ಶನಿವಾರ, ಜುಲೈ 31, 2021
26 °C

ಚಿಕಿತ್ಸೆಗಾಗಿ ಅಲೆದಾಟ: ಬಿಬಿಎಂಪಿ ಅಧಿಕಾರಿಗಳಿಗೂ ತಪ್ಪಿಲ್ಲ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಕಿತ್ಸೆಗಾಗಿ ದಾಖಲಾಗಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸುವ ಸಂಕಷ್ಟ ಜನಸಾಮಾನ್ಯರಿಗೆ ಅಷ್ಟೇ ಅಲ್ಲ. ಸ್ವತಃ ಬಿಬಿಎಂಪಿ ಅಧಿಕಾರಿಗಳೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಜೆ.ಪಿ.ನಗರ ವಾರ್ಡ್‌ನ ಸಹಾಯಕ ಕಂದಾಯ ಅಧಿಕಾರಿ ಶರಣಮ್ಮ ಎಂಬುವರು ಆಸ್ಪತ್ರೆಯ ಹಾಸಿಗೆಯಲ್ಲಿದ್ದುಕೊಂಡೇ ವಿಡಿಯೊ ಮಾಡಿ ತಾವು ಚಿಕಿತ್ಸೆ ಪಡೆಯಲು ಎದುರಿಸಿದ ಪಡಿಪಾಟಲನ್ನು ವಿವರಿಸಿದ್ದಾರೆ.

‘ಯಾರಿಂದಲೂ ಯಾವುದೇ ರೀತಿಯ ಸಹಾಯ ಸಿಗುತ್ತಿಲ್ಲ. ನಮ್ಮ ಬಗ್ಗೆ ನಾವೇ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಅವರು ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ. ಅವರು ಮಾಡಿರುವ ವಿಡಿಯೊ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಅವರ ವಿಡಿಯೊದಲ್ಲಿ ಹಂಚಿಕೊಂಡ ವಿವರ ಇಲ್ಲಿದೆ.

‘ನಮಸ್ಕಾರ. ನನಗೆ ವಾರದ ಹಿಂದೆ ಚಳಿ ಜ್ವರ ಬಂದಿತ್ತು. ಐದು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ಹೋದೆ. ಅಲ್ಲಿ ಆರೋಗ್ಯ ತಪಾಸಣೆ ನಡೆಸಲಿಲ್ಲ. ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹಿಂದಕ್ಕೆ ಕಳುಹಿಸಿದರು. ಹೀಗೆ ಐದು ದಿನದಲ್ಲಿ ಆಸ್ಪತ್ರೆಗಳನ್ನು ಸುತ್ತುತ್ತಲೇ ಪೂರ್ತಿ ನಿಶ್ಶಕ್ತಳಾಗಿದ್ದೇನೆ. ಬಳಿಕ ರಾಮಯ್ಯ ಆಸ್ಪತ್ರೆಗೂ ಹೋದೆ. ಅಲ್ಲೂ ಇದೇ ಉತ್ತರ. ನಾವು ನೋಡೋದೇ ಇಲ್ಲ. ನಮ್ಮಲ್ಲಿ ಹಾಸಿಗೆ ಇಲ್ಲ. ಏನು ಮಾಡ್ಕೋತೀರೋ ಮಾಡ್ಕೋಳ್ಳಿ’ ಎಂದರು.

‘ನಂತರ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಅಮೃತ ರಾಜ್‌ ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದೆ. ಕುಳಿತುಕೊಳ್ಳುವುದಕ್ಕೂ ಆಗುತ್ತಿಲ್ಲ. ನಿಲ್ಲುವುದಕ್ಕೂ ಆಗುತ್ತಿಲ್ಲ. ಮಲಗುವುದಕ್ಕೂ ಆಗುತ್ತಿಲ್ಲ. ಉಸಿರಾಟ ಸಮಸ್ಯೆ ಇದೆ ಎಂದು ತಿಳಿಸಿದೆ. ‘ನಾನು ಎಲ್ಲ ವ್ಯವಸ್ಥೆ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದ ಅವರು, ‘ಆಸ್ಟರ್‌ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಅಲ್ಲಿ ಅರ್ಧ ದಿನ ಕಾದೆ. ಅಲ್ಲೂ ಅದೇ ಉತ್ತರ. ನಮ್ಮ ಹತ್ತಿರ ಹಾಸಿಗೆ ಲಭ್ಯ ಇಲ್ಲ. ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಕಳುಹಿಸಿಕೊಟ್ಟರು. ‘ಏನಾದರೂ ವ್ಯವಸ್ಥೆ ಮಾಡಿ’ ಎಂದು ಅಂಗಲಾಚಿದೆ. ಆದರೂ ನನ್ನನ್ನು ಒಳಗೂ ಬಿಟಟ್ಟುಕೊಂಡಿಲ್ಲ. ಐದು ದಿನ ಓಡಾಡಿ ಪೂರ್ತಿ ಶಕ್ತಿಹೀನಳಾಗಿದ್ದೇನೆ’

‘ನನ್ನ ಪರಿಸ್ಥಿತಿಯನ್ನು ನಮ್ಮ ವಲಯದ ಕಂದಾಯ ಉಪ ಆಯುಕ್ತರ ಗಮನಕ್ಕೂ ತಂದೆ. ಉಸಿರಾಟಕ್ಕೂ ತೊಂದರೆ ಆಗುತ್ತಿದೆ. ಸಹಾಯ ಮಾಡಿ ಎಂದೆ. ಅವರು ಕಿಮ್ಸ್‌ ಆಸ್ಪತ್ರೆಗೆ ಹೋಗುವಂತೆ ಹೇಳಿದರು. ಅಲ್ಲಿ ಪರೀಕ್ಷೆ ಮಾಡಿಸಿದೆ. ನಿಶ್ಶಕ್ತಿಯಿಂದ ಕುಸಿದು ಕುಳಿತೆ. ನಂತರ ಸುರೇಶ್‌ ಸರ್‌ ಅವರಿಗೆ ಹೇಳಿದೆ. ಅವರು ವ್ಯವಸ್ಥೆ ಮಾಡಿಸುತ್ತೇನೆ ಎಂದು ಭರವಸೆ ನಿಡಿದರು. ನಂತರ ಮತ್ತೆ ಅಮೃತ್ ರಾಜ್‌ ಅವರ ಬಳಿ ‘ಕುಳಿತುಕೊಳ್ಳುವುದಕ್ಕೂ ಆಗದೇ ಬಿದ್ದು ಬಿಟ್ಟಿದ್ದೇನೆ. ನನ್ನ ಆರೋಗ್ಯಕ್ಕೆ ಏನಾದರೂ ಆದರೆ ಯಾರು ಜವಾಬ್ದಾರರು’ ಎಂದು ಅಳಲು ಹೇಳಿಕೊಂಡೆ.’

‘ಕಂದಾಯ ಇಲಾಖೆಯ ನಾವು ಒಂದೇ ಒಂದು ದಿನವೂ ರಜೆ ಪಡೆಯದೆಯೇ ದುಡಿದಿದ್ದೇವೆ. ಆದರೆ, ಆರೋಗ್ಯ ಸಮಸ್ಯೆ ಎದುರಾದಾಗ ಯಾರೂ ನೆರವಾಗುತ್ತಿಲ್ಲ. ನಿಮ್ಮ ಮಾತಿಗೂ ಯಾರೂ ಬೆಲೆ ಕೊಡುತ್ತಿಲ್ಲ. ಇನ್ನು ನಮ್ಮಂಥವರ ಮಾತನ್ನು ಯಾರು ಕೇಳುತ್ತಾರೆ’ ಎಂದು ಪ್ರಶ್ನಿಸಿದೆ. ಅಮೃತ್‌ರಾಜ್‌ ಅವರ ಮಾತಿಗೂ ವೈದ್ಯರೂ ಬೆಲೆ ಕೊಡಲಿಲ್ಲ. ಮತ್ತೆ ಆಸ್ಟರ್‌ ಆಸ್ಪತ್ರೆಗೆ ಹೋಗುವಂತೆ ಅವರು ಹೇಳಿದರು. ಅಲ್ಲಿ ಮತ್ತೆ ಅದೇ ರಾಗ ಹೇಳಿದರು. ಅರ್ಧ ದಿನವಾದರೂ ಚಿಕಿತ್ಸೆ ನೀಡಿ ಎಂದು ಕೋರಿದೆ. ‘ನಿಮಗೆ ಕೋವಿಡ್‌ ಸೊಂಕು ದೃಢಪಟ್ಟಿದೆ. ಬೇರೆ ಅಸ್ಪತ್ರೆಗೆ ಹೋಗಿ’ ಎಂದರು.’

‘ಬೇರೆ ಆಸ್ಪತ್ರೆಗಳಲ್ಲೂ ಹಾಸಿಗೆ ಇಲ್ಲ. ಕೊನೆಗೆ ಬ್ಯಾಟರಾಯನಪುರದಲ್ಲಿ ಪಾರೋಲೈಫ್‌ ಆಸ್ಪತ್ರೆ ವೈದ್ಯೆ ಡಾ.ಕವಿತಾ ನೆರವಿಗೆ ಬಂದರು. ಸದ್ಯಕ್ಕೆ ಇಲ್ಲಿ ದಾಖಲಾಗಿದ್ದೇನೆ. ನನಗೆ ಮಾತನಾಡುವುದಕ್ಕೂ ಆಗುತ್ತಿಲ್ಲ. ಎಲ್ಲೂ ಹಾಸಿಗೆ ಇಲ್ಲ ಎಂದರೆ ನಾವೇನು ಮಾಡಬೇಕು. ಅಧಿಕಾರಿಗಳಾದ ನಮಗೇ ಈ ಥರ ಆದರೆ, ನಾವು ಹೇಗೆ ಕೆಲಸ ಮಾಡಬೇಕು. ವೈಯಕ್ತಿಕವಾಗಿ ನಮಗೆ ಸಮಸ್ಯೆ ಎದುರಾದಾಗ ಯಾರೂ ನೆರವಾಗದಿದ್ದರೆ ಹೇಗೆ. ದಯವಿಟ್ಟು ನೆರವಾಗಿ’ ಎಂದು ಎಆರ್‌ಒ ಅವರು ವಿಡಿಯೊದಲ್ಲಿ ಅಂಗಲಾಚಿದ್ದಾರೆ.

‘ಪ್ರತ್ಯೇಕ ಆಸ್ಪತ್ರೆ ಒದಗಿಸದಿದ್ದರೆ ಸಾಮೂಹಿಕ ರಜೆ: ಬಿಬಿಎಂಪಿ ನೌಕರರ ಸಂಘ ಎಚ್ಚರಿಕೆ

‘ಕೋವಿಡ್‌ ಸೋಂಕು ದೃಢಪಟ್ಟ ಪೊಲೀಸ್‌ ಸಿಬ್ಬಂದಿಯ ಚಿಕಿತ್ಸೆಗಾಗಿ ಸರ್ಕಾರ ಪ್ರತ್ಯೇಕ ಆಸ್ಪತ್ರೆಯನ್ನು ವ್ಯವಸ್ಥೆ ಮಾಡಿದೆ. ಅದೇ ರೀತಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಬಿಬಿಎಂಪಿ ಸಿಬ್ಬಂದಿಗೆ ಸೋಂಕು ತಗುಲಿದರೆ, ಅವರ ಚಿಕಿತ್ಸೆಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಸೋಂಕು ದೃಢಪಟ್ಟ ಅಧಿಕಾರಿಗಳ ಮತ್ತು ನೌಕರರ ಜೊತೆ ನೇರ ಸಂಪರ್ಕ ಹೊಂದಿರುವ ಸಂಬಂಧಿಕರನ್ನು ಕ್ವಾರಂಟೈನ್‌ ಮಾಡಲು ಪಂಚಾತಾರಾ ಹೋಟೆಲ್‌ ಮೀಸಲಿಡಬೇಕು ’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತರಾಜ್‌ ಒತ್ತಾಯಿಸಿದ್ದಾರೆ.

‘ನಮ್ಮ ಬೇಡಿಕೆ ಈಡೇರಿಸದಿದ್ದರೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮೂಹಿಕ ರಜೆ ಹಾಕಲಿದ್ದೇವೆ. ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಿದ್ದೇವೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ

‘ಪಾಲಿಕೆಯಲ್ಲಿ ಇದುವರೆಗೆ 150ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಆತಂಕದಲ್ಲಿದ್ದಾರೆ. ಅದರೂ ನಮ್ಮವರ ಆರೋಗ್ಯದ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ. ಸಂಘದ ವತಿಯಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಕ್ರಮ ಕೈಗೊಂಡಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

**
ಬಿಬಿಎಂಪಿಯ 150ಕ್ಕೂ ಅಧಿಕ ಸಿಬ್ಬಂದಿ ಕೋವಿಡ್‌ಗೆ ಒಳಗಾಗಿದ್ದರೂ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಬೆಂಗಳೂರು ಉಸ್ತುವಾರಿ ಸಚಿವರು. ನಾಲ್ಕೈದು ಬಾರಿ ಮನವಿ ಸಲ್ಲಿಸಿದರೂ ಪಾಲಿಕೆ ಸಿಬ್ಬಂದಿಯ ಸಂಕಷ್ಟದ ಬಗ್ಗೆ ಅವರು ಸ್ಪಂದಿಸಿಲ್ಲ.
–ಎ.ಅಮೃತರಾಜ್‌, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು