ಬೆಂಗಳೂರು: ‘ಭಾರತದ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ಥಿರತೆ ಇದ್ದರೆ ಅದಕ್ಕೆ ಅಂಬೇಡ್ಕರ್ ಅವರು ಭಾರತಿಯ ರಿಸರ್ವ್ ಬ್ಯಾಂಕ್ ಮೂಲಕ ಹಾಕಿದ ಭದ್ರ ಬುನಾದಿಯೇ ಕಾರಣ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅಂಬೇಡ್ಕರ್ ಅವರ ‘ದಿ ಪ್ರಾಬ್ಲಮ್ ಆಫ್ ದಿ ರುಪಿ’ ಪುಸ್ತಕ ಪ್ರಕಟಣೆಯಾದ 100ನೇ ವರ್ಷದ ಅಂಗವಾಗಿ ಅಂಬೇಡ್ಕರ್ ಎಕನಾಮಿಕ್ಸ್ ಫೌಂಡೇಷನ್ ಆಯೋಜಿಸಿದ್ದ ‘ಅರ್ಥಶಾಸ್ತ್ರಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಕೊಡುಗೆ’ ಕುರಿತ ಅಂತರರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಕೆಲವು ರಾಷ್ಟ್ರಗಳ ಆರ್ಥಿಕ ಸ್ಥಿತಿ ಸಂಪೂರ್ಣ ನಾಶವಾಗಿದೆ. ಬಹಳಷ್ಟು ಬ್ಯಾಂಕುಗಳು ದಿವಾಳಿಯಾಗಿವೆ. ಅಕ್ಕ–ಪಕ್ಕದ ದೇಶಗಳಲ್ಲಿ ಬದುಕು ಮತ್ತು ಆಹಾರಕ್ಕಾಗಿ ಹಾಹಾಕಾರ ಇದೆ. ನಾಳಿನ ಬಗ್ಗೆ ಕನಸುಗಳೇ ಇಲ್ಲದಂತಾಗಿವೆ. ಈ ಸಂದರ್ಭದಲ್ಲಿ ಭಾರತದ ಆರ್ಥಿಕ ಸ್ಥಿತಿಯನ್ನು ನೋಡಿದರೆ ಸಮಾಧಾನ ಎನಿಸುತ್ತದೆ. ಇದಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆಯೇ ಕಾರಣ’ ಎಂದರು.
ಕೆಲ ದೇಶಗಳಲ್ಲಿ ಆರ್ಥಿಕತೆ ಸಂಪೂರ್ಣ ನಾಶವಾಗಿದೆ. ಬಹಳಷ್ಟು ಬ್ಯಾಂಕುಗಳು ದಿವಾಳಿಯಾಗಿವೆ. ಆ ಸ್ಥಿತಿ ನಮ್ಮ ದೇಶಕ್ಕೆ ಬಾರದಿರಲು ಅಂಬೇಡ್ಕರ್ ಕಾರಣ ಎಂದು ಬಣ್ಣಿಸಿದರು.
ಕೋವಿಡ್ ನಂತರದ ದೇಶದ ಆರ್ಥಿಕತೆ ಮತ್ತೆ ಸಮತೋಲನ ಕಾಯ್ದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಆಲೋಚನೆ ಇದಕ್ಕೆ ಕಾರಣ ಎಂದರು.
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಜಗತ್ತಿನಾದ್ಯಂತ ಗೌರವಕ್ಕೆ ಭಾಜನವಾಗುತ್ತಿರುವ ವ್ಯಕ್ತಿ ಎಂದರೆ ಅದು ಅಂಬೇಡ್ಕರ್. ಅವರು ಭಾರತದ ಆರ್ಥಿಕತೆಗೆ ನೀಡಿದ ಕೊಡುಗೆ ಅನನ್ಯ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.