ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹32.35 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ: ವಿದೇಶಿ ಪ್ರಜೆ ಸೇರಿದಂತೆ ಮೂವರ ಬಂಧನ

Published 16 ಏಪ್ರಿಲ್ 2024, 16:18 IST
Last Updated 16 ಏಪ್ರಿಲ್ 2024, 16:18 IST
ಅಕ್ಷರ ಗಾತ್ರ

ಬೆಂಗಳೂರು: ಮಾದಕ ವಸ್ತು ಮಾರಾಟ ಹಾಗೂ ಇ–ಸಿಗರೇಟ್ ಸಂಗ್ರಹಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೇರಳ ಮೂಲದ ವ್ಯಕ್ತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಕಮಿಷನರ್ ಬಿ. ದಯಾನಂದ್, ‘ಬೇಗೂರು ಪೊಲೀಸ್‌ ಠಾಣೆಯ ವ್ಯಾಪ್ತಿಯ ಸ್ಪೋರ್ಟ್ಸ್‌ ಕ್ಲಬ್‌ವೊಂದರಲ್ಲಿ ಈಜು ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ಆರೋಪಿ ರಿಜ್ವಾನ್‌ ರಜಾಕ್‌ (26). ಕೇರಳದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಈತನಿಂದ ₹10 ಲಕ್ಷ ಮೌಲ್ಯದ 5.5 ಕೆ.ಜಿ ಗಾಂಜಾ ಮತ್ತು ಮೊಬೈಲ್‌ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಎಂಟು ವರ್ಷಗಳ ಹಿಂದೆ ಕೇರಳದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಯು ಬೇಗೂರಿನಲ್ಲಿ ವಾಸವಾಗಿದ್ದ. ಕೆ.ಆರ್. ಪುರದ ಕ್ಲಬ್‌ವೊಂದರಲ್ಲಿ ಈಜು ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ. ಇದರೊಂದಿಗೆ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೇರಳ ಹಾಗೂ ನಗರದಲ್ಲಿರುವ ಡ್ರಗ್ಸ್‌ ಪೆಡ್ಲರ್‌ಗಳಿಂಧ ಗಾಂಜಾ ಖರೀದಿಸಿ ಪರಿಚಯಸ್ಥರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ. ಆರೋಪಿಯ ವಿರುದ್ಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇ–ಸಿಗರೇಟ್‌ ಮಾರಾಟ: ಆರೋಪಿ ಬಂಧನ

ನಿಷೇಧಿತ ಇ–ಸಿಗರೇಟ್‌, ವಿದೇಶಿ ಸಿಗರೇಟ್‌ಗಳು ಹಾಗೂ ವಿವಿಧ ಬಗೆಯ ಹುಕ್ಕಾ ಫ್ಲೇವರ್‌ಗಳನ್ನು ಸಂಗ್ರಹ ಮಾಡಿಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಸಲ್ಮಾನ್‌ (22) ಎಂಬಾತನನ್ನು ಬಂಧಿಸಲಾಗಿದೆ.

ಈ ಬಗ್ಗೆ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

‘ಆರೋಪಿಯು ಬಾಗಲಗುಂಟೆಯ ಬಾಡಿಗೆ ಮನೆಯಲ್ಲಿ ಇ–ಸಿಗರೇಟ್‌ ಮತ್ತು ಹುಕ್ಕಾ ಫ್ಲೇವರ್‌ಗಳನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದ. ₹22.35 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 291 ಇ–ಸಿಗರೇಟ್‌, 240 ವಿದೇಶಿ ಸಿಗರೇಟ್‌ ಪ್ಯಾಕ್‌ಗಳು, 360 ವಿವಿಧ ಬಗೆಯ ಹುಕ್ಕಾ ಫ್ಲೇವರ್‌ಗಳ ಹಾಗೂ 100 ಹುಕ್ಕಾ ಪಾಟ್‌ಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿಚಾರಣೆಯಲ್ಲಿ ಅಕ್ರಮ ದಾಸ್ತಾನು ಮಾಡಿದ ಇಬ್ಬರು ಮಾಲೀಕರು ಹಾಗೂ ಮತ್ತೊಬ್ಬ ಕೆಲಸಗಾರನ ಬಗ್ಗೆ ಮಾಹಿತಿ ನೀಡಿದ್ದಾನೆ. ಅವರಿಗಾಗೆ ಶೋಧ ಕಾರ್ಯ ಮುಂದುವರೆಸಲಾಗಿದೆ’ ಎಂದು ಬಿ. ದಯಾನಂದ ತಿಳಿಸಿದರು.

ಸಲ್ಮಾನ್‌
ಸಲ್ಮಾನ್‌

ಅಕ್ರಮ ವಾಸ: ವಿದೇಶಿ ಪ್ರಜೆ ಬಂಧನ

ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ನೈಜಿರಿಯಾದ ಪ್ರಜೆ ಪಿಡಲಿಪ್‌ ಕ್ಯಾಲಿಬ್‌ (28) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಸೊಂಡೆಕೊಪ್ಪದಲ್ಲಿರುವ ವಿದೀಶಿಗರ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ. 2014ರಲ್ಲಿ ಆರೋಪಿಯು ವಿದ್ಯಾರ್ಥಿ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ. ಮಂಗಳೂರಿನ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. 2023ರಲ್ಲಿ ಈತನ ವೀಸಾ ಅವಧಿ ಮುಕ್ತಾಗೊಂಡಿತ್ತು. ನವೀಕರಣ ಮಾಡಿಕೊಳ್ಳದೇ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದ ಎಂದು ಬಿ. ದಯಾನಂದ್ ತಿಳಿಸಿದದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT