ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP Budget 2023 | ಮಳೆ: ಹಳೆ ಯೋಜನೆಗಳಿಗೆ ‘ಬಜೆಟ್‌ ರೂಪ’

Last Updated 2 ಮಾರ್ಚ್ 2023, 21:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 2022ರಲ್ಲಿ ಸುರಿದ 1,958 ಮಿ.ಮೀರಷ್ಟು ಅಧಿಕ ಮಳೆ ಪೂರ್ವ ಭಾಗದಲ್ಲಿ ಬಿದ್ದರೂ ಹೊರವರ್ತುಲ ರಸ್ತೆಯಲ್ಲಿ ನೀರು ನಿಂತ ಪ್ರಸಂಗದ ಹೊರತು ಯಾವುದೇ ದೊಡ್ಡ ಪ್ರಮಾಣದ ಪ್ರವಾಹ ಎದುರಾಗಿಲ್ಲ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಮೊದಲ, ದ್ವಿತೀಯ ಮತ್ತು ತೃತೀಯ ಹಂತದ ಮಳೆಗಾಲುವೆಗಳಲ್ಲಿ ಪ್ರವಾಹವಾಗಿಲ್ಲ. 195 ಕಿ.ಮೀ. ಉದ್ದದ ರಾಜಕಾಲುವೆಗಳ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಲಾಗಿದೆ, 152 ಒತ್ತುವರಿ ತೆರವು ಮಾಡಲಾಗಿದೆ ಎಂದು ಹಳೆಯದ್ದನ್ನೇ ಹೇಳಲಾಗಿದೆ. 2023–24ರಲ್ಲಿ ಇದನ್ನು ಮುಂದುವರಿಸಿ ಬಾಕ್ಸ್‌ ಹಾಗೂ ಯು ಮಾದರಿಯ ರಾಜಕಾಲುವೆಗಳ ಮರುನಿರ್ಮಾಣ ಮುಂದಿನ ಆರ್ಥಿಕ ವರ್ಷಾಂತ್ಯಕ್ಕೆ ಪೂರ್ಣವಾಗಲಿದೆ ಎಂದು ಹೇಳಲಾಗಿದೆ. ಮುಂದೆ ಪ್ರವಾಹ ಅಥವಾ ಅವಘಡವಾಗದಂತೆ ಮುನ್ನೆಚ್ಚರಿಕೆ ವಹಿಸಿ ರಾಜಕಾಲುವೆ ಹಾಗೂ ಪಿಳ್ಳಗಾಲುವೆಗಳ ದುರಸ್ತಿ ಮತ್ತು ನಿರ್ವಹಣೆಗೆ ₹55 ಕೋಟಿ ಮೀಸಲಿಡಲಾಗಿದೆ.

ಹವಾಮಾನ ವೈಪರೀತ್ಯ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ವಿಶ್ವಬ್ಯಾಂಕ್‌ನ ₹3 ಸಾವಿರ ಕೋಟಿ ನೆರವಿನ ಯೋಜನೆಯನ್ನು ಮೂರು ವರ್ಷದಲ್ಲಿ ಜಾರಿಗೊಳಿಸುವುದನ್ನು ಬಿಬಿಎಂಪಿ ಬಜೆಟ್‌ನಲ್ಲೂ ನಮೂದಿಸಲಾಗಿದೆ.

ಘನತ್ಯಾಜ್ಯ ನಿರ್ವಹಣೆಗೆ ₹1,643 ಕೋಟಿ

ನಗರದಲ್ಲಿ ಕಟ್ಟಡ ತ್ಯಾಜ್ಯ, ಹಸಿ–ಒಣ ತ್ಯಾಜ್ಯ ನಿರ್ವಹಣೆಗೆ ರಾಜ್ಯ ಸರ್ಕಾರ ಘೋಷಿಸಿದ್ದ ಯೋಜನೆಗಳನ್ನು ಹೇಳುವ ಜೊತೆಗೆ ಬಿಬಿಎಂಪಿ ಹಿಂದೆ ಘೋಷಿಸಿದ್ದ, ಟೆಂಡರ್‌ ಕರೆದಿರುವ ಯೋಜನೆಗಳನ್ನು ಹೇಳಿ ಹೊಸದಾಗಿ ಬಿಂಬಿಸುವ ಪ್ರಯತ್ನವಾಗಿದೆ. ಕಟ್ಟಡ ನಿರ್ಮಾಣ ತ್ಯಾಜ್ಯ ಸಂಸ್ಕರಣೆಗಾಗಿ ಐದು ಹೊಸ ಕೇಂದ್ರಗಳನ್ನು ಸ್ಥಾಪಿಸಿ 3 ಮೆಟ್ರಿಕ್‌ ಟನ್‌ ಸಂಸ್ಕರಿಸುವುದಾಗಿ ಹೇಳಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ ಹೊಸ ಸಂಗ್ರಹ– ಸಾಗಣೆ ವ್ಯವಸ್ಥೆ ಪ್ರಕಟಿಸಲಾಗಿದ್ದು, 4,500 ಆಟೊ ಟಿಪ್ಪರ್‌, 500 ಹೊಸ ಕಾಂಪ್ಯಾಕ್ಟರ್‌ ಬಳಸಲು ಉದ್ದೇಶಿಸಲಾಗಿದೆ.

ಹಸಿ ತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿ ವಾರ್ಡ್‌ ‘ಆತ್ಮ ನಿರ್ಭರ’ವನ್ನಾಗಿಸಲು, ‘ಶೂನ್ಯ–ತ್ಯಾಜ್ಯ’ವಾಗಿಸಲು ಘನತ್ಯಾಜ್ಯ ಸಂಸ್ಕರಣೆ ಕೇಂದ್ರ ಹಾಗೂ ಹಸಿ ತ್ಯಾಜ್ಯ ಕಾಂಪೋಸ್ಟ್‌ ಸಂಸ್ಕರಣ ಕೇಂದ್ರ ಸ್ಥಾಪಿಸುವುದಾಗಿ ಪ್ರಕಟಿಸಲಾಗಿದೆ. ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಸಗಟು ತ್ಯಾಜ್ಯ ಉತ್ಪಾದಕರು ಎಂದು ಗುರುತಿಸಿ, ಮುಂದಿನ ವರ್ಷದಿಂದ ಅಲ್ಲಿಂದ ತ್ಯಾಜ್ಯ ಹೊರಬರುವಂತಿಲ್ಲ. ಅಲ್ಲಿ ಉತ್ಪಾದಿಸುವ ಗೊಬ್ಬರವನ್ನು ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದಿಂದ ಖರೀದಿಸಲು ಉದ್ದೇಶಿಸಲಾಗಿದೆ.

ಹಳೆಯ ತ್ಯಾಜ್ಯ ಶೇಖರಣಾ ಕೇಂದ್ರ
ಗಳಲ್ಲಿರುವ 22 ಲಕ್ಷ ಮೆಟ್ರಿಕ್‌ ಟನ್‌ ತ್ಯಾಜ್ಯವನ್ನು ಜೈವಿಕ ಗಣಿಕಾರಿಕೆ ಮಾಡಿ ಕರಗಿಸಲು ₹209 ಕೋಟಿ ವ್ಯಯ ಮಾಡಿ, ಅವುಗಳನ್ನು ಹಸಿರು ಪ್ರದೇಶ ಮಾಡಲು ಯೋಜಿಸಲಾಗಿದೆ. ಕರ್ನಾಟಕ ವಿದ್ಯುತ್‌ ನಿಗಮದ ಜಂಟಿ ಸಹಭಾಗಿತ್ವದಲ್ಲಿ ವಿದ್ಯುತ್‌ ಉತ್ಪಾದಿಸುವ ಕೇಂದ್ರ ಪ್ರಾರಂಭವಾಗಲಿದ್ದು, ಇದರಿಂದ 600 ಟನ್‌ ಘನತ್ಯಾಜ್ಯ ವಿಲೇವಾರಿ ಆಗಲಿದೆ.

‘ಶೂನ್ಯ ತ್ಯಾಜ್ಯ ನಿರ್ಯಾತ’ ನಗರವನ್ನಾಗಿಸಲು 550 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಸಿಎನ್‌ಜಿ ಕೇಂದ್ರ ತೆರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಡಂಬಡಿಕೆಗೆ ಬಜೆಟ್‌ನಲ್ಲಿ ಅನುವು ಮಾಡಿಕೊಡಲಾಗಿದೆ.

ಮೂರು ಬೃಹತ್‌ ತ್ಯಾಜ್ಯ ಸಂಗ್ರಹ–ಸಾಗಣೆ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಪಿಪಿಪಿ ಮಾದರಿಯಲ್ಲಿ 100 ಎಕರೆ ಜಾಗದಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಸಂಕೀರ್ಣ ಸ್ಥಾಪಿಸಲಾಗುತ್ತದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತ್ಯಾಜ್ಯ ಸಂಗ್ರಹ– ಸಾಗಣೆ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ.

ಕೊಳೆಗೇರಿಮುಕ್ತ ನಗರ

ನಗರದಲ್ಲಿರುವ 8 ಕೊಳೆಗೇರಿ ಪ್ರದೇಶಗಳನ್ನು ಪುನರ್‌ ಅಭಿವೃದ್ಧಿ ಮಾಡಲು ₹80 ಕೋಟಿ ವೆಚ್ಚ ಮಾಡಲಾಗುತ್ತಿದೆ. ಹಂತಹಂತವಾಗಿ ಬೆಂಗಳೂರಿನ ಎಲ್ಲ ಕೊಳೆಗೇರಿಗಳನ್ನು ಪುನರ್ ಅಭಿವೃದ್ಧಿ ಮಾಡಿ ಕೊಳೆಗೇರಿ ಮುಕ್ತ ನಗರವನ್ನಾಗಿಸಲು ಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT