ಪಟಾಕಿ ಹೊಗೆ: ಮಾಲಿನ್ಯ ಕಣ ಹೆಚ್ಚಳ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸಿದ ಪಟಾಕಿ ಹೊಗೆಯಿಂದ ನಗರದ ವಿವಿಧೆಡೆ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಕಾರಕ ಕಣಗಳು (ಪಿಎಂ 2.5 ಮತ್ತು ಪಿಎಂ 10) ಕಾಣಿಸಿಕೊಂಡಿವೆ. ಇದರಿಂದಾಗಿ ಇಳಿಕೆ ಕಂಡಿದ್ದ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) ‘ಉತ್ತಮ’ದಿಂದ ‘ಸಮಾಧಾನಕರ’ ಹಂತಕ್ಕೆ ತಲುಪಿದೆ.
ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಬಹುತೇಕ ಐಟಿ–ಬಿಟಿ ಕಂಪನಿಗಳು ಕಚೇರಿಗಳನ್ನು ಪುನರಾರಂಭಿಸಲು ನಿರಾಸಕ್ತಿ ತೋರಿದ್ದರಿಂದ ಹೆಬ್ಬಾಳ, ಜಯನಗರ, ಸೆಂಟ್ರಲ್ ಸಿಲ್ಕ್ ಬೋರ್ಡ್, ನಗರ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಎಕ್ಯೂಐ 50ರ ಗಡಿಯ ಆಸುಪಾಸಿನಲ್ಲಿಯೇ ಇತ್ತು. ಕಳೆದೊಂದು ತಿಂಗಳಿನಿಂದ ವಾಹನ ಸಂಚಾರ ಹೆಚ್ಚಳವಾದರೂ ಎಕ್ಯುಐ 100ರ ಮಿತಿಯೊಳಗಿತ್ತು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸಿದ ಪಟಾಕಿಗಳ ಮಾಲಿನ್ಯಕಾರಕ ಹೊಗೆಯಿಂದ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ದಿಢೀರ್ ಏರಿಕೆ ಕಂಡಿದೆ. ಪಿಎಂ 10 ಹಾಗೂ ಪಿಎಂ 2.5 ಕಣಗಳಲ್ಲಿ ವ್ಯತ್ಯಾಸ ಉಂಟಾಗಿದೆ. ನಗರದ ಬಹುತೇಕ ಕಡೆ 1 ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ 10ರ ಪ್ರಮಾಣ 100 ಮೈಕ್ರೊ ಗ್ರಾಂ ಹಾಗೂ ಪಿಎಂ 2.5ರ ಪ್ರಮಾಣ 60 ಮೈಕ್ರೊ ಗ್ರಾಂ ಮೀರಿದೆ.
ಕಳಪೆ ಹಂತ: ಹಬ್ಬದ ಮುನ್ನಾದಿನವಾದ ಗುರುವಾರ ಹಾಗೂ ಹಬ್ಬದ ದಿನವಾದ ಶುಕ್ರವಾರ ರಾತ್ರಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಕಾರಕ ಕಣಗಳು ಕಾಣಿಸಿಕೊಂಡಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್, ಜಯನಗರ ಹಾಗೂ ಬಿಟಿಎಂ ಬಡಾವಾಣೆ ಸುತ್ತಮುತ್ತ ಎಕ್ಯುಐ 200ರ ಗಡಿ ದಾಟಿ, ಕಳಪೆ ಹಂತಕ್ಕೆ ತಲುಪಿದೆ. ಉಳಿದ ಕಡೆಯೂ ಈ ಪ್ರಮಾಣ ಸಾಮಾನ್ಯ ದಿನಗಳಿಗಿಂತ ಎರಡು ಪಟ್ಟು ಹೆಚ್ಚಳವಾಗಿದೆ.
‘ವಾತಾವರಣದಲ್ಲಿ ತೇವಾಂಶ ಹೆಚ್ಚಾದರೆ ದೂಳಿನ ಕಣಗಳು ಆಕಾಶಕ್ಕೆ ಹೋಗದೆ, ತಳಮಟ್ಟದಲ್ಲಿಯೇ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಪಟಾಕಿಯ ವಿಷಕಾರಿ ಹೊಗೆ ಈ ಗಾಳಿಯನ್ನು ಸೇರಿದಾಗ ಮಲಿನಕಾರಕ ಕಣಗಳು ಗಾಳಿಯಲ್ಲಿ ಉಳಿಯುತ್ತವೆ. ಮಳೆಯ ನಡುವೆಯೂ ಕೆಲವಡೆ ಪಟಾಕಿಗಳನ್ನು ಸಿಡಿಸಿದ್ದರಿಂದ ಕೆಲವೆಡೆ ಗಾಳಿಯ ಗುಣಮಟ್ಟದ ಸೂಚ್ಯಂಕ ಕೊಂಚ ಏರಿಕೆ ಕಂಡಿದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಪರಿಸರ ಅಧಿಕಾರಿಯೊಬ್ಬರು ತಿಳಿಸಿದರು.
‘ಗಾಳಿಯ ಗುಣಮಟ್ಟದ ಸೂಚ್ಯಂಕವು 50ರ ಮಿತಿಯ ಒಳಗಡೆಯಿದ್ದಲ್ಲಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳು ಕಾಣಿಸಿಕೊಳ್ಳುವುದಿಲ್ಲ. 100ರ ಗಡಿ ದಾಟಿದಲ್ಲಿ ಶ್ವಾಸಕೋಶ, ಹೃದಯ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ’ ಎಂದು ವಿವರಿಸಿದರು.
ಹಬ್ಬದ ದಿನ ಎಕ್ಯುಐ (ನ.5)
ಮಾಪನಾ ಕೇಂದ್ರವಿರುವ ಪ್ರದೇಶ; ಎಕ್ಯುಐ ಕನಿಷ್ಠ; ಎಕ್ಯುಐ ಗರಿಷ್ಠ
ಹೆಬ್ಬಾಳ; 07; 156
ಜಯನಗರ; 28; 220
ನಿಮ್ಹಾನ್ಸ್; 07; 47
ಸೆಂಟ್ರಲ್ ಸಿಲ್ಕ್ ಬೋರ್ಡ್; 27; 356
ನಗರದ ರೈಲು ನಿಲ್ದಾಣ; 48; 117
ಸಾಣೆಗುರುವನಹಳ್ಳಿ; 38; 99
ಕಾಡಬೀಸನಹಳ್ಳಿ; 09; 85
ಬಾಪೂಜಿನಗರ; 19; 131
ಪೀಣ್ಯ; 51; 100
ಬಿಟಿಎಂ ಬಡಾವಣೆ; 18; 194
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.