ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಬಿಲ್‌ ಪಾವತಿಗೆ ಲಂಚ

ಶೇ 3.5ರಿಂದ ಶೇ 7.5ರಷ್ಟು ಲಂಚಕ್ಕೆ ಬೇಡಿಕೆ: ಗುತ್ತಿಗೆದಾರರ ಸಂಘ ಆರೋಪ
Published 5 ಮೇ 2024, 0:20 IST
Last Updated 5 ಮೇ 2024, 0:20 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿಯಲ್ಲಿ ಬಿಲ್‌ ಪಾವತಿ ಮಾಡಲು ಮುಖ್ಯ ಎಂಜಿನಿಯರ್‌ ಸೇರಿದಂತೆ ಹಲವು ಅಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ. ಲಂಚ ನೀಡಿದ್ದರೆ ‘ರ‍್ಯಾಂಡಮೈಸೇಷನ್‌ ಚೆಕ್ಕಿಂಗ್‌’ ಎಂದೆಲ್ಲ ಅಲೆಸುತ್ತಿದ್ದಾರೆ’ ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್‌ ಆರೋಪಿಸಿದರು.

‘2022ರ ಏಪ್ರಿಲ್‌ನಿಂದ ಬಿಲ್ ಬಾಕಿ ಇದೆ. ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಬಿಲ್‌ ಪಾವತಿಸಬೇಕಿದೆ. ಒಂದು ವಾರದಲ್ಲಿ ಬಿಲ್‌ ಪಾವತಿಯಾಗಬೇಕು ಎಂಬ ಸಂದರ್ಭದಲ್ಲಿ ‘ರ‍್ಯಾಂಡಮೈಸೇಷನ್‌ ಚೆಕ್ಕಿಂಗ್‌’ ಹೆಸರಿನಲ್ಲಿ ಮತ್ತೆ ತಪಾಸಣೆ ಮಾಡಬೇಕು, ಗುಣಮಟ್ಟದ ವರದಿ ಸಲ್ಲಿಬೇಕು ಎಂದು ಮುಖ್ಯ ಎಂಜಿನಿಯರ್‌ಗಳು ತಕಾರು ಎತ್ತುತ್ತಿದ್ದಾರೆ. ಈ ಎಲ್ಲ ವರದಿ ಸಿದ್ಧವಾಗಲು ಒಂದು ತಿಂಗಳಾಗುತ್ತದೆ. ಆದರೆ, ಲಂಚ ಕೊಟ್ಟರೆ ಯಾವ ಪರಿಶೀಲನೆಯೂ ಇಲ್ಲದೆ ಪಾವತಿಯಾಗುತ್ತಿದೆ’ ಎಂದು ಅವರು ದೂರಿದರು.

‘ಬಿಲ್‌ ಪಾವತಿಗೆ ಬಂದ ಸಂದರ್ಭದಲ್ಲಿ ಮುಖ್ಯ ಎಂಜಿನಿಯರ್‌ಗಳು ಈ ರೀತಿಯ ತಕರಾರು ಎತ್ತುತ್ತಿದ್ದಾರೆ. ಅವರನ್ನು ಕೇಳಿದರೆ ಮುಖ್ಯ ಆಯುಕ್ತರು ಹೇಳಿದಂತೆ ಮಾಡುತ್ತಿದ್ದೇವೆ. ಅವರನ್ನೇ ಕೇಳಿ ಎನ್ನುತ್ತಾರೆ. ಮುಖ್ಯ ಎಂಜಿನಿಯರ್‌ ಅವರನ್ನು ಭೇಟಿ ಮಾಡಿ, ಮನವಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಅವರು ಕರೆಯನ್ನೂ ಸ್ವೀಕರಿಸುತ್ತಿಲ್ಲ, ಭೇಟಿಗೂ ಅವಕಾಶ ಮಾಡಿಕೊಡುತ್ತಿಲ್ಲ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮುಖ್ಯ ಆಯುಕ್ತರನ್ನು ಟ್ಯಾಗ್‌ ಮಾಡಿ ಈ ಭ್ರಷ್ಟಾಚಾರದ ವಿಷಯವನ್ನು ತಿಳಿಸಲಾಗಿದೆ’ ಎಂದು ಮಂಜುನಾಥ್‌ ಹೇಳಿದರು.

‘ಸರ್ಕಾರದ ಅನುದಾನದಲ್ಲಿ ನಿರ್ವಹಿಸಿರುವ ಕಾಮಗಾರಿಗಳಿಗೆ 2023ರ ಅಕ್ಟೋಬರ್‌ವರೆಗೆ ಪಾವತಿಸಲಾಗಿದೆ. ಈ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್‌ ಪಾವತಿಗೆ ಶೇ 7.5ರಷ್ಟು ಲಂಚ ನೀಡಿದವರಿಗೆ ಕೂಡಲೇ ಹಣ ಬಿಡುಗಡೆ ಮಾಡಿದ್ದಾರೆ. ಉಳಿದವರಿಗೆ ‘ಪರಿಶೀಲನೆ’ ಎಂದು ಸತಾಯಿಸುತ್ತಿದ್ದಾರೆ’ ಎಂದು ದೂರಿದರು.

‘ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಹಣಪಾವತಿ ಮಾಡಬೇಕಿದೆ. ಮೊದಲು ಹಣ ಇಲ್ಲ ಎನ್ನುತ್ತಿದ್ದರು, ಇದೀಗ ಹಣವಿದ್ದರೂ ಪಾವತಿಗೆ ಬಂದ ಸಂದರ್ಭದಲ್ಲಿ ಲಂಚ ನೀಡದ ಗುತ್ತಿಗೆದಾರರಿಗೆ ‘ರ‍್ಯಾಂಡಮೈಸೇಷನ್‌ ಚೆಕ್ಕಿಂಗ್‌’ ಎಂದು ಪರಿಶೀಲನೆಗೆ ಬರೆಯುತ್ತಿದ್ದಾರೆ. ಶೇ 3.5ರಷ್ಟು ಲಂಚ ನೀಡಿದರೆ ಹಣ ಪಾವತಿಯಾಗುತ್ತಿದೆ’ ಎಂದರು.

‘ಈ ಮೊದಲು ಕೇಂದ್ರೀಕೃತವಾಗಿ ಕೇಂದ್ರ ಕಚೇರಿಯಿಂದ ಬಿಲ್‌ ಪಾವತಿಯಾಗುತ್ತಿತ್ತು. ಈಗ ವಲಯಗಳ ಮುಖ್ಯ ಎಂಜಿನಿಯರ್‌ ಮಟ್ಟದಲ್ಲಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಇಲ್ಲಿ ಟೇಬಲ್‌ಗಳು ಹೆಚ್ಚಾಗುತ್ತಿದ್ದು ಪ್ರತಿಯೊಬ್ಬರಿಗೂ ಲಂಚ ನೀಡಬೇಕಾಗಿದೆ’ ಎಂದು ಮಂಜುನಾಥ್‌ ದೂರಿದರು.

ಪ್ರತಿಕ್ರಿಯೆ ಇಲ್ಲ: ಈ ಬಗ್ಗೆ ಪ್ರತಿಕ್ರಿಯೆಗಾಗಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT