ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮದುವೆ ಫೋಟೊ–ವಿಡಿಯೊ ವಿಚಾರಕ್ಕೆ ಹಲ್ಲೆ: ಪ್ರಕರಣ ದಾಖಲು

Published 19 ಮೇ 2024, 16:13 IST
Last Updated 19 ಮೇ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಮದುವೆ ಸಮಾರಂಭದ ಊಟದ ಸಂದರ್ಭದಲ್ಲಿ ಫೋಟೊ ಹಾಗೂ ವಿಡಿಯೊ ತೆಗೆಯುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಫೋಟೊಗ್ರಾಫರ್– ವಿಡಿಯೊಗ್ರಾಫರ್ ಮೇಲೆ ಹಲ್ಲೆ ಮಾಡಲಾಗಿದೆ. ಈ ಬಗ್ಗೆ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶಿವಾಜಿನಗರದ ಶಮ್ಸ್ ಕನ್ವೆನ್ಶನ್ ಸಭಾಭವನದಲ್ಲಿ ಶನಿವಾರ ರಾತ್ರಿ ಗಲಾಟೆ ನಡೆದಿದೆ. ಫೋಟೊ–ವಿಡಿಯೊ ಜವಾಬ್ದಾರಿ ವಹಿಸಿಕೊಂಡಿದ್ದ ಜಯಂತ್ ಹಾಗೂ ರಘು ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಗಾಯಗೊಂಡಿರುವ ಅವರಿಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಘಟನೆ ಸಂಬಂಧ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಹಾಲ್‌ನಲ್ಲಿ ಕೆಲವರು ಊಟ ಮಾಡುತ್ತಿದ್ದರು. ಜಯಂತ್ ಹಾಗೂ ರಘು, ಊಟ ಮಾಡುತ್ತಿದ್ದವರ ವಿಡಿಯೊ–ಫೋಟೊ ತೆಗೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಮೂವರು ಆರೋಪಿಗಳು ತಮ್ಮ ಫೋಟೊ ಹಾಗೂ ವಿಡಿಯೊ ಚೆನ್ನಾಗಿ ತೆಗೆಯುತ್ತಿಲ್ಲವೆಂದು ಹೇಳಿ ಗಲಾಟೆ ಮಾಡಿದ್ದರು. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.’

‘ಆರೋಪಿಗಳು, ಊಟದ ತಟ್ಟೆಯಿಂದ ಜಯಂತ್–ರಘು ಅವರಿಗೆ ಹೊಡೆದಿದ್ದರು. ನಂತರ, ಹಲ್ಲೆ ಸಹ ಮಾಡಿದ್ದರು. ಗಲಾಟೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಜಯಂತ್ ಹಾಗೂ ರಘು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ’ ಎಂದು ತಿಳಿಸಿದರು.

‘ಮೂವರೂ ಆರೋಪಿಗಳ ಗುರುತು ಪತ್ತೆಯಾಗಿದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT