ಬೆಂಗಳೂರು: ಪೇಯಿಂಗ್ ಗೆಸ್ಟ್ ಕಟ್ಟಡದ (ಪಿ.ಜಿ) ಕೊಠಡಿಯಲ್ಲಿ ಯುವತಿಯರ ಸ್ನಾನದ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಆರೋಪಿ, ಮೂಲತಃ ಚಿಕ್ಕಬಳ್ಳಾಪುರದ ಅಶೋಕ್ ಎಂಬವನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ಬ್ಯಾಂಕೊಂದರ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಾಗ ಸ್ಥಳೀಯರೇ ಹಿಡಿದು ಒಪ್ಪಿಸಿದ್ದಾರೆ. 7 ಯುವತಿಯರ ಸ್ನಾನದ ವಿಡಿಯೊಗಳು ಈತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.
‘ಈತ ಪುರುಷರ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ವಾಸವಿದ್ದ. ಅದೇ ಕಟ್ಟಡಕ್ಕೆ ಹೊಂದಿಕೊಂಡು ಯುವತಿಯರ ಪೇಯಿಂಗ್ ಗೆಸ್ಟ್ ಕಟ್ಟಡವಿದೆ. ಯುವತಿಯರು ಸ್ನಾನ ಮಾಡುವಾಗ ಕಿಟಕಿ ಬಳಿ ಅಡಗಿ ಚಿತ್ರೀಕರಣ ಮಾಡುತ್ತಿದ್ದು, ಇದು, ಯುವತಿಯರಿಗೆ ಗೊತ್ತಾಗಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ಜೂನ್ 21ರಂದು ಕಿಟಕಿ ಬಳಿ ಕುಳಿತು ಚಿತ್ರೀಕರಿಸುತ್ತಿದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಬೆನ್ನಟ್ಟಿ ಹಿಡಿದಿದ್ದರು. ಮೊಬೈಲ್ ಪರಿಶೀಲಿಸಿದಾಗ ಆತನ ಕೃತ್ಯಗೊತ್ತಾಗಿದ್ದು, ಆತನನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ವಶಕ್ಕೆ ಒಪ್ಪಿಸಿದ್ದರು’ ಎಂದು ಹೇಳಿದರು.
‘ನಾಲ್ಕು ತಿಂಗಳಲ್ಲಿ ಏಳು ಬಾರಿ ಆರೋಪಿ ಯುವತಿಯರ ವಿಡಿಯೊ ಚಿತ್ರೀಕರಣ ಮಾಡಿದ್ದಾನೆ. ಆರೋಪಿಯ ಮೊಬೈಲ್ ಜಪ್ತಿ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.