ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೆ ಕಾದಿರುವ ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್

ಕಾಮಗಾರಿ ಬಹುತೇಕ ಪೂರ್ಣ: ಉದ್ಘಾಟನೆಗೆ ದಿನಾಂಕ ನಿಗದಿ ಬಾಕಿ
Last Updated 18 ಮಾರ್ಚ್ 2021, 19:57 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಕೋಚಿಂಗ್ ಟರ್ಮಿನಲ್ ಲೋಕಾರ್ಪಣೆಗೆ ಸಿದ್ಧವಾಗಿದೆ. ವಿಮಾನ ನಿಲ್ದಾಣದ ಮಾದರಿಯ ಸೌಕರ್ಯಗಳೊಂದಿಗೆ ತಲೆ ಎತ್ತಿ ನಿಂತಿರುವ ರೈಲು ನಿಲ್ದಾಣ, ಉದ್ಘಾಟನೆಗೆ ಕಾಯುತ್ತಿದೆ.

ರಸ್ತೆಯಿಂದ ನಿಲ್ದಾಣದ ಆವರಣದ ಕಡೆಗೆ ಸಾಗುತ್ತಿದ್ದಂತೆ ವಿಶಾಲವಾದ ವಾಹನ ನಿಲುಗಡೆ ತಾಣ ಎದುರಾಗುತ್ತದೆ. 250 ಕಾರುಗಳು, 900 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಇದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಹೋಲುವ ವಿನ್ಯಾಸದ ಚಾವಣಿ ನಿರ್ಮಾಣವಾಗಿದೆ.

ಮುಂಭಾಗದಲ್ಲಿ ಸಣ್ಣ ಉದ್ಯಾನದ ಜೊತೆಗೆ ನೀರು ಚಿಮ್ಮುವ ಕಾರಂಜಿಯೊಂದು ನಿರ್ಮಾಣವಾಗಿದೆ. ಅದರ ಪಕ್ಕದಲ್ಲಿ ‘ಐ ಲವ್ ಬೆಂಗಳೂರು’ ಎಂಬ ಆಕರ್ಷಕವಾದ ಫಲಕ ಅಳವಡಿಸಲಾಗಿದೆ.

ಒಳಾಂಗಣ (ಕಾನ್‌ಕೋರ್ಸ್‌) ಪ್ರವೇಶಿಸಿದರೆ ಮೊದಲ ಮಹಡಿಯಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಅಲ್ಲಿಗೆ ತೆರಳಲು ಲಿಫ್ಟ್ ಮತ್ತು ಎಸ್ಕಲೇಟರ್ ವ್ಯವಸ್ಥೆ ಇದೆ. ಅಲ್ಲಿಯೇ ಕಾಫಿ, ತಿಂಡಿ ಮತ್ತು ಆಹಾರದ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ರೈಲು ಗಾಡಿ ಎಲ್ಲಿದೆ, ಎಷ್ಟು ಗಂಟೆಗೆ ಬರಲಿದೆ ಎಂಬ ನೈಜ ಸಮಯದ ಮಾಹಿತಿ ಒದಗಿಸಲು ಡಿಜಿಟಲ್ ಫಲಕಗಳನ್ನು ಅಳವಡಿಸಲಾಗಿದೆ. ಎರಡೂ ಮಹಡಿಗಳಿಗೂ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕ ರೈಲುಗಳಿಗೆ 7 ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿದೆ. ಒಂದು ಪ್ಲಾಟ್‌ಫಾರಂನಿಂದ ಇನ್ನೊಂದು ಪ್ಲಾಟ್‌ಫಾರಂ ತಲುಪಲು ಸಬ್‌ವೇ ಮತ್ತು ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಮೆಟ್ರೊ ರೈಲು ನಿಲ್ದಾಣಗಳ ಮಾದರಿಯಲ್ಲಿ ಎಲ್ಲ ಪ್ಲಾಟ್‌ಫಾರಂಗಳಿಗೂ ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯ ಕಲ್ಪಿಸಲಾಗಿದೆ.

ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನಿಲ್ದಾಣ ಸುತ್ತಮುತ್ತಲ ಜನರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. 2015–16ನೇ ಸಾಲಿನಲ್ಲಿ ಈ ನಿಲ್ದಾಣಕ್ಕೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿತ್ತು. 2017ರಿಂದ ಕಾಮಗಾರಿ ಆರಂಭವಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಗೆ ದಿನಾಂಕ ನಿಗದಿಯಾಗುವುದಷ್ಟೇ ಬಾಕಿ ಇದೆ.

