ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಉದ್ದಿಮೆ ಪರವಾನಗಿ ಇನ್ನು ಸ್ವಯಂ ನವೀಕರಣ

ತಪ್ಪಲಿದೆ ಕಚೇರಿ ಅಲೆದಾಟ * ಆನ್‌ಲೈನ್‌ನಲ್ಲೇ ಶುಲ್ಕ ಪಾವತಿ ವ್ಯವಸ್ಥೆ
Last Updated 12 ಅಕ್ಟೋಬರ್ 2020, 14:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿಯನ್ನು ಇ–ಪಾವತಿ ಆಧರಿಸಿ ಸ್ವಯಂ ನವೀಕರಣ ಮಾಡುವ ವ್ಯವಸ್ಥೆಯನ್ನು ಸೋಮವಾರದಿಂದ ಜಾರಿಗೊಳಿಸಲಾಗಿದೆ ಎಂದು ಆಯುಕ್ತ ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

ಉದ್ದಿಮೆ ಪರವಾನಗಿಗಳನ್ನು ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ ಕಾಯ್ದೆ ಪ್ರಕಾರ ನವೀಕರಿಸುವುದು ಮತ್ತೊಂದು ಸುತ್ತಿನ ನಿಬಂಧನೆಯಂತೆ ಚಾಲ್ತಿಯಲ್ಲಿತ್ತು. ಈ ವ್ಯವಸ್ಥೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಪರವಾನಗಿ ನವೀಕರಣ ಕುರಿತಂತೆ ಈಗಿರುವ ಪದ್ಧತಿಯನ್ನು ಸರಳೀಕರಿಸಬೇಕು ಹಾಗೂ ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಿ ಸ್ವಯಂನವೀಕರಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹಣಕಾಸು ಸಚಿವಾಲಯವು ಸಲಹೆ ನೀಡಿತ್ತು. ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲೇ ಪಾವತಿಸಿ ಸ್ವಯಂನವೀಕರಿಸಲು ಅವಕಾಶ ಕಲ್ಪಿಸುವ ಮೂಲಕ ಪಾರದರ್ಶಕ ವ್ಯವಸ್ಥೆ ಅಳವಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಶಿಫಾರಸು ಮಾಡಿದ್ದರು.

ರಾಜ್ಯ ಸರ್ಕಾರವು ಉದ್ಯಮಗಳಿಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ನಿಯಮಗಳನ್ನು ಸರಳೀಕರಿಸುತ್ತಿದೆ. ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದು, ಇದರ ಅಂಗವಾಗಿ ಉದ್ದಿಮೆ ಪರವಾನಗಿ ನವೀಕರಣ ವ್ಯವಸ್ಥೆಯನ್ನೂ ಸುಲಭಗೊಳಿಸಲಾಗಿದೆ.

‘ನಗರ ಸ್ಥಳೀಯಾಡಳಿತ ಸಂಸ್ಥೆಯಿಂದ ನೀಡಲಾದ ಉದ್ದಿಮೆ ಪರವಾನಗಿಯನ್ನು ಇನ್ನು ಯಾರದೇ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದಂತೆ ಹಾಗೂಅಧಿಕಾರಿಗಳ ವಿವೇಚನೆಗೆ ಆಸ್ಪದ ಇಲ್ಲದಂತೆ ಆನ್‌ಲೈನ್‌ನಲ್ಲೇ ಪಾರದರ್ಶಕವಾಗಿ ಸ್ವಯಂ ನವೀಕರಣ ಮಾಡಬಹುದು. ಬಿಬಿಎಂಪಿಯ ಪೋರ್ಟಲ್‌ನಿಂದ ಡಿಜಿಟಲ್‌ ಸಹಿಯನ್ನು ಒಳಗೊಂಡ ಉದ್ದಿಮೆ ನವೀಕರಣದ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ಅವರು ಕಚೇರಿಗೆ ಹೋಗಬೇಕಾಗಿಲ್ಲ. ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗಿಲ್ಲ. ಮಾಲೀಕರನ್ನು ಕಚೇರಿಗೆ ಕರೆಸುವುದಕ್ಕೆ, ಅವರಿಂದ ವಿವರಣೆ ಪಡೆಯುವುದಕ್ಕೆ ಇನ್ನು ಅಧಿಕಾರಿಗಳಿಗೆ ಅವಕಾಶ ಇರುವುದಿಲ್ಲ. ಪರವಾನಗಿ ನವೀಕರಿಸಬೇಕೋ ಬೇಡವೋ ಎಂಬುದು ಉದ್ದಿಮೆ ಮಾಲೀಕರೇ ನಿರ್ಧರಿಸಬಹುದು’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

ಆನ್‌ಲೈನ್‌ನಲ್ಲೇ ಪರವಾನಗಿ ನವೀಕರಣಕ್ಕೆ ಈ ಹಿಂದೆಯೂ ಅವಕಾಶವಿತ್ತಾದರೂ ಅಧಿಕಾರಿಗಳು ಉದ್ದಿಮೆದಾರರನ್ನು ಅನಗತ್ಯವಾಗಿ ಕಚೇರಿಗೆ ಕರೆಸಿಕೊಳ್ಳುತ್ತಿದ್ದರು. ಆಫ್‌ಲೈನ್‌ನಲ್ಲೇ ಪರವಾನಗಿ ನವೀಕರಿಸುವಂತೆ ಒತ್ತಡ ಹೇರುತ್ತಿದ್ದರು. ಲಂಚಕ್ಕೂ ಬೇಡಿಕೆ ಸಲ್ಲಿಸಿದ ಬಗ್ಗೆ ಕೆಲವು ಉದ್ದಿಮೆದಾರರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT