ಅಧಿಕಾರಿಗಳು, ಬಿಲ್ಡರ್ ಮನೆಯಲ್ಲಿ ಎಸಿಬಿ ಶೋಧ
ಬೆಂಗಳೂರು: ಯಲಹಂಕ ತಾಲ್ಲೂಕಿನ ಚಿಕ್ಕಬೆಟ್ಟಹಳ್ಳಿಯ 5 ಎಕರೆ ಸರ್ಕಾರಿ ಗೋಮಾಳದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಆರೋಪದಡಿ ಎಫ್ಐಆರ್ ದಾಖಲಿಸಿಕೊಂಡಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಇಬ್ಬರು ಸರ್ಕಾರಿ ನೌಕರರು ಮತ್ತು ಒಬ್ಬ ಬಿಲ್ಡರ್ ಮನೆಗಳ ಮೇಲೆ ಬುಧವಾರ ದಾಳಿ ಮಾಡಿ, ಶೋಧ ನಡೆಸಿದೆ.
ದೊಡ್ಡಬೆಟ್ಟಹಳ್ಳಿಯ ವ್ಯಕ್ತಿಯೊಬ್ಬರು ನೀಡಿರುವ ದೂರನ್ನು ಆಧರಿಸಿ, ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಬಳಿಕ ಪ್ರಕರಣ ದಾಖಲು ಮಾಡಲಾಗಿದೆ. ಯಲಹಂಕ ತಾಲ್ಲೂಕು ಕಚೇರಿಯಲ್ಲಿ ಕಂದಾಯ ನಿರೀಕ್ಷಕಿಯಾಗಿರುವ ಬಿ.ಕೆ. ಆಶಾ ಅವರ ಅನ್ನಪೂರ್ಣೇಶ್ವರಿನಗರದ ಆರೋಗ್ಯ ಬಡಾವಣೆಯ ಮನೆ, ಕಂದಾಯ ದಾಖಲೆಗಳ ವಿಭಾಗದ ಶಿರಸ್ತೇದಾರ್ ಪಿ.ಎಸ್.ಆರ್. ಪ್ರಸಾದ್ ಅವರ ತುಮಕೂರಿನ ವಿಜಯನಗರದ ಮನೆ ಮತ್ತು ಬೆಂಗಳೂರಿನ ನಾಗಶೆಟ್ಟಿಹಳ್ಳಿಯ ಡಾಲರ್ಸ್ ಕಾಲೋನಿಯಲ್ಲಿರುವ ಬಿಲ್ಡರ್ ಕೆ.ವಿ. ನಾಯ್ಡು ಎಂಬುವರ ಮನೆಗಳಲ್ಲಿ ಶೋಧ ನಡೆಸಲಾಗಿದೆ.
ಚಿಕ್ಕಬೆಟ್ಟಹಳ್ಳಿಯ ಸರ್ಕಾರಿ ಗೋಮಾಳದಲ್ಲಿನ 5 ಎಕರೆ ಜಮೀನಿನಲ್ಲಿ ಸ್ಥಳೀಯ ರೈತರು ಕೃಷಿ ಚಟುವಟಿಕೆ ನಡೆಸುತ್ತಿದ್ದು, ಬಗರ್ ಹುಕುಂ ಯೋಜನೆಯಡಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳು ಬಾಕಿ ಇರುವಾಗಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೂವರು ವ್ಯಕ್ತಿಗಳ ಹೆಸರಿಗೆ ಪಹಣಿ ಸೃಜಿಸಲಾಗಿತ್ತು. ನಂತರ ಆ ಜಮೀನನ್ನು ಕೆ.ವಿ. ನಾಯ್ಡು ಖರೀದಿಸಿದ್ದರು ಎಂದು ಎಸಿಬಿ ಮೂಲಗಳು ತಿಳಿಸಿವೆ.
ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ವಿಷಯ ತಿಳಿದ ರೈತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ದಾಖಲೆಗಳ ಬದಲಾವಣೆ ಮಾಡದಂತೆ ತಡೆ ನೀಡಿದ್ದರು. ಅದರ ವಿರುದ್ಧ ಖರೀದಿದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಪ್ರಕರಣದ ಮರು ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಆ ಬಳಿಕ ಮತ್ತೆ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸೇರಿಕೊಂಡು ನಕಲಿ ದಾಖಲೆಗಳ ಪರವಾಗಿ ಮತ್ತಷ್ಟು ದಾಖಲೆ ಸೃಷ್ಟಿಸಿದ್ದರು ಎಂಬುದು ಎಸಿಬಿ ತನಿಖೆಯಲ್ಲಿ ಪತ್ತೆಯಾಗಿದೆ.
‘ಈ ಪ್ರಕರಣದಲ್ಲಿ ಸರ್ಕಾರಕ್ಕೆ ಹತ್ತಾರು ಕೋಟಿ ರೂಪಾಯಿಗಳ ನಷ್ಟವಾಗಿದೆ. ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದೆ. ತನಿಖೆ ಮುಂದುವರಿದಿದೆ’ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.