ಕಾಮಗಾರಿ ಮುಗಿದರೂ ಮೀನಮೇಷ

ಕಾಮಗಾರಿ ಮುಗಿದರೂ ಈ ನಿಲ್ದಾಣದಿಂದ ರೈಲುಗಳ ಕಾರ್ಯಾಚರಣೆಗೆ ಮೀನಮೇಷ ಎಣಿಸಲಾಗುತ್ತಿದೆ ಎಂದು ರೈಲ್ವೆ ಹೋರಾಟಗಾರರು ಬೇಸರ ವ್ಯಕ್ತಪಡಿಸುತ್ತಾರೆ.

‘ಕಾರ್ಯಾಚರಣೆ ಆರಂಭ ಯಾವಾಗ, ಅದಕ್ಕಿರುವ ತೊಡಕುಗಳೇನು, ಅಗತ್ಯ ಇರುವ ಸಿಬ್ಬಂದಿ ನೇಮಕವಾಗಿದೆಯೇ ಎಂಬುದನ್ನು ಅಧಿಕಾರಿಗಳು ಖಚಿತವಾಗಿ ಹೇಳುತ್ತಿಲ್ಲ’ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ ತಿಳಿಸಿದರು.

ಈ ರೈಲು ನಿಲ್ದಾಣಕ್ಕೆ ಬರಲು ಸಮರ್ಪಕ ಸಂಪರ್ಕ ರಸ್ತೆ ಇಲ್ಲದಿರುವುದು ಈ ವಿಳಂಬಕ್ಕೆ ಕಾರಣ ಇರಬಹುದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ, ‘ಹಾಲಿ ಇರುವ ಸಿಬ್ಬಂದಿಯನ್ನೇ ಈ ನಿಲ್ದಾಣಕ್ಕೆ ಬಳಸಿಕೊಳ್ಳಲಾಗುವುದು. ಎಲ್ಲವೂ ಸಿದ್ಧವಿದ್ದು, ಉದ್ಘಾಟನೆಗೆ ದಿನಾಂಕ ನಿಗದಿಯಷ್ಟೇ ಬಾಕಿ ಇದೆ’ ಎಂದು ಸ್ಪಷ್ಟಪಡಿಸಿದರು.

ದಿನಕ್ಕೆ 50 ರೈಲು ಕಾರ್ಯಾಚರಣೆಗೆ ಅವಕಾಶ

ಪ್ರತಿ ದಿನ 50 ರೈಲುಗಳು ಬಂದು ಹೋಗಲು ಸಾಧ್ಯವಾಗುವಷ್ಟು ವ್ಯವಸ್ಥೆ ಈ ನಿಲ್ದಾಣದಲ್ಲಿ ಇದೆ. ಈ ನಿಲ್ದಾಣ ಸಾರ್ವಜನಿಕ ಸೇವೆಗೆ ಲಭ್ಯವಾದರೆ ಕೆಎಸ್‌ಆರ್‌ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣಕ್ಕೆ ಇರುವ ಒತ್ತಡ ಕಡಿಮೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ದೆಹಲಿ, ಚೆನ್ನೈ, ಹೈದರಾಬಾದ್, ಮುಂಬೈ, ಹುಬ್ಬಳ್ಳಿ ಕಡೆಗೆ ಇದೇ ನಿಲ್ದಾಣದಿಂದ ನೇರವಾಗಿ ರೈಲುಗಳ ಕಾರ್ಯಾಚರಣೆ ಆರಂಭಿಸಲು ಸಾಧ್ಯವಿದೆ. ಆಗ ಎರಡೂ ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಅಲ್ಲಿ ಅಗತ್ಯ ಇರುವ ಹೊಸ ಮಾರ್ಗದ ರೈಲುಗಳ ಕಾರ್ಯಾಚರಣೆಗೆ ಅನುಕೂಲ ಆಗಲಿದೆ ಎಂಬುದು ರೈಲ್ವೆ ಇಲಾಖೆಯ ಲೆಕ್ಕಾಚಾರ.

ತಡೆ ರಹಿತ ಗೂ‌ಡ್ಸ್ ರೈಲುಗಳ ಸಂಚಾರಕ್ಕೆ ಅವಕಾಶ ಇರುವ ಬೆಂಗಳೂರಿನ ಮೊದಲ ರೈಲು ನಿಲ್ದಾಣ ಇದಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಅಂಕಿ–ಅಂಶ

₹314 ಕೋಟಿ

ಟರ್ಮಿನಲ್ ನಿರ್ಮಾಣ ವೆಚ್ಚ

50 ರೈಲುಗಳು

ಪ್ರತಿದಿನ ಕಾರ್ಯಾಚರಣೆಗೆ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT