ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಸ್ವಾಧೀನಕ್ಕೆ ನೀಡದ ಬಿಬಿಎಂಪಿ: ಹೈಕೋರ್ಟ್ ತರಾಟೆ

Last Updated 13 ಸೆಪ್ಟೆಂಬರ್ 2021, 16:32 IST
ಅಕ್ಷರ ಗಾತ್ರ

ಬೆಂಗಳೂರು: ಆಶ್ರಯ ಯೋಜನೆಯಡಿ ಅಂಗವಿಕಲರೊಬ್ಬರಿಗೆ 10 ವರ್ಷಗಳ ಹಿಂದೆಯೇ ಮಂಜೂರು ಮಾಡಿದ ನಿವೇಶನವನ್ನು ಸ್ವಾಧೀನಕ್ಕೆ ನೀಡದೆ ಸತಾಯಿಸುತ್ತಿರುವ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ಹೈಕೋರ್ಟ್‌ ಆದೇಶ ನೀಡಿ ಮೂರು ವರ್ಷಗಳು ಕಳೆದಿವೆ. ಆದರೂ, ಸ್ವಾಧೀನಕ್ಕೆ ನೀಡದ ಬಿಬಿಎಂಪಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಅಂಗವಿಕಲರಾದ ಅರ್ಜುನ್ ಸಾ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಗೆ ಖುದ್ದು ಹಾಜರಾಗುವಂತೆ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ಅದರಂತೆ ಗೌರವ್‌ ಗುಪ್ತ ವಿಚಾರಣೆಗೆ ಹಾಜರಾಗಿದ್ದರು.

‘ಅರ್ಜಿದಾರರು ಶೇ 90ರಷ್ಟು ಅಂಗವಿಕಲತೆಯಿಂದ ನರಳುತ್ತಿದ್ದಾರೆ. 2011ರಲ್ಲಿಯೇ ನಿವೇಶನ ಮಂಜೂರು ಮಾಡಿದ್ದರೂ ಈವರೆಗೆ ಸ್ವಾಧೀನಕ್ಕೆ ನೀಡಿಲ್ಲ. ಹೈಕೋರ್ಟ್‌ ಆದೇಶಕ್ಕೂ ಬೆಲೆ ಇಲ್ಲವೇ’ ಎಂದು ಪೀಠ ಪ್ರಶ್ನಿಸಿತು.

ಕ್ಷಮೆಯಾಚಿಸಿದ ಬಿಬಿಎಂಪಿ ಮುಖ್ಯ ಆಯುಕ್ತ, ‘ಅರ್ಜಿದಾರರಿಗೆ ನಿವೇಶನ ಹಸ್ತಾಂತರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ‘ನ್ಯಾಯಾಲಯದ ಆದೇಶ ಪಾಲಿಸದೆ ಇರುವುದು ಸರಿಯಲ್ಲ. ಒಂದೊಮ್ಮೆ ಪಾಲಿಸದಿದ್ದರೆ ನ್ಯಾಯಾಲಯ ಏನೆಂಬುದನ್ನು ತೋರಿಸಬೇಕಾಗುತ್ತದೆ’ ಎಂದು ಎಚ್ಚರಿಸಿತು.

ಆಶ್ರಯ ಯೋಜನೆಯಡಿ ನಿವೇಶನ ಕೋರಿ ಅರ್ಜುನ್ ಸಾ 2003ರಲ್ಲಿ ಅರ್ಜಿ ಸಲ್ಲಿಸಿದ್ದರು. ಉತ್ತರ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ ನಿವೇಶನ ಮಂಜೂರು ಮಾಡಿದ್ದ ಬಿಬಿಎಂಪಿ, ಸ್ವಾಧೀನಕ್ಕೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ರಾಜ್ಯ ಅಂಗವಿಕಲರ ಆಯುಕ್ತರ ಮುಂದೆ ಅರ್ಜುನ್ ಸಾ ಅರ್ಜಿ ಸಲ್ಲಿಸಿದ್ದರು. ಆಯುಕ್ತರ ಆದೇಶವನ್ನು ಬಿಬಿಎಂಪಿ ಪಾಲಿಸಿರಲಿಲ್ಲ. ಬಳಿಕ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕೂಡಲೇ ನಿವೇಶನ ಹಸ್ತಾಂತರಿಸುವಂತೆ 2018ರಲ್ಲಿ ಹೈಕೋರ್ಟ್ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT