ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ: ಗುತ್ತಿಗೆ ಮೀಸಲಾತಿ ದುರ್ಬಲಗೊಳಿಸುವ ಹುನ್ನಾರ’

₹2 ಕೋಟಿ ವರೆಗಿನ ಕಾಮಗಾರಿಗೆ ಕೆಆರ್‌ಐಡಿಎಲ್‌ಗೆ 4 ಜಿ ವಿನಾಯಿತಿ
Last Updated 11 ಜನವರಿ 2021, 16:26 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ₹2 ಕೋಟಿವರೆಗಿನ ಕಾಮಗಾರಿಯನ್ನು ನೇರವಾಗಿ ವಹಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದು ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗದಾರರ ಮೀಸಲಾತಿ ಸವಲತ್ತು ದುರ್ಬಲಗೊಳಿಸುವ ಹುನ್ನಾರ’ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘ ಆರೋಪಿಸಿದೆ.

‘ಕೆಆರ್‌ಐಡಿಎಲ್‌ 4ಜಿ ವಿನಾಯಿತಿ ಪಡೆದು ಪ್ರತಿ ವರ್ಷ ಸಾವಿರಾರು ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸುತ್ತಿದೆ. ಎಸ್‌.ಆರ್. ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ (ಶೇ 8ರಿಂದ ಶೇ 11) ಕಾಮಗಾರಿ ನಿರ್ವಹಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ’ ಎಂಸು ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್.ಮಹದೇವಸ್ವಾಮಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಕಾಮಗಾರಿ ನಿರ್ವಹಿಸಲು 4ಜಿ ವಿನಾಯಿತಿ ನೀಡಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ನಷ್ಟವಾಗುತ್ತಿರುವ ಬಗ್ಗೆ ಸರ್ಕಾರಕ್ಕೂ ಮಾಹಿತಿ ಇದೆ. ಆದರೂ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಇದರಿಂದ ಎಲ್ಲ ವರ್ಗದ ಗುತ್ತಿಗೆದಾರರಿಗೂ ಅನ್ಯಾಯವಾಗಲಿದೆ’ ಎಂದು ಹೇಳಿದರು.

‘ಲಂಚದ ಆಸೆಗೆ ಬಿದ್ದು ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸುವುದು ಸೂಕ್ತವಲ್ಲ ಎಂದು ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಜೆ.ಸಿ.ಮಾಧುಸ್ವಾಮಿ ಅಧಿವೇಶನದಲ್ಲೇ ಮಾತನಾಡಿದ್ದರು. ಈಗ ಕಾನೂನು ಸಚಿವರಾಗಿ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಬಹುದು ಎಂದು ಕಾನೂನು ಇಲಾಖೆ ಮೂಲಕ ಅಭಿಪ್ರಾಯ ಕೊಡಿಸಿದ್ದಾರೆ. ಇದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ತಿದ್ದುಪಡಿ ತಂದರೆ ₹2 ಕೋಟಿ ವರೆಗಿನ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯೇ ನಡೆಯುವುದಿಲ್ಲ. ₹50 ಲಕ್ಷದವರೆಗಿನ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಕಾಮಗಾರಿ ಸಿಗದು. ಈ ಸಮುದಾಯವನ್ನು ಮೀಸಲಾತಿಯಿಂದ ವಂಚಿಸಲು ಸರ್ಕಾರ ಈ ವಾಮ ಮಾರ್ಗ ಹಿಡಿದಿದೆ’ ಎಂದು ಆರೋಪಿಸಿದರು.

‘ತಿದ್ದುಪಡಿ ಪ್ರಸ್ತಾಪ ಕೈಬಿಡಬೇಕು. ಸರ್ಕಾರ ಘೋಷಣೆ ಮಾಡಿರುವಂತೆ ಮೀಸಲಾತಿ ಮಿತಿಯನ್ನು ₹1 ಕೋಟಿಗೆ ಹೆಚ್ಚಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಮಹದೇವಸ್ವಾಮಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT