ಮಂಗಳವಾರ, ಆಗಸ್ಟ್ 16, 2022
30 °C
ಬಿಬಿಎಂಪಿ ಮಸೂದೆಗೆ ಅಂಗೀಕಾರ * ಸುಪ್ರೀಂ ಕೋರ್ಟ್‌ಗೆ ಸರ್ಕಾರ ಮೇಲ್ಮನವಿ

ಚುನಾವಣೆ ಮುಂದೂಡಲು ಮಸೂದೆ ’ಅಸ್ತ್ರ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಹಾಗೂ ಪಾಲಿಕೆ ವ್ಯಾಪ್ತಿಯನ್ನು ಹಿಗ್ಗಿಸಲು ಅನುವು ಮಾಡುವ ’ಬಿಬಿಎಂಪಿ ಮಸೂದೆ– 2020‘ಕ್ಕೆ ವಿಧಾನಸಭೆಯಲ್ಲಿ ಗುರುವಾರ ಒಪ್ಪಿಗೆ ನೀಡಲಾಯಿತು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರ ಗೈರುಹಾಜರಿಯ ಮಧ್ಯೆಯೇ ಮಸೂದೆಯನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದರು. 

ಮಾರ್ಚ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾದ ಮಸೂದೆಗೆ ವಿರೋಧ ವ್ಯಕ್ತವಾದ ಕಾರಣ ಅದರ ವಿಶ್ಲೇಷಣೆಗೆ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಎಸ್‌.ರಘು ನೇತೃತ್ವದ ಸಮಿತಿಯು ಬುಧವಾರ ಅಂತಿಮ ವರದಿ ಸಲ್ಲಿಸಿತು.

ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾದ ಬಳಿಕ ಪಾಲಿಕೆಯ 198 ವಾರ್ಡ್‌ಗಳಿಗೆ ಆರು ವಾರಗಳಲ್ಲಿ ಚುನಾವಣಾ ಅಧಿಸೂಚನೆ ಪ್ರಕಟಿಸಬೇಕು ಎಂದು ಹೈಕೋರ್ಟ್‌ ಕಳೆದ ವಾರ ಆದೇಶಿಸಿತ್ತು. ಬಿಬಿಎಂಪಿ ಮಸೂದೆಯನ್ನು ಮುಂದಿಟ್ಟುಕೊಂಡು ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ’ಸುಪ್ರೀಂ ಕೋರ್ಟ್‌ಗೆ ಗುರುವಾರವೇ ಮೇಲ್ಮನವಿ ಸಲ್ಲಿಸಲಾಗಿದೆ‘ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.

ಜೆ.ಸಿ.ಮಾಧುಸ್ವಾಮಿ, ’ಬಿಬಿಎಂಪಿ ಗಡಿಯಾಚೆಗೆ ಒಂದು ಕಿ.ಮೀ. ಪರಿಧಿಯೊಳಗೆ ಇರುವ ಗ್ರಾಮ ಪಂಚಾಯಿತಿ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಬಹುದು ಎಂದು ಸಮಿತಿ ಶಿಫಾರಸು ಮಾಡಿದೆ. ಇದರಿಂದ ಕೆಲವು ಗೊಂದಲ ಉಂಟಾಗಿದೆ.  ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ 100 ಮೀಟರ್‌, 300 ಮೀಟರ್, 400 ಮೀಟರ್‌ ಪ್ರದೇಶವನ್ನು ಸೇರಿಸಲು ಅವಕಾಶ ನೀಡಲಾಗುತ್ತದೆ. ಇದನ್ನು ವಾರ್ಡ್‌ ಮರುವಿಂಗಣಾ ಸಮಿತಿ ನಿರ್ಧರಿಸುತ್ತದೆ. ಬಿಬಿಎಂಪಿ ಗಡಿಯಾಚೆ ಇರುವ ಸ್ಥಳೀಯ ಸಂಸ್ಥೆಗೆ ಸ್ವಯಂಪ್ರೇರಿತರಾಗಿ ಪಾಲಿಕೆ ವ್ಯಾಪ್ತಿಗೆ ಸೇರಲು ಅವಕಾಶ ಇದೆ‘ ಎಂದರು.

’ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 225ರಿಂದ 250ರ ವರೆಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿತ್ತು. ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಏರಿಸಲಾಗುತ್ತದೆ. ಜನಸಂಖ್ಯೆಯ ಆಧಾರದಲ್ಲಿ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗುತ್ತದೆ. 2–3 ವಿಧಾನಸಭಾ ಕ್ಷೇತ್ರಗಳಿಗೆ ವಾರ್ಡ್‌ ಹಂಚಿ ಹೋಗದಂತೆ ಎಚ್ಚರ ವಹಿಸಲಾಗುವುದು‘ ಎಂದು ಅವರು ಹೇಳಿದರು.

ಬಿಜೆಪಿಯ ಅರವಿಂದ ಲಿಂಬಾವಳಿ ಮಾತನಾಡಿ, ’2011ರ ಜನಗಣತಿಗೆ ಅನುಗುಣವಾಗಿ ವಾರ್ಡ್‌ ಮರುವಿಂಗಡಣೆ ಮಾಡುವುದು ಬೇಡ. ಕಳೆದ 10 ವರ್ಷಗಳಲ್ಲಿ ನಗರದ ಹೊರವಲಯದಲ್ಲಿ ಜನಸಂಖ್ಯೆ ವಿಪರೀತ ಹೆಚ್ಚಾಗಿದೆ. ಬೆಳ್ಳಂದೂರು, ಹೊರಮಾವು ವಾರ್ಡ್‌ಗಳಲ್ಲಿ ಜನಸಂಖ್ಯೆ 1 ಲಕ್ಷಕ್ಕೂ ಹೆಚ್ಚು ಇದೆ. ಮತದಾರರ ಪಟ್ಟಿಯ ಆಧಾರದಲ್ಲಿ ಮರುವಿಂಗಡಣೆ ಮಾಡಬೇಕು‘ ಎಂದು ಸಲಹೆ ನೀಡಿದರು.

’ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಮತ್ತಿತರ ಕಡೆಗಳಿಂದ ಪರಿಷತ್‌ ಸದಸ್ಯರಾಗಿ ಆಯ್ಕೆಯಾದವರಿಗೆ ಪಾಲಿಕೆ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು‘ ಎಂದು ಅವರು ಆಗ್ರಹಿಸಿದರು.

ಮುನಿರತ್ನ, ’ಇದೊಂದು ಉತ್ತಮ ಮಸೂದೆ. ಕೆಲವು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ ಜಾಸ್ತಿ ಇದೆ. ಇನ್ನು ಮುಂದೆ ವಾರ್ಡ್‌ಗಳ ವೈಜ್ಞಾನಿಕ ವಿಂಗಡಣೆ ಆಗಲಿದೆ‘ ಎಂದರು.

ಪಕ್ಷೇತರ ಸದಸ್ಯ ಶರತ್‌ ಬಚ್ಚೇಗೌಡ, ’ಶಾಸಕರ ನೇತೃತ್ವದ ಸಮಿತಿ ಹಾಗೂ ವಲಯ ಸಮಿತಿಗಳೆರಡೂ ಅಗತ್ಯ ಇರಲಿಲ್ಲ. ವಲಯ ಸಮಿತಿಗಳ ಸಂಖ್ಯೆಯನ್ನು 4–5ಕ್ಕೆ ಇಳಿಸಬೇಕು‘ ಎಂದು ಸಲಹೆ ನೀಡಿದರು.

ಮೇಯರ್ ಅಧಿಕಾರ ಅವಧಿ ಎಷ್ಟು?

ಮೇಯರ್ ಅಧಿಕಾರದ ಅವಧಿ 30 ತಿಂಗಳೇ ಅಥವಾ ಐದು ವರ್ಷಗಳೇ? ಮೇಯರ್ ಅಧಿಕಾರದ ಅವಧಿ ಮೂವತ್ತು ತಿಂಗಳು ಎಂದು ಜೆ.ಸಿ.ಮಾಧುಸ್ವಾಮಿ ಮಸೂದೆ ಮಂಡನೆ ವೇಳೆ ಹೇಳಿದರು. ಆದರೆ, ಮಸೂದೆಯ ಕನ್ನಡ ಪ್ರತಿಯಲ್ಲಿ ಮೇಯರ್ ಹಾಗೂ ಉಪಮೇಯರ್ ಅಧಿಕಾರದ ಅವಧಿ ಐದು ವರ್ಷಗಳು ಎಂದಿದೆ. ಆದರೆ ಇಂಗ್ಲಿಷ್‌ ಪ್ರತಿಯಲ್ಲಿ 30 ತಿಂಗಳುಗಳು ಎಂದಿದೆ.

ಮಸೂದೆಯ ಪ್ರಮುಖ ಅಂಶಗಳು

*ಮೇಯರ್‌ ಹಾಗೂ ಉಪಮೇಯರ್ ಅಧಿಕಾರಾವಧಿ 30 ತಿಂಗಳು

*ಪ್ರಧಾನ ಕಾರ್ಯದರ್ಶಿ ಅಧಿಕಾರಿಯನ್ನು ಮುಖ್ಯ ಆಯುಕ್ತರನ್ನಾಗಿ ನೇಮಕ

*ವಲಯ ಆಯುಕ್ತರನ್ನಾಗಿ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳ ನೇಮಕ

*ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕ್ಷೇತ್ರ ಸಮಾಲೋಚನಾ ಸಮಿತಿಗಳ ಸ್ಥಾಪನೆ. ಪಾಲಿಕೆ ಸದಸ್ಯರ ಜತೆಗೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಐವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ. ಇವರ ಅಧಿಕಾರದ ಅವಧಿ 30 ತಿಂಗಳುಗಳು

*ಪಾಲಿಕೆಯ ಪ್ರತಿಯೊಂದು ವಲಯದಲ್ಲಿ ವಲಯ ಸಮಿತಿಗಳ ಸ್ಥಾಪನೆ. ವಲಯದ ಸದಸ್ಯರೊಬ್ಬರು ಈ ಸಮಿತಿಗೆ ಅಧ್ಯಕ್ಷರು. ವಲಯ ಸಮಿತಿ ಸದಸ್ಯರ ಅಧಿಕಾರದ ಅವಧಿ 1 ವರ್ಷಗಳು.

*ಸ್ಥಾಯಿ ಸಮಿತಿಗಳ ಸಂಖ್ಯೆ ಎಂಟಕ್ಕೆ ಇಳಿಕೆ. ಈಗ 12 ಸ್ಥಾಯಿ ಸಮಿತಿಗಳು ಇವೆ.

*ಪ್ರತಿಯೊಂದು ವಾರ್ಡ್‌ಗೆ ವಾರ್ಡ್‌ ಸಮಿತಿ

*60X40 ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳುವುದು ಕಡ್ಡಾಯ.

*ಜಿಎಸ್‌ಟಿ ಬಂದ ಬಳಿಕ ಜಾಹೀರಾತು ಹಾಗೂ ಮನರಂಜನಾ ತೆರಿಗೆ ಹಾಕಲು ಅವಕಾಶ ಇರಲಿಲ್ಲ. ಜಾಹೀರಾತು ಹಾಗೂ ಮನರಂಜನಾ ಶುಲ್ಕ ಸಂಗ್ರಹಿಸಲು ಮಸೂದೆಯಲ್ಲಿ ಅನುವು ಮಾಡಿಕೊಡಲಾಗಿದೆ.

*ಅಪಾಯಕಾರಿ ಕ್ವಾರಿಗಳನ್ನು ತಡೆಯಲು ಬಿಬಿಎಂಪಿಗೆ ಅಧಿಕಾರ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು