ಸೋಮವಾರ, ಏಪ್ರಿಲ್ 19, 2021
23 °C
ನಗರದ ಹೊರವಲಯಗಳಲ್ಲಿ ತೀವ್ರ ಸಮಸ್ಯೆ * ಹೆಚ್ಚುತ್ತಿರುವ ಖಾಸಗಿ ಟ್ಯಾಂಕರ್ ಮಾಫಿಯಾ

ಬೇಸಿಗೆ ಶುರು: ಬೆಂಗಳೂರಿನಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಂತ್ರಜ್ಞಾನ ಕ್ಷೇತ್ರದಲ್ಲಿ ಜಗದ್ವಿಖ್ಯಾತವಾಗಿರುವ ಬೆಂಗಳೂರು ಕುಡಿಯುವ ನೀರಿನ ನಿರ್ವಹಣೆಯಲ್ಲಿ ಪದೇ ಪದೇ ಎಡವುತ್ತಲೇ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಬಿಸಿಲಿನ ಧಗೆ ಏರುತ್ತಿದ್ದಂತೆಯೇ ಇಲ್ಲಿ ನೀರಿನ ಸಮಸ್ಯೆಯೂ ಬಿಗಡಾಯಿಸಿದೆ. ಏಪ್ರಿಲ್‌ ಆರಂಭದಲ್ಲೇ ಟ್ಯಾಂಕರ್‌ ನೀರನ್ನು  ಅವಲಂಬಿಸಬೇಕಾದ ಸ್ಥಿತಿ ಹಲವೆಡೆ ಸೃಷ್ಟಿಯಾಗಿದೆ.

ಕುಡಿಯುವ ನೀರಿಗಾಗಿ 100 ಕಿ.ಮೀ. ದೂರದ ಕಾವೇರಿ ನದಿಯನ್ನೇ ನಂಬಿರುವ ರಾಜಧಾನಿಯಲ್ಲಿ ಬೇಸಿಗೆ ಬಂದರೆ ಈ ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ನಗರದ ಕೇಂದ್ರ ಭಾಗದಲ್ಲಿರುವ ಕೆಲವು ಪ್ರದೇಶಗಳಲ್ಲಿ ದಿನ ಬಿಟ್ಟು ದಿನ ನೀರು ಪೂರೈಕೆಯಾಗುತ್ತಿದ್ದರೆ, ಕಾವೇರಿ ನೀರಿನ ಸಂಪರ್ಕವಿಲ್ಲದ ಹೊರವಲಯದ ಪ್ರದೇಶಗಳು ನೀರಿಲ್ಲದೆ ಸಂಕಷ್ಟದಲ್ಲಿವೆ. ಕುಡಿಯುವ ನೀರಿನ ಬವಣೆ ಈ ನಗರದ ಜನಜೀವನದ ಮೇಲೆ ಮಾತ್ರವಲ್ಲ, ಇಲ್ಲಿನ ಬ್ರ್ಯಾಂಡ್‌ ಮೌಲ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಬಿಸಿಲಿನ ತಾಪಕ್ಕೆ ಹಲವು ಕೊಳವೆಬಾವಿಗಳು ಬರಿದಾಗುತ್ತಿವೆ. ಅಂತರ್ಜಲ ಮಟ್ಟವೂ ಕಡಿಮೆಯಾಗುತ್ತಿದೆ. ಜಲಮಂಡಳಿಯು ತನ್ನ 60 ಟ್ಯಾಂಕರ್‌ಗಳ ಮೂಲಕ ಕೆಲವು ಪ್ರದೇಶಗಳಿಗೆ ನೀರು ಪೂರೈಸುತ್ತಿದೆಯಾದರೂ, ಅದು ಏನಕ್ಕೂ ಸಾಲುವುದಿಲ್ಲ. ಕಾವೇರಿ ನೀರು ಪೂರೈಕೆಯ ‘ರಭಸ’ ಕೂಡ ಪವಾಡವೇನೋ ಎಂಬಂತೆ ತಗ್ಗಿ ಬಿಡುತ್ತದೆ. ಆಗ ಪ್ರತ್ಯಕ್ಷವಾಗುವುದು ಖಾಸಗಿ ಟ್ಯಾಂಕರ್‌ಗಳು. ತಮ್ಮ ‘ಸೀಸನ್‌’ ಶುರುವಾಯಿತೇನೋ ಎಂಬಂತೆ ಟ್ಯಾಂಕರ್‌ಗಳ ‘ಮೆರವಣಿಗೆ’ ಈ ಪ್ರದೇಶಗಳಲ್ಲಿ ಪ್ರಾರಂಭವಾಗುತ್ತದೆ.

ಬಡ–ಮಧ್ಯಮ ವರ್ಗಕ್ಕೆ ಸಂಕಷ್ಟ: ದುಡ್ಡಿದ್ದವರು ವಾರಕ್ಕೆ ಎರಡು ಬಾರಿಯಾದರೂ ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ, ಬಡ–ಮಧ್ಯಮ ವರ್ಗಕ್ಕೆ ನೀರಿನ ಶುಲ್ಕ ಪಾವತಿಸುವುದೇ ಹೊರೆಯಾಗಿದೆ. ಜಲಮಂಡಳಿಯಿಂದ ಪೂರೈಸುತ್ತಿರುವ ನೀರಿನ ಪ್ರಮಾಣ ಕಡಿಮೆಯಾದರೂ, ಶುಲ್ಕ ಮಾತ್ರ ಮೊದಲಿನಷ್ಟೇ ಬರುತ್ತಿದೆ.

ನೀರು ಹಿಡಿಯಲು ಕಾಯಬೇಕಾಗಿರುವುದರಿಂದ ಕೆಲಸಕ್ಕೆ ಹೋಗಲಾಗದೆ ಅನಿವಾರ್ಯವಾಗಿ ರಜೆಯನ್ನೂ ಹಾಕಬೇಕಾಗಿದೆ. ರಜೆ ಹಾಕಿದರೆ ಒಂದು ದಿನದ ದುಡಿಮೆ ಹೋಗುತ್ತದೆ, ಹಾಕದಿದ್ದರೆ ನೀರು ಸಿಗುವುದಿಲ್ಲ ಎಂಬ ಸಂದಿಗ್ಧದಲ್ಲಿ ಅನೇಕರಿದ್ದಾರೆ.

ಅಸಮರ್ಪಕ ನಿರ್ವಹಣೆ: ‘ಕೊಳವೆ ಬಾವಿ ಮತ್ತು ಇತರೆ ಜಲಮೂಲಗಳ ನಿರ್ವಹಣೆಯಲ್ಲಿ ಬಿಬಿಎಂಪಿ ಮತ್ತು ಜಲಮಂಡಳಿ ವಿಫಲವಾಗಿವೆ. ಅಸಮರ್ಪಕ ನಿರ್ವಹಣೆಯ ಪರಿಣಾಮ ನೀರಿನ ಸಮಸ್ಯೆ ತೀವ್ರವಾಗುತ್ತಿದೆ’ ಎಂದು ಸಾರ್ವಜನಿಕರು ದೂರುತ್ತಾರೆ.

ಜಲಮಂಡಳಿಯು ಸಾವಿರಾರು ಕೊಳವೆಬಾವಿಗಳನ್ನು ನಿರ್ವಹಿಸುತ್ತಿದೆ. ಆದರೆ, ಬೇಸಿಗೆಯಲ್ಲಿ ಮಾತ್ರ ಇವುಗಳ ಅಗತ್ಯ ಮಂಡಳಿಗೆ ಕಾಣುತ್ತದೆ. ಉಳಿದ ಸಮಯದಲ್ಲಿ ಇವುಗಳತ್ತ ಗಮನವೇ ಇರುವುದಿಲ್ಲ. ಆಗಿಂದಾಗ್ಗೆ ಇವುಗಳನ್ನು ಪರೀಕ್ಷಿಸುವ, ದುರಸ್ತಿಗೊಳಿಸುವ ಕಾರ್ಯ ನಡೆಯುತ್ತಿಲ್ಲ. ಪ್ರತಿ ಪ್ರದೇಶದಲ್ಲಿಯೂ ಕೊಳವೆ ಬಾವಿ ಕೊರೆಯಲು ಬಿಬಿಎಂಪಿ ಅನುಮತಿ ನೀಡುತ್ತಿದೆ. ಪ್ರಭಾವಿ ಜನಪ್ರತಿನಿಧಿಗಳು ಮತ್ತು ಶ್ರೀಮಂತರು ಇರುವ ಕಡೆಗೆ ಅಗತ್ಯಕ್ಕಿಂತ ಹೆಚ್ಚಾಗಿ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಹಿಂದುಳಿದ ಪ್ರದೇಶಗಳಲ್ಲಿ ಹೆಸರಿಗೆ ಮಾತ್ರ ಕೊಳವೆಬಾವಿಗಳಿರುತ್ತವೆ. ನೀರು ಬರುವುದಿಲ್ಲ ಎಂದು ಗೊತ್ತಿದ್ದರೂ ‘ಲೆಕ್ಕ’ ತೋರಿಸಲು ಬೋರ್‌ವೆಲ್‌ಗಳನ್ನು ಕೊರೆಯಲಾಗಿರುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಎರಡು ವರ್ಷ ಸಮಸ್ಯೆ: ನಗರದ ಜನಸಂಖ್ಯೆ ಆಧರಿಸಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಒಂದೊಂದು ಹಂತದಲ್ಲಿ ನೀರು ಪೂರೈಸುವ ಕಾರ್ಯವನ್ನು ಜಲಮಂಡಳಿಯು ಮಾಡುತ್ತಿದೆ. ಸದ್ಯ ಕಾವೇರಿ ನಾಲ್ಕು ಹಂತದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಐದನೇ ಹಂತದ ಯೋಜನೆ ಪ್ರಗತಿಯಲ್ಲಿದೆ. 2020ರ ಜನವರಿಯಿಂದ ಪ್ರಾರಂಭವಾಗುವ ಈ ಕಾಮಗಾರಿ 2023ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೂ ಈ 110 ಹಳ್ಳಿಗಳಲ್ಲಿ ಇದೇ ಸಮಸ್ಯೆ ಮುಂದುವರಿಯುವುದು ನಿಶ್ಚಿತ.

ಮರುಪೂರಣ, ಮಳೆ ನೀರು ಸಂಗ್ರಹ ಅವಶ್ಯ: ಕಾವೇರಿ ನದಿಯಿಂದ ಪೂರೈಕೆಯಾಗುತ್ತಿರುವ ನೀರು ನಗರದ ಒಟ್ಟು ಬೇಡಿಕೆಯ ಅರ್ಧದಷ್ಟಿದ್ದರೂ, ಬಹುತೇಕರು ಬಳಕೆಗೆ ಕೊಳವೆಬಾವಿಗಳ ನೀರನ್ನು ಹೆಚ್ಚು ಉಪಯೋಗಿಸುತ್ತಿರುವುದರಿಂದ ಸಮಸ್ಯೆ ಅಷ್ಟಾಗಿ ಕಾಣುತ್ತಿಲ್ಲ. ಆದರೆ, ತಾಪಮಾನ ಹೆಚ್ಚಿದ ಸಂದರ್ಭದಲ್ಲಿ ಬರಿದಾಗುವ ಈ ಕೊಳವೆಬಾವಿಗಳ ಮರುಪೂರಣ ಕಾರ್ಯ ಆಗಬೇಕಾಗಿದೆ. ಬಿಬಿಎಂಪಿ ಮತ್ತು ಜಲಮಂಡಳಿ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಪ್ರವೃತ್ತವಾಗಬೇಕಾಗಿದೆ. 

ಇಂಗುಗುಂಡಿಗಳನ್ನು ನಿರ್ಮಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕೆಲಸವಾಗಬೇಕಾಗಿದೆ. ಅದರೊಂದಿಗೆ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡುವ ಕಾರ್ಯವೂ ಆಗಬೇಕಾಗಿದೆ. ನಗರದಲ್ಲಿನ ಹಲವು ಸಂಘ–ಸಂಸ್ಥೆಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ. ಆದರೆ, ಸರ್ಕಾರದ ಕಚೇರಿ–ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹವನ್ನು ಕಡ್ಡಾಯ ಮಾಡುವ ಕಾರ್ಯವನ್ನು ಬಿಬಿಎಂಪಿ ಮಾಡಬೇಕು.

ವಸತಿ ಸಮುಚ್ಚಯಗಳಲ್ಲಿ ಮಳೆ ನೀರು ಸಂಗ್ರಹ ಮಾಡದವರಿಗೆ ಜಲಮಂಡಳಿ ದಂಡ ವಿಧಿಸಬೇಕು ಮತ್ತು ಇಷ್ಟಕ್ಕೇ ಕೈ ತೊಳೆದುಕೊಳ್ಳದೇ ತ್ಯಾಜ್ಯ ನೀರು ನಿರ್ವಹಣೆ, ಮಳೆ ನೀರು ಸಂಗ್ರಹದ ಮಹತ್ವದ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂಬುದು ನೀರಿನ ಜತನ ಬಳಕೆಗಾಗಿ ಒತ್ತಾಯಿಸುತ್ತಿರುವ ಜಲ ಸಂರಕ್ಷಣಾ ಕಾರ್ಯಕರ್ತರ ಅಂಬೋಣ.

ಸಾರ್ವಜನಿಕರು ಏನಂತಾರೆ?

ನೀರಿಗೇ ತಿಂಗಳಿಗೆ ₹ 3 ಸಾವಿರ ಬೇಕು!
20 ವರ್ಷಗಳಿಂದ ನೀರಿನ ಸಮಸ್ಯೆ ಇರಲಿಲ್ಲ. ಒಂದು ತಿಂಗಳಿಂದ ತುಂಬಾ ಸಮಸ್ಯೆಯಾಗಿದೆ. ಕಾವೇರಿ ನೀರಿನ ‘ಫೋರ್ಸ್‌’ ತುಂಬಾ ಕಡಿಮೆಯಾಗಿದೆ. ಮೂರು ಮನೆಯಿಂದ ಒಮ್ಮೆಗೆ ಟ್ಯಾಂಕರ್‌ ನೀರಿಗೆ ₹400ರಿಂದ ₹500 ಕೊಡಬೇಕು. ತಿಂಗಳಿಗೆ ಮೂರು ಬಾರಿ ಟ್ಯಾಂಕರ್‌ ತರಿಸಿದರೆ ₹1,500 ಬೇಕು. ಆದರೆ, ಜಲಮಂಡಳಿಯಿಂದ ನೀರಿನ ಬಿಲ್‌ ಮಾತ್ರ ಮೊದಲಿನಷ್ಟೇ ಬರುತ್ತಿದೆ. ತಿಂಗಳಿಗೆ ₹3 ಸಾವಿರ ನೀರಿಗೇ ಖರ್ಚು ಮಾಡಬೇಕಾಗಿದೆ.
–ರೇಖಾ, ಹಳೆಯ ಮಂಜುನಾಥ ಬಡಾವಣೆ

**
ನೀರಿಗಾಗಿ ಹೆಚ್ಚು ದುಡಿಯಬೇಕು!
ನಮ್ಮ ಬಡಾವಣೆ ಪೂರ್ತಿ ಕುಡಿಯುವ ನೀರಿಗಾಗಿ ಖಾಸಗಿ ಟ್ಯಾಂಕರ್‌ಗಳನ್ನೇ ಅವಲಂಬಿಸಬೇಕಾಗಿದೆ. ಒಂದು ಲೋಡ್‌ಗೆ ₹450ರಿಂದ ₹600ವರೆಗೆ ಕೇಳುತ್ತಾರೆ. ನಾನು ಆಟೊ ಚಾಲಕ. ಟ್ಯಾಂಕರ್‌ನವರಿಗೆ ಕೊಡಲೆಂದೇ ಹೆಚ್ಚು ದುಡಿಯುವ ಅನಿವಾರ್ಯ ಎದುರಾಗಿದೆ. ಕೋವಿಡ್‌ನಂತಹ ಸಂದರ್ಭದಲ್ಲಿ ತುಂಬಾ ಕಷ್ಟವಾಗುತ್ತಿದೆ. ಉಚಿತವಾಗಿ ನೀರು ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
-ಸತೀಶ್‌, ಶಾಂತಿ ಬಡಾವಣೆ

**
ಬೇಸಿಗೆಯಲ್ಲಿ ಹೆಚ್ಚು ದುಡ್ಡು
ನೀರಿನ ಸಮಸ್ಯೆ ತುಂಬಾ ಇದೆ. ಮೊದಲು 15 ದಿನಕ್ಕೊಮ್ಮೆ ಒಂದು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೆವು. ಈಗ ವಾರಕ್ಕೊಮ್ಮೆ ನೀರು ಹಾಕಿಸಿಕೊಳ್ಳಬೇಕಾಗಿದೆ. ಅದೂ ಸಾಕಾಗುತ್ತಿಲ್ಲ. ಬೇಸಿಗೆ ಬಂದ ಕೂಡಲೇ ಟ್ಯಾಂಕರ್‌ನವರು ಹೆಚ್ಚು ಹಣ ಕೇಳುತ್ತಾರೆ. ಸಮಸ್ಯೆ ಅರಿತು ಸರ್ಕಾರ ಕ್ರಮ ಕೈಗೊಳ್ಳಬೇಕು.
-ಕಾರ್ತಿಕ್‌, ರಾಮಮೂರ್ತಿ ನಗರ

**
ಅಗತ್ಯವಿರುವಲ್ಲಿ ಮಾತ್ರ ಕೊಳವೆಬಾವಿ ಹಾಕಿ
ನೀರಿಗಾಗಿ ಜಗಳವಾಗುವುದು ಸಾಮಾನ್ಯವಾಗಿದೆ. ಮನವಿ ಮಾಡಿದ ತಕ್ಷಣ ಎಲ್ಲೆಂದರಲ್ಲಿ ಬೋರ್‌ವೆಲ್‌ ಹಾಕುತ್ತಾರೆ. ಆದರೆ, ಅಲ್ಲಿ ‘ಪಾಯಿಂಟ್‌’ ಇರುವುದೇ ಇಲ್ಲ. ನೀರು ಸಿಗುವುದಿಲ್ಲ ಎಂದು ಗೊತ್ತಿದ್ದರೂ ಕೇವಲ ಲೆಕ್ಕ ತೋರಿಸಲು ಕೊಳವೆ ಬಾವಿ ಕೊರೆಯಲಾಗುತ್ತಿದೆ. ಬಿಬಿಎಂಪಿ ಇತ್ತ ಹೆಚ್ಚು ಗಮನ ನೀಡಬೇಕು.
-ರಾಜೇಶ್‌, ಕಲ್ಕೆರೆ

**
ಕೊಳವೆಬಾವಿ ಮರುಪೂರಣ ಕಾರ್ಯವಾಗಲಿ
ಪಾಲಿಕೆಯಿಂದ ನಮಗೆ ನೀರು ಪೂರೈಕೆಯಾಗುತ್ತಿರುವುದು ಕೊಳವೆ ಬಾವಿ ಮೂಲಕ ಮಾತ್ರ. ಉಳಿದಂತೆ ನಾವು ಖಾಸಗಿ ಟ್ಯಾಂಕರ್‌ಗಳಿಗೆ ಮೊರೆ ಹೋಗಬೇಕಾಗಿದೆ. 6,500 ಲೀಟರ್ ನೀರಿಗೆ ₹750 ಕೊಡಬೇಕಾಗಿದೆ. ಮಳೆ ನೀರು ಸಂಗ್ರಹ ಮತ್ತು ಕೊಳವೆಬಾವಿ ಮರುಪೂರಣದಂತಹ ಕಾರ್ಯಗಳಿಗೆ ಬಿಬಿಎಂಪಿ ಆದ್ಯತೆ ನೀಡಬೇಕಾಗಿದೆ. ಜನರಲ್ಲಿಯೂ ಈ ಬಗ್ಗೆ ಅರಿವು ಮೂಡಬೇಕು
-ಜಗದೀಶ ರೆಡ್ಡಿ, ವರ್ತೂರು

**
ಸಂಘ–ಸಂಸ್ಥೆಗಳಿಂದ ಉಚಿತ ನೀರು
ಕೆ.ಆರ್. ಪುರ ಭಾಗದಲ್ಲಿ ಶಾಂತಾ ಕೃಷ್ಣಮೂರ್ತಿ ಪ್ರತಿಷ್ಠಾನ ಸೇರಿದಂತೆ ಕೆಲವು ಸಂಘ–ಸಂಸ್ಥೆಗಳು ಹಿಂದುಳಿದ ಬಡಾವಣೆಗಳಲ್ಲಿನ ನಿವಾಸಿಗಳಿಗೆ ಉಚಿತವಾಗಿ ನೀರು ಪೂರೈಸುತ್ತಿರುವುದರಿಂದ ಅನುಕೂಲವಾಗಿದೆ. ದುಡ್ಡು ಕೊಟ್ಟು ಟ್ಯಾಂಕರ್‌ ನೀರು ತರಿಸಿಕೊಳ್ಳುವ ಶಕ್ತಿ ನಮ್ಮಲ್ಲಿಲ್ಲ. ಉಳಿದ ಸಂಘ–ಸಂಸ್ಥೆಗಳೂ ಉಚಿತ ನೀರು ಪೂರೈಕೆ ಕಾರ್ಯಕ್ಕೆ ಮುಂದಾದರೆ ಅನುಕೂಲವಾಗುತ್ತದೆ.
-ಚಿನ್ನಪ್ಪ, ಕೆ.ಆರ್. ಪುರ

‘ಬೇಡಿಕೆಯ ಅರ್ಧದಷ್ಟು ಮಾತ್ರ ನೀರು ಲಭ್ಯ’
‘ಬೆಂಗಳೂರು ನಗರದ ನೀರಿನ ಬೇಡಿಕೆಯನ್ನು ಪರಿಗಣಿಸಿದರೆ ಕಾವೇರಿಯಿಂದ ಪೂರೈಕೆಯಾಗುವ ನೀರಿನ ಪ್ರಮಾಣ ಕಡಿಮೆ ಇದೆ. ಶೇ 35ರಷ್ಟು ಸೋರಿಕೆ ಪ್ರಮಾಣ ತೆಗೆದರೆ, ಬೇಡಿಕೆಯ ಅರ್ಧದಷ್ಟು ಮಾತ್ರ ನೀರು ಲಭ್ಯವಿದೆ. ಈ ಕಾರಣದಿಂದ ಸ್ವಲ್ಪ ತೊಂದರೆಯಾಗುತ್ತಿದೆ’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್ ಹೇಳಿದರು.

‘ಮೂಲ ಬೆಂಗಳೂರು ಪ್ರದೇಶಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ. ನಗರದ ಹೊರವಲಯದ 110 ಹಳ್ಳಿಗಳಲ್ಲಿ ಕಾವೇರಿ ನೀರು ಸಂಪರ್ಕ ಇಲ್ಲದಿರುವುದರಿಂದ ಅಲ್ಲಿ ಸಮಸ್ಯೆಯಾಗಿದೆ. ಆದರೂ, ಈ ಪ್ರದೇಶಗಳಿಗೆ ಮಂಡಳಿಯಿಂದ ಕಡಿಮೆ ವೆಚ್ಚದಲ್ಲಿ (6500 ಲೀಟರ್‌ಗೆ ₹540) ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ’ ಎಂದು ತಿಳಿಸಿದರು.

‘ಬೇಸಿಗೆ ವೇಳೆ ಕೆಲವು ಕೊಳವೆಬಾವಿಗಳು ಬರಿದಾಗುತ್ತಿವೆ. ಅವುಗಳನ್ನು ಮರುಪೂರಣಗೊಳಿಸುವ, ದುರಸ್ತಿ ಮಾಡಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಬಹುತೇಕ ಮನೆಗಳಲ್ಲಿ ಕೊಳವೆ ಬಾವಿ ಇವೆ. ಜೊತೆಗೆ, 9 ಸಾವಿರ ಕೊಳವೆಬಾವಿಗಳನ್ನು ಮಂಡಳಿಯೂ ನಿರ್ವಹಿಸುತ್ತಿದೆ. ಈ ಕಾರಣದಿಂದ ನೀರಿನ ಬೇಡಿಕೆ ಈಡೇರಿಸಲು ಸಾಧ್ಯವಾಗಿದೆ’ ಎಂದೂ ಹೇಳಿದರು.

ನೀರಿನ ಕೃತಕ ಅಭಾವ ಸೃಷ್ಟಿ
ಬೇಸಿಗೆಯ ನೆಪದಲ್ಲಿ ನೀರಿನ ಕೃತಕ ಅಭಾವ ಸೃಷ್ಟಿಸುವ ಕಾರ್ಯವೂ ನಡೆಯುತ್ತಿದೆ. ಕೆಲವು ಕಡೆ ಕಾವೇರಿ ನೀರಿನ ಪೂರೈಕೆಯ ‘ರಭಸ’ ಕಡಿಮೆ ಮಾಡಲಾಗುತ್ತಿದೆ. ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ಟ್ಯಾಂಕರ್‌ ನೀರು ಮೊರೆ ಹೋಗುವಂತೆ ಮಾಡಲಾಗುತ್ತಿದೆ. ‘ವಾಟರ್‌ಮನ್‌’ಗಳ ಸಹಕಾರದೊಂದಿಗೆ ಟ್ಯಾಂಕರ್‌ ಮಾಫಿಯಾ ಈ ಕೆಲಸ ಮಾಡಿಸುತ್ತಿದೆ ಎಂದು ನಾಗರಿಕರು ದೂರುತ್ತಾರೆ.

ವಿಶೇಷ ನಿಗಾ ತಂಡ ರಚನೆ
‘ಬೇಸಿಗೆ ಸಂದರ್ಭದಲ್ಲಿ ಕೊಳವೆಬಾವಿಗಳು ಬರಿದಾಗುವುದು ಸಹಜ. ಕಾವೇರಿ ನೀರು ಪೂರೈಕೆಯ ರಭಸ ಕಡಿಮೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ಕೆಳಹಂತದಲ್ಲಿ ಕೆಲವು ಸಿಬ್ಬಂದಿ ಇದಕ್ಕೆ ಕೈ ಜೋಡಿಸಿರಬಹುದು. ಆದರೆ, ಅನೇಕ ಸಿಬ್ಬಂದಿ ಹಗಲು–ರಾತ್ರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನೀರಿನ ಕೊರತೆ ತಲೆದೋರದಂತೆ ಶ್ರಮಿಸುತ್ತಿದ್ದಾರೆ’ ಎಂದು ಜಯರಾಮ್ ಹೇಳಿದ್ದಾರೆ.

‘ಖಾಸಗಿ ಟ್ಯಾಂಕರ್‌ ಮಾಫಿಯಾ ತಡೆಗಟ್ಟುವ ನಿಟ್ಟಿನಲ್ಲಿ ಮಂಡಳಿಯಿಂದ ವಿಶೇಷ ನಿಗಾ ತಂಡ (ವಿಜಿಲೆನ್ಸ್‌ ಟೀಂ) ರಚಿಸಲಾಗಿದೆ. ಈ ಸಂಬಂಧ ದೂರುಗಳನ್ನು ತಂಡ ಪರಿಶೀಲಿಸಲಿದೆ’ ಎಂದರು.

‘ನೀರಿನ ಕೊರತೆ ಬಗ್ಗೆ ದೂರು ಬರುವ ಸ್ಥಳಗಳಲ್ಲಿ ಪ್ರತಿದಿನ ಬೆಳಿಗ್ಗೆ 7ಕ್ಕೆ ಮುಖ್ಯ ಎಂಜಿನಿಯರ್‌ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಭೇಟಿ ನೀಡುವಂತೆ ಸೂಚಿಸಲಾಗಿದೆ. ಕೆಳಹಂತದ ಸಿಬ್ಬಂದಿ ಟ್ಯಾಂಕರ್ ಮಾಫಿಯಾ ಜೊತೆಗೆ ಕೈಜೋಡಿಸಿದ್ದರೂ, ಈ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿದ್ದಾರೆ’ ಎಂದು ಹೇಳಿದರು.

ನೀರಿನ ಕೊರತೆ: ಮಂಡಳಿ ಕ್ರಮಗಳು
* ಬೇಸಿಗೆಯಲ್ಲಿ ನೀರಿನ ಸರಬರಾಜು ಮಾಡಲು ಮಂಡಳಿಯ 35 ಉಪವಿಭಾಗಗಳಲ್ಲಿ ನೋಡಲ್ ಅಧಿಕಾರಿಗಳ ನೇಮಕ

* 9 ಸಾವಿರ ಸಾರ್ವಜನಿಕ ಕೊಳವೆಬಾವಿಗಳ ನಿರ್ವಹಣೆ

* ಎಲ್ಲ ಉಪವಿಭಾಗಗಳಲ್ಲಿ ಸಮಾನ ಪ್ರಮಾಣ ನೀರಿನ ವಿತರಣೆಗೆ ಕ್ರಮ

* ಎಲ್ಲ 125 ಸೇವಾ ಠಾಣೆಗಳಲ್ಲಿ ಎಇಇಗಳ ದೂರವಾಣಿ ಸಂಖ್ಯೆ ಒದಗಿಸಲಾಗಿದೆ

* ಆನ್‌ಲೈನ್‌ ಮೂಲಕ ದೂರು ನೀಡಬಹುದು. ದೂರು ದಾಖಲಾದ 48 ಗಂಟೆಗಳಲ್ಲಿ ಕ್ರಮ

* ನೀರಿನ ಕೊರತೆಯಿದ್ದಲ್ಲಿ ಸಂಪರ್ಕಿಸಬೇಕಾದ ಸಂಖ್ಯೆ– 1916 ಮತ್ತು 080–22238888.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು