ಮಂಗಳವಾರ, ಜುಲೈ 27, 2021
21 °C
ಬಿಬಿಎಂಪಿಯ ನಾಲ್ವರು ಸಿಬ್ಬಂದಿ ಪಾಲಿಗೆ ಉರುಳಾಯಿತು ಕೊರೊನಾ

ಬಿಬಿಎಂಪಿ: ಪಾಲಿಕೆಯ ಮತ್ತಿಬ್ಬರು ಅಧಿಕಾರಿಗಳು ಕೊರೊನಾ ಸೋಂಕಿನಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಬುಧವಾರ ಬಿಬಿಎಂಪಿಯ ಮತ್ತಿಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಬಿಬಿಎಂಪಿಯು ಎರಡೇ ದಿನಗಳಲ್ಲಿ ನಾಲ್ವರು ಅಧಿಕಾರಿಗಳನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದೆ.

ಮಹಾಲಕ್ಷ್ಮೀಪುರ ವಿಧಾನಸಭಾಕ್ಷೇತ್ರದ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿ ವ್ಯವಸ್ಥಾಪಕರಾಗಿದ್ದ ಆರ್‌.ವಿಶ್ವನಾಥ್‌ (52)  ಹಾಗೂ ಗೋವಿಂದರಾಜನಗರ ಕ್ಷೇತ್ರ ಕಂದಾಯ ಅಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿದ್ದ ಬಿ.ಕೆ. ಶೈಲೇಶ್‌ (58) ಮೃತರು.

ಯಲಹಂಕ ಹಳೆಪಟ್ಟಣ ಉಪ ವಿಭಾಗದ ಕಂದಾಯ ಮೌಲ್ಯಮಾಪಕ ನಟರಾಜ್ (58) ಹಾಗೂ ಚಾಮರಾಜಪೇಟೆ ಉಪವಿಭಾಗದ ಕಂದಾಯ ಮೌಲ್ಯಮಾಪಕ ತಿಮ್ಮಯ್ಯ (54) ಅವರು ಕೋವಿಡ್‌ನಿಂದಾಗಿ ಮಂಗಳವಾರ ಮೃತಪಟ್ಟಿದ್ದರು.

ವಿಶ್ವನಾಥ್ ಅವರು ಹೃದಯಾಘಾತದಿಂದ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೂ ಸೋಂಕು ಇದ್ದುದು ಗೊತ್ತಾಗಿದೆ.

ವಿಶ್ವನಾಥ್‌ ಅವರು 1997ರಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಬಿಬಿಎಂಪಿಗೆ ಸೇರಿದ್ದರು. 2017ರಲ್ಲಿ ವ್ಯವಸ್ಥಾಪಕರಾಗಿ ಬಡ್ತಿ ಹೊಂದಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

‘ವಿಶ್ವನಾಥ್‌ ಒಂದು ವಾರದಿಂದ ಈಚೆಗೆ ಕೆಲಸಕ್ಕೆ ಬಂದಿರಲಿಲ್ಲ. ಆರೋಗ್ಯ ಸರಿ ಇಲ್ಲ; ರಜೆ ಬೇಕೆಂದು ಕಳೆದ ಸೋಮವಾರ ಕೇಳಿದ್ದರು. ಜ್ವರದ ಲಕ್ಷಣಗಳಿವೆ ಮೂರು ದಿನ ರಜೆ ಕೊಡಿ ಎಂದು ಕಳೆದ ಬುಧವಾರ ಕೇಳಿದ್ದರು. ಈಗ ಹುಷಾರಾಗಿದ್ದೇನೆ ನಾಳೆಯಿಂದ ಕೆಲಸಕ್ಕೆ ಬರುತ್ತೇನೆ ಎಂದು ನಿನ್ನೆ ಹೇಳಿದ್ದರು. ನಿನ್ನೆ ರಾತ್ರಿಯೂ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಆಗಲೂ ಚೆನ್ನಾಗಿಯೇ ಇದ್ದರು. ಬುಧವಾರ ಬೆಳಿಗ್ಗೆ 9.30 ಸುಮಾರಿಗೆ ಅವರಿಗೆ ಹೃದಯಾಘಾತವಾಗಿತ್ತು’ ಎಂದು ಮಹಾಲಕ್ಷ್ಮೀಪುರ ವಿಧಾನ ಸಭಾ ಕ್ಷೇತ್ರದ ಕಾರ್ಯಪಾಲಕ ಎಂಜಿನಿಯರ್‌ ತಿಮ್ಮರಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವರನ್ನು ತಕ್ಷಣವೇ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದೆವು. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಬಳಿಕ ಕೋವಿಡ್‌ ಪರೀಕ್ಷೆ ಮಾಡಿಸಿದಾಗ ಅವರಿಗೆ ಸೋಂಕು ಇದ್ದುದು ದೃಡಪಟ್ಟಿದೆ’ ಎಂದು ಅವರು ತಿಳಿಸಿದರು.

ಶೈಲೇಶ್‌ ಅವರು ಬುಧವಾರದ ಬಳಿಕ ಕಚೇರಿಗೆ ಬಂದಿರಲಿಲ್ಲ. ಅವರಿಗೆ ಪಾರ್ಶ್ವವಾಯುವಿನಿಂದಾಗಿ ಎಡಗೈ ಮತ್ತು ಎಡಗಾಲು ಅಷ್ಟಾಗಿ ಸ್ವಾಧೀನ ಇರಲಿಲ್ಲ. ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯೂ ಇತ್ತು ಎಂದು ಆಪ್ತ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

‘ಶೈಲೇಶ್‌ ಬುಧವಾರ ಮೈ ಹುಷಾರಿಲ್ಲ ಎಂದು ಕಚೇರಿಯಿಂದ ಬೇಗನೇ ಹೊರಟರು. ಮರು ದಿನ ಅವರಿಗೆ ಜ್ವರ ಇರುವುದಾಗಿ ಅವರ ಮನೆಯವರು ಕರೆ ಮಾಡಿ ತಿಳಿಸಿದ್ದರು. ಅನಾರೋಗ್ಯ ಉಲ್ಬಣಿಸಿದ್ದರಿಂದ ಅವರನ್ನು ಶನಿವಾರ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿತ್ತು’ ಎಂದು ಬಿಬಿಎಂಪಿ ಗೋವಿಂದರಾಜನಗರದ ಕಂದಾಯ ಅಧಿಕಾರಿ ಉಮಾ ತಿಳಿಸಿದರು.

ಆಸ್ಪತ್ರೆಗೆ ದಾಖಲಿಸುವವರೆಗೂ ಶೈಲೇಶ್‌ ಅವರಿಗೆ ಕೊರೋನಾ ಸೋಂಕು ಇರುವುದು ಗೊತ್ತಿರಲಿಲ್ಲ. ಅಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಸೊಂಕು ದೃಢಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು