೆಡ್‌ಗಳಲ್ಲಿ ಅವರ ವಾಸ. ಈಗ ಕೊರೊನಾ ಸೋಂಕು ಭಯದಿಂದ ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಅವರ ಬದುಕು, ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಎರಡು ತಿಂಗಳಿನಿಂದ ಪೂರ್ತಿ ಸಂಬಳ ಸಿಗದೆ ಶೆಡ್‌ಗಳಲ್ಲಿ ಅರೆಹೊಟ್ಟೆಯಲ್ಲಿ ದಿನಗಳೆಯುವಂತಾಗಿದೆ. 

ಕಾರ್ಮಿಕರ ಈ ಸಂಕಷ್ಟವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ ನಿರ್ದೇಶಕಿ ಏಕ್ತಾ ಹಾಗೂ ಯಶಸ್ವಿನಿ. ‘ಬಿಹೈಂಡ್ ದ ಟಿನ್ ಶೀಟ್ಸ್’ ಯೋಜನೆಯ ಭಾಗವಾಗಿ ‘ಸಬೂತ್‌/ಎವಿಡೆನ್ಸ್‌’ ಸಾಕ್ಷ್ಯಚಿತ್ರವನ್ನು ಏಕ್ತಾ ಹಾಗೂ ತಂಡ ನಿರ್ಮಾಣ ಮಾಡಿದೆ. ಸಬೂತ್‌ ಎಂದರೆ ಸಾಕ್ಷಿ. ಕಾರ್ಮಿಕರ ಬದುಕು ಮತ್ತು ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ಈ ಸಾಕ್ಷ್ಯಚಿತ್ರ ಸಾಕ್ಷಿಸಮೇತ ಬಿಂಬಿಸುತ್ತದೆ. 

13 ನಿಮಿಷಗಳ ಈ ಸಾಕ್ಷ್ಯಚಿತ್ರದಲ್ಲಿ ಕಾರ್ಮಿಕರು ತಮ್ಮ ಕಷ್ಟಗಳನ್ನು ತೋಡಿಕೊಂಡಿದ್ದಾರೆ. ಹಾಗೇ ಕಾರ್ಮಿಕರ ಶೆಡ್‌, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿಯೂ ಈ ಚಿತ್ರದಲ್ಲಿದೆ. ಚಿತ್ರವು ಬೆಂಗಳೂರಿನಲ್ಲಿ ಮೆಟ್ರೊ ಕಾರ್ಮಿಕರ ಕುರಿತಾಗಿ ಕಂಪನಿ, ಗುತ್ತಿಗೆದಾರರ ನಿರ್ಲಕ್ಷ್ಯ, ನಿಯಮಗಳ ಉಲ್ಲಂಘನೆ, ಅನಾದರವನ್ನು ಇದು ಕಟ್ಟಿಕೊಡುತ್ತದೆ.

ಇದರಲ್ಲಿ ಸದ್ಯ ಮೆಟ್ರೊ ರೈಲುಮಾರ್ಗ‌ ಕಾಮಗಾರಿ ನಡೆಯುತ್ತಿರುವ ಎಲೆಕ್ರ್ಟಾನಿಕ್‌ ಸಿಟಿ, ಬೊಮ್ಮನಹಳ್ಳಿ, ಐಟಿಪಿಎಲ್‌ ಸುತ್ತಮುತ್ತ ಶೆಡ್‌ಗಳಲ್ಲಿ ವಾಸವಾಗಿರುವ ಕಾರ್ಮಿಕರು ಮಾತನಾಡಿದ್ದಾರೆ. ಬಾಕಿ ಸಂಬಳಕ್ಕಾಗಿ ಕಾಯುತ್ತಿರುವ ಕಾರ್ಮಿಕರು ‘ಇಷ್ಟು ದಿನದಲ್ಲಿ ಒಂದು ಬಾರಿಯಾದರೂ ಗುತ್ತಿಗೆದಾರರು ನಮ್ಮನ್ನು ನೋಡಲು ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸುವುದು ಇದರಲ್ಲಿದೆ. 

ಕಾರ್ಮಿಕರು ಮಾತನಾಡುವಾಗ ಅವರ ಹಿಂದಿನ ದೃಶ್ಯಗಳು ಅಲ್ಲಿನ ಪರಿಸ್ಥಿತಿಯನ್ನು ಹೇಳುತ್ತವೆ. ಈ ಕಾರ್ಮಿಕರಿಗೆ ಅಗತ್ಯ ಸೌಕರ್ಯಗಳೂ ಇಲ್ಲ. ಕಿರಿದಾದ ಕೋಣೆಗಳಲ್ಲಿ 10–20 ಜನ, ಗಾಳಿ ಬೆಳಕು ಇಲ್ಲದ ಕೋಣೆ, ಕುಡಿಯಲು ಶುದ್ಧ ನೀರಿಲ್ಲ, 200–300 ಮಂದಿಗೆ ಆರೇಳು ಶೌಚಾಲಯ. ಇಂತಹ ಕಿರಿದಾದ ಜಾಗದಲ್ಲಿ ಸಾಮಾಜಿಕ ಅಂತರ ಹೇಗೆ ಕಾಪಾಡಿಕೊಳ್ಳುವುದು ಎಂಬುದು ಬಡಪಾಯಿಗಳ ಪ್ರಶ್ನೆ. 

ಇದೇ ವೇಳೆ ಗುತ್ತಿಗೆದಾರರ ಮತ್ತೊಂದು ಮುಖವನ್ನು ಕಾರ್ಮಿಕರು ಪರಿಚಯಿಸುತ್ತಾರೆ. ‘ನಮ್ಮ ಸಂಬಳ ₹18 –20 ಸಾವಿರ ಆಗಿದ್ದರೆ ನಮ್ಮ ಕೈಗೆ ತಲುಪುವುದು ಬರೀ ₹14 ಸಾವಿರ  ಉಳಿದ ₹5–6 ಸಾವಿರ ಹಣವನ್ನು ಗುತ್ತಿಗೆದಾರ ಕಮಿಷನ್‌ ರೂಪದಲ್ಲಿ ಪಡೆಯುತ್ತಾನೆ. ನಾವು ಕಷ್ಟಪಟ್ಟ ಹಣ ನಮಗೆ ಸಿಗುವಂತಾಗಬೇಕು’ ಎಂದು ಹೇಳುವುದು ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುತ್ತದೆ. 

‘ನಾವು ಕಷ್ಟಪಟ್ಟು ದುಡಿದರೂ ಇಲ್ಲಿ ನಮ್ಮನ್ನೂ ಯಾರೂ ಕೇಳುವವರಿಲ್ಲ. ನಮ್ಮ ಊರಿನಲ್ಲಿ ಕೆಲಸ ಇಲ್ಲ. ನಾವು ಕೆಲಸ ಮಾಡದಿದ್ದರೆ, ನಿಮ್ಮ ಮೆಟ್ರೋ ಮಾರ್ಗದ ಕೆಲಸ ಹೇಗೆ ಸಾಗುತ್ತದೆ?’ ಎಂದು ತಮ್ಮ ಮನದ ನೋವು, ಹತಾಶೆಯನ್ನು ತೋಡಿಕೊಳ್ಳುತ್ತಾರೆ.

‘ಕಾರ್ಮಿಕ ಇಲಾಖೆಯು ಈ ಕಾರ್ಮಿಕರಿಗೆ ಕಾನೂನಿನ ಅನ್ವಯ ಬಾಕಿ ಸಂಬಳ ಕೊಡಿಸಬೇಕು. ಜೀವನಕ್ಕೆ  ಅಗತ್ಯವಾದ ಮೂಲ ಸೌಲಭ್ಯ ಒದಗಿಸಬೇಕು’ ಎನ್ನುತ್ತಾರೆ ಸಾಕ್ಷ್ಯಚಿತ್ರ ನಿರ್ಮಿಸಿರುವ ಏಕ್ತಾ. ಈ ಸಾಕ್ಷ್ಯಚಿತ್ರವನ್ನು ಏಪ್ರಿಲ್‌ 29ರವರೆಗೆ ಕಾರ್ಮಿಕರನ್ನು ಮಾತನಾಡಿಸಿ ಚಿತ್ರೀಕರಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಸಾಕ್ಷ್ಯಚಿತ್ರಕ್ಕಾಗಿ– http://y2u.be/0KdGJALnuU8

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು