ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ- 2023 ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಸಂಶೋಧನೆಗೆ ಪೂರಕವಾದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
Published 29 ನವೆಂಬರ್ 2023, 5:58 IST
Last Updated 29 ನವೆಂಬರ್ 2023, 5:58 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸಂಶೋಧನೆಗೆ ಪೂರಕವಾದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಗರದ ಬೆಂಗಳೂರು ಅರಮನೆ ಆವರಣದಲ್ಲಿ ಬುಧವಾರ ಆರಂಭವಾದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ- 2023 ಉದ್ಘಾಟಿಸಿ ಮಾತನಾಡಿದ ಅವರು, 'ಮುಂದಿನ ಹಂತದ ಸಂಶೋಧನೆಯನ್ನು ನಮ್ಮ ಸರ್ಕಾರ ಉತ್ತೇಜಿಸಲಿದೆ. ಇದಕ್ಕಾಗಿ ಉದ್ದಿಮೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಆದ್ಯತೆ ನೀಡಲಾಗುವುದು. ಸರ್ಕಾರದ ನೀತಿಗಳಲ್ಲೂ ಅಗತ್ಯ ಬದಲಾವಣೆ ಮಾಡಲಾಗುವುದು' ಎಂದರು.

ಕರ್ನಾಟಕವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಈ ಕ್ಷೇತ್ರದ 5,500 ಕಂಪನಿಗಳು ರಾಜ್ಯದಲ್ಲಿವೆ. 750 ಬಹುರಾಷ್ಟ್ರೀಯ ಕಂಪನಿಗಳೂ ಇಲ್ಲಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರವು ರಾಜ್ಯದಲ್ಲಿ 43 ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಿಗಳನ್ನು ಹೊಂದಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಉದ್ಯಮಸ್ನೇಹಿ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡುತ್ತಿದೆ. ಭೂ ಪರಿವರ್ತನೆಯ ಸರಳೀಕರಣ, ಏಕಗವಾಕ್ಷಿ ಮೂಲಕ‌ ಅನುಮೋದನೆ ನೀಡಲಾಗುತ್ತಿದೆ. ಬೆಂಗಳೂರಿನ ಹೊರಗೆ ಹೂಡಿಕೆದಾರರಿಗೆ ವಿಶೇಷ ಉತ್ತೇಜನ ನೀಡುವ ಮೂಲಕ ಡಿಜಿಟಲ್ ಬೆಳವಣಿಗೆಯಲ್ಲಿನ ಅಸಮತೋಲನ ತಗ್ಗಿಸಲಾಗುತ್ತಿದೆ ಎಂದರು.

ದೇಶದಲ್ಲೇ ಮೊದಲು ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ರಾಜ್ಯ ಕರ್ನಾಟಕ. ಶೀಘ್ರದಲ್ಲಿ ಹೊಸ‌ ಜೈವಿಕ ತಂತ್ರಜ್ಞಾನ ನೀತಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಅನಿಮೇಷನ್ ವಿಷ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳಿವೆ. ಈ ಕ್ಷೇತ್ರವನ್ನು ಉತ್ತೇಜಿಸುವುದಕ್ಕಾಗಿ ಎವಿಜಿಸಿ- ಎಕ್ಸ್ ಆರ್ ನೀತಿಯನ್ನೂ ಜಾರಿಗೊಳಿಸಲಾಗುವುದು ಎಂದರು.

ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 85,000 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ರಫ್ತು ಮಾಡುತ್ತಿದೆ. ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT