ಮಂಗಳವಾರ, ಮೇ 18, 2021
22 °C

‘ದಮನಕಾರಿ ನೀತಿಯಿಂದ ಹೋರಾಟ ಹತ್ತಿಕ್ಕಲು ಆಗಲ್ಲ’-ಮೋಹನ್‌ ದಾಸರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರಿಗೆ ನೌಕರರ ಪ್ರತಿಭಟನೆ

ಬೆಂಗಳೂರು: ‘ಸಾರಿಗೆ ನೌಕರರ ಪ್ರತಿಭಟನೆ ಮೂರನೇ ದಿನವೂ ಮುಂದುವರಿದಿದೆ. ಹೀಗಿದ್ದರೂ ಅವರನ್ನು ಕರೆಸಿ ಮಾತನಾಡುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಮಾಡಿಲ್ಲ. ಬದಲಾಗಿ ದಮನಕಾರಿ ನೀತಿಯ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಈ ಧೋರಣೆ ಕೈಬಿಟ್ಟು ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು’ ಎಂದು ಆಮ್‌ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು ‘ಸಾರಿಗೆ ನೌಕರರು 22 ದಿನಗಳ ಹಿಂದೆಯೇ ಮುಷ್ಕರದ ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ ಅವರ ನಾಯಕರನ್ನು ಕರೆದು ಮಾತನಾಡುವ ಗೋಜಿಗೆ ಮುಖ್ಯಮಂತ್ರಿಯವರು ಹೋಗಲಿಲ್ಲ. ರಾಜ್ಯದ ಜನ ಇದರ ಪರಿಣಾಮ ಎದುರಿಸುವಂತಾಗಿದೆ. ಮುಷ್ಕರದಿಂದ ಸರ್ಕಾರದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಸಾರಿಗೆ ಸೇವೆಯ ಮೇಲೆ ಅವಲಂಬಿತರಾಗಿದ್ದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು. 

ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಸದಂ ‘ಈ ಹಿಂದೆ ರೈತರು ದೊಡ್ಡ ಮಟ್ಟದ ಹೋರಾಟ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಸಾರಿಗೆ ನೌಕರರ ಮುಷ್ಕರವೂ ಅದೇ ಹಾದಿಯಲ್ಲಿ ಸಾಗುತ್ತಿದೆ. ರೈತ ಮುಖಂಡರೇ ಈ ಹೋರಾಟದ ಮುಂದಾಳತ್ವ ವಹಿಸಿರುವುದು ಮುಖ್ಯಮಂತ್ರಿಯವರನ್ನು ಕೆರಳಿಸಿದೆ. ಹೋರಾಟ ನಿರತರನ್ನು ಬೆದರಿಸುವ ಬದಲು ಅವರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿ’ ಎಂದು ಸಲಹೆ ನೀಡಿದರು.  

‘ಸಾರಿಗೆ ನೌಕರರ ಬೆಡಿಕೆ ಈಡೇರುವವರೆಗೂ ನಮ್ಮ ಪಕ್ಷವು ಅವರಿಗೆ ಬೆಂಬಲವಾಗಿ ನಿಲ್ಲಲಿದೆ’ ಎಂದು ತಿಳಿಸಿದರು.

ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಹಾಗೂ ಸತೀಶ್ ಕುಮಾರ್, ಸಾರಿಗೆ ನೌಕರರ ಮುಖಂಡರಾದ ರಾಮು ಮತ್ತು ಸತೀಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು