ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತರಿ ಎದೆಗೆ ತಗುಲಿ ತಂದೆ ಸಾವು

ಮದ್ಯದ ಅಮಲಿನಲ್ಲಿ ಪಿಯಾನೊ ನುಡಿಸುವ ವಿಷಯದಲ್ಲಿ ಮಗಳ ಜೊತೆ ಜಗಳ
Last Updated 23 ಜುಲೈ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿದ ಮತ್ತಿನಲ್ಲಿ 15ರ ಹರೆಯದ ಮಗಳ ಜೊತೆ ಜಗಳ ಮಾಡಿದ ವೇಳೆ ಆಕೆಯ ಕೈಯಲ್ಲಿದ್ದ ಕತ್ತರಿ ಆಕಸ್ಮಿಕವಾಗಿ ಎದೆಗೆ ತಗುಲಿ ತಂದೆ ಮೃತಪಟ್ಟ ಘಟನೆ ಬನ್ನೇರುಘಟ್ಟ ಮುಖ್ಯರಸ್ತೆಯ ಮಂತ್ರಿ ಪ್ಯಾರಡೈಸ್‌ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಸಪ್ತಕ್ ಬ್ಯಾನರ್ಜಿ (46) ಮೃತರು. ‘ಬುಧವಾರ ಮಧ್ಯರಾತ್ರಿಯ ಬಳಿಕ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಲಾಗಿದೆ. ಈ ಕುರಿತು ಮೈಕೋಲೆಔಟ್ ಠಾಣೆ ಪೊಲೀಸರು, ಉದ್ದೇಶಪೂರ್ವಕವಲ್ಲದ ಪ್ರಕರಣ ದಾಖಲಿಸಿ, ಮೃತನ ಮಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ ಜೋಷಿ ತಿಳಿಸಿದರು.

ಪಶ್ಚಿಮ ಬಂಗಾಳದವರಾದ ಸಪ್ತಕ್ ಬ್ಯಾನರ್ಜಿ ಅವರ ಪತ್ನಿ ಒಂಬತ್ತು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ, ತಮ್ಮ 15 ವರ್ಷದ ಪುತ್ರಿ ಮತ್ತು 9 ವರ್ಷದ ಮಗನ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ಸಪ್ತಕ್‌ ನೆಲೆಸಿದ್ದರು. ಪತ್ನಿ ಮೃತಪಟ್ಟ ಬಳಿಕ ಮಕ್ಕಳ‌ ಪಾಲನೆಗಾಗಿ ಕೆಲಸ ತೊರೆದಿದ್ದ ಅವರು ಮನೆಯ ಬಾಡಿಗೆ ಹಣದಲ್ಲಿ ಜೀವನ ಸಾಗಿಸುತ್ತಿದ್ದರು.

ಮದ್ಯ ವ್ಯಸನಿಯಾಗಿದ್ದ ಅವರು, ಇಬ್ಬರು ಮಕ್ಕಳನ್ನೂ ಶಾಲೆಗೆ ಕಳುಹಿಸುತ್ತಿರಲಿಲ್ಲ. ದಿನಾ ರಾತ್ರಿ ಕುಡಿದು ಬಂದು ಮಕ್ಕಳ‌ ಜತೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ.

ಎಂದಿನಂತೆಯೇ ಬುಧವಾರ (ಜುಲೈ 22) ಮಧ್ಯರಾತ್ರಿ ಕುಡಿದು ಮನೆಗೆ ಬಂದಿದ್ದ ಸಪ್ತಕ್, ಪಿಯಾನೊ ನುಡಿಸಲು ಆರಂಭಿಸಿದ್ದರು. ಮಲಗಲು ತೊಂದರೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಮಗಳು, ‌ಪಿಯಾನೊ ಬಂದ್ ಮಾಡಿದ್ದಳು. ಈ ವೇಳೆ, ಮಗಳ ಮಾತನ್ನು ಲೆಕ್ಕಿಸದೆ ಪಿಯಾನೊ ತೆರೆದುಕೊಂಡು ನುಡಿಸಲು ಮುಂದಾಗಿದ್ದರು. ಆಗ ಮತ್ತೆ‌ ಬಂದ್ ಮಾಡಿದ್ದಾಳೆ. ಆಗ ಅವರಿಬ್ಬರ ಮಧ್ಯೆ ಜಗಳ ನಡೆದಿದೆ. ಮಗಳಿಗೆ ಥಳಿಸಲು ಸಪ್ತಕ್‌ ಮುಂದಾಗಿದ್ದರು. ಈ ವೇಳೆ ಆಕೆಯ ಕೈಯಲ್ಲಿದ್ದ ಕತ್ತರಿ ತಂದೆಯ ಎದೆಗೆ ತಗುಲಿದೆ.

ತಂದೆ ಬಂದು ಹೊಡೆಯಬಹುದು ಎಂಬ ಭಯದಿಂದ ಮಗಳು ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಳು. ಕೆಲ ಸಮಯದ ಬಳಿಕ ಹೊರಬಂದು ನೋಡಿದಾಗ ತಂದೆ ನೆಲದ ಮೇಲೆ ಕುಸಿದು ಬಿದ್ದಿರುವುದು ಕಂಡಿದೆ. ಮಾತನಾಡಿಸಲು ಯತ್ನಿಸಿದ್ದು ತಂದೆಗೆ ಎಚ್ಚರವಾಗದಿದ್ದಾಗ ಗಾಬರಿಗೊಂಡ ಬಾಲಕಿ, ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಅವರು ಬಂದು ನೋಡಿದಾಗ ಸಪ್ತಕ್ ಮೃತ
ಪಟ್ಟಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT