ಮಂಗಳವಾರ, ಮೇ 18, 2021
22 °C
ರಾಜೀವ್‌ ಗಾಂಧಿ ಆಸ್ಪತ್ರೆ, ಕ್ಷಯ ರೋಗ ಕೇಂದ್ರದ ₹200 ಕೋಟಿ ಜಾಗಕ್ಕೆ ಭೂಗಳ್ಳರ ಕಣ್ಣು

ಬೆಂಗಳೂರು: ಭೂಕಬಳಿಕೆಗೆ ಭಾನುವಾರದ ದಾಖಲೆ!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಧಿಕೃತ ಸಾಗುವಳಿ ಸಕ್ರಮಗೊಳಿಸಲು ಬೆಂಗಳೂರು ಉತ್ತರ ತಹಶೀಲ್ದಾರ್ ಭಾನುವಾರವೇ ವರದಿ ನೀಡುತ್ತಾರೆ. ಉಪವಿಭಾಗಾಧಿಕಾರಿಯವರು ಭಾನುವಾರವೇ ಅನಧಿಕೃತ ವಾಸ್ತವ್ಯ ಸಕ್ರಮಕ್ಕೆ ಶಿಫಾರಸು ಮಾಡುತ್ತಾರೆ. ನಗರ ಜಿಲ್ಲಾಧಿಕಾರಿ ಅವರು ಭಾನುವಾರವೇ ಸಕ್ರಮಗೊಳಿಸುತ್ತಾರೆ!

ಲಾಲ್‌ಬಾಗ್ ಸಮೀಪದ ಸುಮಾರು ₹200 ಕೋಟಿ ಮೌಲ್ಯದ 4 ಎಕರೆ 18 ಗುಂಟೆ ಜಮೀನು ಕಬಳಿಸಲು ಭೂಗಳ್ಳರು ಸೃಷ್ಟಿಸಿರುವ ನಕಲಿ ದಾಖಲೆಗಳ ಸ್ಯಾಂಪಲ್‌ ಇದು. ಅವರು ಕಣ್ಣಿಟ್ಟಿದ್ದು ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಹಾಗೂ ಕ್ಷಯರೋಗ ಸಂಶೋಧನಾ ಕೇಂದ್ರದ ಜಾಗದ ಮೇಲೆ.

ಕಂದಾಯ ಇಲಾಖೆ ಅಧಿಕಾರಿಗಳು ಭಾನುವಾರ ಜಾಗ ಮಂಜೂರು ಮಾಡಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌, ನಕಲಿ ದಾಖಲೆಗಳನ್ನು ಸೃಷ್ಟಿಸಿದ 10 ಮಂದಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ. ಭೂಸ್ವಾಧೀನವೇ ಆಗಿಲ್ಲ ಎಂದು ಆರೋಪಿಗಳಿಗೆ 2010ರಲ್ಲಿ ಹಿಂಬರಹ ಕೊಟ್ಟ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತಿತರ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ನಗರದಲ್ಲಿ 1944ರಲ್ಲಿ ಕ್ಷಯರೋಗ ‍ಪ್ರಕರಣಗಳು ವ್ಯಾಪಕವಾಗಿದ್ದವು. ಆಗ 93 ಎಕರೆ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಲಾಲ್‌ಬಾಗ್‌ ಸಮೀಪದ ಸರ್ವೆ ಸಂಖ್ಯೆ 24ರಲ್ಲಿ ಮುನಿನಂಜಮ್ಮ ಅವರ 4 ಎಕರೆ 18 ಗುಂಟೆ ಜಾಗವೂ ಅದರಲ್ಲಿ ಸೇರಿತ್ತು. ಒಂದೇ ದಿನ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ವಾಧೀನ ಮಾಡಲಾಯಿತು. ಮುನಿನಂಜಮ್ಮ ಅವರಿಗೆ ₹2,070 ಪರಿಹಾರ ನೀಡಲಾಯಿತು. ಪರಿಹಾರದ ಮೊತ್ತ
ಕಡಿಮೆಯಾಯಿತು ಎಂದು ಮುನಿನಂಜಮ್ಮ ನ್ಯಾಯಾಲಯದ ಮೊರೆ ಹೋದರು. ಹೆಚ್ಚುವರಿಯಾಗಿ ₹1,950 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತು. ಪರಿಹಾರ ನೀಡಿದ ಬಳಿಕವೇ ಅಲ್ಲಿ ಆಸ್ಪತ್ರೆ ಹಾಗೂ ಕಾಂಪೌಂಡ್‌ ನಿರ್ಮಿಸಲಾಯಿತು. ಸ್ವಲ್ಪ ಜಾಗದಲ್ಲಿ ಯಾವುದೇ ಕಟ್ಟಡ
ನಿರ್ಮಾಣವಾಗಿರಲಿಲ್ಲ.

50 ವರ್ಷಗಳ ಬಳಿಕ ತಗಾದೆ

ಮುನಿನಂಜಮ್ಮ ನಿಧನರಾದ ಬಳಿಕ ಪುತ್ರರು ಹಾಗೂ ಮೊಮ್ಮಕ್ಕಳು ಜಾಗ ತಮಗೆ ಸೇರಿದ್ದು ಎಂದು ತಗಾದೆ ಎತ್ತುತ್ತಾರೆ. ಈ ನಡುವೆ, ಈ ಜಾಗದಲ್ಲಿ ಈ ಹಿಂದೆ ಕೃಷಿ ಮಾಡುತ್ತಿದ್ದು, 3 ಎಕರೆ 8 ಗುಂಟೆ ತಮಗೆ ಸೇರಿದ್ದೆಂದು ಆರ್‌.ಲಕ್ಷ್ಮಣ  ಹಾಗೂ 1 ಎಕರೆ 10 ಗುಂಟೆ ತಮಗೆ ಸೇರಿದ್ದೆಂದು ವಿ.ಎಸ್‌.ಕೃಷ್ಣ ಹಕ್ಕು ಮಂಡಿಸುತ್ತಾರೆ. ಜಾಗ ಖರೀದಿಸಲು ಕೆ.ಎನ್‌.ವಸಂತ ಅವರು ಅವರಿಬ್ಬರ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಇವರಿಬ್ಬರ ದಾಖಲೆಗಳು ನಕಲಿ ಎಂದು ಗೊತ್ತಾದ ಕೂಡಲೇ ವಸಂತ ಅವರು ಮುನಿನಂಜಮ್ಮ ಕುಟುಂಬದವರೊಂದಿಗೆ ‘ವ್ಯವಹಾರ’ ಕುದುರಿಸುತ್ತಾರೆ. 

ಈ ಜಾಗಕ್ಕೆ ಖಾತೆ ಮಾಡಿಕೊಡುವಂತೆ ಅವರು ಬಿಬಿಎಂಪಿಗೆ ಅರ್ಜಿ ಸಲ್ಲಿಸುತ್ತಾರೆ. ಭೂನೈಜತೆ ಬಗ್ಗೆ ಪರಿಶೀಲಿಸುವಂತೆ ಬಿಬಿಎಂಪಿಯು ಜಿಲ್ಲಾಡಳಿತವನ್ನು ಕೋರುತ್ತದೆ. ಇದು ಸಂಶೋಧನಾ ಕೇಂದ್ರಕ್ಕೆ ಸೇರಿದ ಜಾಗ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಇದನ್ನು ಪ್ರಶ್ನಿಸಿ ಅರ್ಜಿದಾರರು ಸಿವಿಲ್‌ ಕೋರ್ಟ್‌ ಮೊರೆ ಹೋಗುತ್ತಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಸೂಚನೆ ನೀಡುತ್ತದೆ. ಈ ಸಂದರ್ಭದಲ್ಲೇ, ಈ ಜಾಗ ಭೂಸ್ವಾಧೀನ ಆಗಿರುವ ಬಗ್ಗೆ ದಾಖಲೆಗಳೇ ಇಲ್ಲ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಹಿಂಬರಹ ನೀಡುತ್ತಾರೆ. ಇದನ್ನಾಧರಿಸಿ ಆಗಿನ ವಿಶೇಷ ಜಿಲ್ಲಾಧಿಕಾರಿ, ವಸಂತ ಹೆಸರಿಗೆ 3 ಎಕರೆ 8 ಗುಂಟೆ ಹಾಗೂ ಮುನಿನಂಜಮ್ಮ ಕುಟುಂಬದವರ ಹೆಸರಿಗೆ 1 ಎಕರೆ 8 ಗುಂಟೆಗೆ ದಾಖಲೆ ಮಾಡಿಕೊಡುವಂತೆ ಆದೇಶಿಸುತ್ತಾರೆ.

ಈ ಆದೇಶವನ್ನು ಪ್ರಶ್ನಿಸಿ ಕ್ಷಯರೋಗ ಸಂಶೋಧನ ಕೇಂದ್ರದವರು 2010ರಲ್ಲಿ ಹೈಕೋರ್ಟ್‌ ಮೆಟ್ಟಿಲೇರುತ್ತಾರೆ. ವಾಸ್ತವ ಪರಿಶೀಲನೆ ಮಾಡುವಂತೆ ವಕೀಲರ ಕಮಿಷನ್‌ಗೆ ನಿರ್ದೇಶನ ನೀಡುತ್ತದೆ. ‘ಆಸ್ಪತ್ರೆಯ ಆವರಣ ಗೋಡೆ 60 ವರ್ಷಗಳಷ್ಟು ಹಳೆಯದು. ಭೂಸ್ವಾಧೀನ ಮಾಡಿರುವ ಬಗ್ಗೆ ದಾಖಲೆಗಳು ಇವೆ’ ಎಂದು ಕಮಿಷನ್‌ ವರದಿ ಸಲ್ಲಿಸುತ್ತದೆ. ಬಳಿಕ ಹೈಕೋರ್ಟ್‌ ಭೂ ನೈಜತೆ ಪರಿಶೀಲನೆ ಮಾಡಿ ಪ್ರಕರಣ ಇತ್ಯರ್ಥ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುತ್ತದೆ.

ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಯತ್ನ

‘ನಮ್ಮ ಕುಟುಂಬದವರು ಅನಧಿಕೃತ ಸಾಗುವಳಿ ಮಾಡುತ್ತಿದ್ದರು. ತಹಶೀಲ್ದಾರ್ 1972ರ ಏಪ್ರಿಲ್‌ 16ರಂದು ಅದನ್ನು ಸಕ್ರಮಗೊಳಿಸಲು ವರದಿ ನೀಡಿದ್ದಾರೆ ಎಂದು ವಿ.ಎಸ್‌.ಕೃಷ್ಣ ದಾಖಲೆಗಳನ್ನು ಸಲ್ಲಿಸಿದ್ದರು. ಉಪವಿಭಾಗಾಧಿಕಾರಿಯೂ 1972ರ ಮೇ 5ರಂದು ವರದಿ ಸಲ್ಲಿಸಿದ್ದಾರೆ.

1972ರ ಅಕ್ಟೋಬರ್‌ 8ರಂದು ಜಿಲ್ಲಾಧಿಕಾರಿಯವರು ಜಾಗ ಸಕ್ರಮಗೊಳಿಸಿದ್ದಾರೆ ಎಂದೂ ಹೇಳಿದ್ದರು. ಅದೇ ರೀತಿ ಲಕ್ಷ್ಮಣ ಅವರು 2003ರಲ್ಲಿ ಆಸ್ತಿ ತೆರಿಗೆ ಪಾವತಿಯ ದಾಖಲೆಗಳನ್ನು ಸಲ್ಲಿಸಿದ್ದಾರೆ. 1979ರ ಡಿಸೆಂಬರ್‌ 30ರ ಚಲನ್‌ ಹಾಗೂ ಪಟ್ಟಾ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲ ದಿನಗಳು ಭಾನುವಾರವೇ ಬಂದಿವೆ. ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಇದರಿಂದ ಸಾಬೀತಾಗಿದೆ ಎಂದು ಜಗದೀಶ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಯಾರ ವಿರುದ್ಧ ಕ್ರಿಮಿನಲ್‌ ಪ್ರಕರಣ

ಕೆ.ಎನ್‌.ವಸಂತ, ಆರ್‌.ಲಕ್ಷ್ಮಣ, ಎಂ.ಬಾಬು, ವಿ.ಎಸ್‌.ಕೃಷ್ಣ ಹಾಗೂ ಮುನಿನಂಜಮ್ಮ ಕುಟುಂಬದ ಯಶೋದಾ, ಎಸ್‌.ವಿ.ವಾಸುದೇವ್, ಎಸ್‌.ವಿ.ಲಕ್ಷ್ಮಣ ದೇವ್‌, ಎಸ್‌.ವಿ.ಪ್ರಭುದೇವ್‌, ಎಸ್‌.ವಿ.ಮಮತಾ ಮತ್ತು ಮಹಾಲಿಂಗಪ್ಪ ಗೌಡರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು