ಮಂಗಳವಾರ, ಸೆಪ್ಟೆಂಬರ್ 28, 2021
25 °C
ಕಮರ್ಷಿಯಲ್‌ ಸ್ಟ್ರೀಟ್‌ ಪರಿಶೀಲಿಸಿದ ಸಚಿವ ಆರ್. ಅಶೋಕ

’ಗುತ್ತಿಗೆದಾರರೇ ನೆಲಹಾಸು ವೆಚ್ಚ ಭರಿಸಲಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿರುವ ನಗರದ ಕಮರ್ಷಿಯಲ್ ಸ್ಟ್ರೀಟ್‌ನ ನೆಲಹಾಸುಗಳ (ಟೈಲ್ಸ್‌) ಬಣ್ಣ ತಿಂಗಳೊಳಗೇ ಹಾಳಾಗಿದೆ. ಅವುಗಳನ್ನು ತೆರವುಗೊಳಿಸಿ, ಗುತ್ತಿಗೆದಾರರ ಹಣದಿಂದಲೇ ಹೊಸ ಟೈಲ್ಸ್‌ ಅಳವಡಿಸಿ, ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಿ’ ಎಂದು ಕಂದಾಯ ಸಚಿವ ಆರ್. ಅಶೋಕ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶಿವಾಜಿನಗರದಲ್ಲಿನ ಕಮರ್ಷಿಯಲ್‌ ಸ್ಟ್ರೀಟ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ‘ಈ ರಸ್ತೆಯು 450 ಮೀಟರ್ ಉದ್ದವಿದ್ದು, ಸ್ಮಾರ್ಟ್ ಸಿಟಿ ರಸ್ತೆ ವತಿಯಿಂದ ₹5.5 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗತ್ತಿಕೊಳ್ಳಲಾಗಿದೆ. ರಸ್ತೆಗೆ ಹೊಂದಿಕೆಯಾಗುವ ಅಡ್ಡರಸ್ತೆಗಳನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದರು.

‘ಕಮರ್ಷಿಯಲ್ ಸ್ಟ್ರೀಟ್ ರಸ್ತೆಗೆ ಯಾವುದೇ ಹೆಚ್ಚುವರಿ ಹಣ ವ್ಯಯಿಸುವುದಿಲ್ಲ. ಕಳಪೆ ಟೈಲ್ಸ್ ಅಳವಡಿಸಿರುವುದರಿಂದ ಅವರೇ ಈ ವೆಚ್ಚವನ್ನು ಭರಿಸಬೇಕು. ಮೂರು ವರ್ಷಗಳ ಕಾಲ ಗುತ್ತಿಗೆದಾರರೇ ರಸ್ತೆಯ ನಿರ್ವಹಣೆ ಮಾಡಲಿದ್ದಾರೆ’ ಎಂದರು. 

‘ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಒಎಫ್‌ಸಿಗಳನ್ನೂ ಅಳವಡಿಸಲಾಗಿದೆ ಅಂಗಡಿಗಳಿಗೆ ಮಳೆ ನೀರು ನುಗ್ಗದ ಹಾಗೆ ಮಳೆ ಬಿದ್ದ ನೀರು ಸರಾಗವಾಗಿ ಕಾಲುವೆಗೆ ಹರಿಯುವ ವ್ಯವಸ್ಥೆ ಮಾಡಲಾಗಿದೆ. ಇರುವ ರಸ್ತೆಯನ್ನು ತ್ವರಿತಗತಿಯಲ್ಲಿ ದುರಸ್ತಿಗೊಳಿಸಿ ಮಾದರಿ ರಸ್ತೆಯನ್ನಾಗಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

ರಾಜಕಾಲುವೆ ಪರಿಶೀಲನೆ:

ಹಲಸೂರು ಕೆರೆ ಬಳಿಯ ಗುರುದ್ವಾರ ಜಂಕ್ಷನ್ ಮುಂಭಾಗದ ರಾಜಕಾಲುವೆಯನ್ನು ಪರಿಶೀಲನೆ ಮಾಡಿ, ’ಮಳೆಗಾಲದ ವೇಲೆ ನೀರು ಸರಾಗವಾಗಿ ಹರಿದು ಹೋಗಬೇಕು. ಈ ಭಾಗದಲ್ಲಿ ಯಾವುದೇ ಸಮಸ್ಯೆ ಆಗಬಾರದು. ಕಾಲುವೆಯಲ್ಲಿ ತುಂಬಿರುವ ಹೂಳನ್ನು ಕಾಲ ಕಾಲಕ್ಕೆ ತೆರವುಗೊಳಿಸುತ್ತಿರಬೇಕು‘ ಎಂದು ಸೂಚನೆ ನೀಡಿದರು.

ಶಾಸಕ ರಿಜ್ವಾನ್‌ ಅರ್ಷದ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್,  ಮುಖ್ಯ ಆಯುಕ್ತ ಗೌರವ್ ಗುಪ್ತ, ಪೂರ್ವವಲಯ ಆಯುಕ್ತ ಮನೋಜ್ ಜೈನ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಪೂರ್ವ ವಲಯ ಜಂಟಿ ಆಯುಕ್ತರಾದ ಪಲ್ಲವಿ, ವಲಯ ಮುಖ್ಯ ಎಂಜಿನಿಯರ್ ಪ್ರಭಾಕರ್, ಸ್ಮಾರ್ಟ್ ಸಿಟಿ ಮುಖ್ಯ ಎಂಜಿನಿಯರ್ ಬಿ.ಎಸ್‌. ಪ್ರಹ್ಲಾದ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು