ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್ ‌ಇನ್ ಕಾರ್ಯಕ್ರಮ | ‘ಕೊರೊನಾ ಭಯ ನಿವಾರಣೆಗೆ ಪಣ’

ಸಂಕಷ್ಟಕ್ಕೆ ಸಿಲುಕಿದವರ ಅಳಲು ಆಲಿಸಿದ ಪಾಲಿಕೆ ಸದಸ್ಯ ಶಿವರಾಜು
Last Updated 18 ಜುಲೈ 2020, 18:50 IST
ಅಕ್ಷರ ಗಾತ್ರ
ADVERTISEMENT
"ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಜತೆ ಕಿಟ್‌ ವಿತರಿಸಿದ ಕ್ಷಣ. ಪಾಲಿಕೆ ಸದಸ್ಯ ಕೇಶವಮೂರ್ತಿ ಇದ್ದಾರೆ"

ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಕಾಲದಲ್ಲೂ ಮೀನಾಮೇಷ ಎಣಿಸದೆಯೇ, ಸಂಕಷ್ಟ ಎದುರಿಸುತ್ತಿರುವ ಜನರ ನೆರವಿಗೆ ಧಾವಿಸುವ ಮೂಲಕ ಇತರ ಪಾಲಿಕೆ ಸದಸ್ಯರಿಗೂ ಮೇಲ್ಪಂಕ್ತಿ ಹಾಕಿಕೊಟ್ಟವರು ಮಹಾಲಕ್ಷ್ಮಿ ಬಡಾವಣೆಯ ಶಂಕರಮಠ ವಾರ್ಡ್‌ನ ಪಾಲಿಕೆ ಸದಸ್ಯ ಎಂ.ಶಿವರಾಜು. ‌

ಮೂರ್ಚೆ ಹೋಗಿ ರಸ್ತೆ ಬದಿಯಲ್ಲಿ ಬಿದ್ದಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ, ಹೆರಿಗೆ ದಿನ ಹತ್ತಿರ ಬಂದರೂ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಪರಿತಪಿಸುತ್ತಿರುವ ಗರ್ಭಿಣಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಕುಟುಂಬದವರೆಲ್ಲ ಕ್ವಾರಂಟೈನ್‌ಗೆ ಒಳಗಾಗಿದ್ದಾಗ ಕೋವಿಡ್‌ನಿಂದ ಮೃತಪಟ್ಟ ತಂದೆಯ ಅಂತ್ಯಕ್ರಿಯೆ ನಡೆಸುವುದು ಹೇಗೆ ಎಂದು ಪರಿತಪಿಸುತ್ತಿದ್ದ ಯುವತಿಗೆ ನೆರವಾಗಿ, ವೃದ್ಧ ದಂಪತಿ ಒಟ್ಟೊಟ್ಟಿಗೆ ಮೃತಪಟ್ಟಾಗ ಅವರ ಅಂತಿಮ ಸಂಸ್ಕಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡುವ ಮೂಲಕ ಸೇವಾ ಮನೋಭಾವ ಮೆರೆದವರು ಇವರು.

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಶಂಕರಮಠ ವಾರ್ಡ್‌ ಮಾತ್ರವಲ್ಲದೇ ಮಹಾಲಕ್ಷ್ಮೀ ಬಡಾವಣೆ ವಿಧಾನ ಸಭಾ ಕ್ಷೇತ್ರದ ಜನರ ಸಮಸ್ಯೆಗಳನ್ನು ಎಂ. ಶಿವರಾಜು ಆಲಿಸಿದರು. ‘ಪ್ರಜಾವಾಣಿ’ ವತಿಯಿಂದ ಶನಿವಾರ ಏರ್ಪಡಿಸಿದ್ದ ಪೋನ್‌ ಇನ್‌ ಕಾರ್ಯಕ್ರಮ ಇದಕ್ಕೆ ವೇದಿಕೆ ಕಲ್ಪಿಸಿತು.

ನೀರಿನ ಸಮಸ್ಯೆ, ಉದ್ಯೋಗ ಕಳೆದುಕೊಂಡ ಕಾರಣಕ್ಕೆ ಎದುರಾಗಿರುವಆರ್ಥಿಕ ಸಂಕಟ, ಅರ್ಜಿ ಹಾಕಿ ತಿಂಗಳುಗಳೇ ಕಳೆದರೂ ಸಿಗದ ಪಡಿತರ ಚೀಟಿ,ಕೆಲಸವಿಲ್ಲದೇ ಬೀದಿ ಬದಿ ಹರಟುತ್ತಾ ಕುಳಿತು ಹುಡುಗಿಯರಿಗೆ ಚುಡಾಯಿಸುವವರ ಹಾವಳಿ, ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿಲ್ಲದೇ ಎದುರಾಗಿರುವ ಸಮಸ್ಯೆ... ಹೀಗೆ ಹತ್ತು ಹಲವು ತೊಂದರೆಗಳ ಬಗ್ಗೆ ಜನ ಅಳಲು ತೋಡಿಕೊಂಡರು. ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದ ಪಾಲಿಕೆ ಸದಸ್ಯ ಅವುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವ ವಾಗ್ದಾನ ನೀಡಿದರು.

ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ವೆಂಟಿಲೇರ್‌ ಲಭ್ಯವಿಲ್ಲದಂತಹ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯುವುದಾಗಿ ಭರವಸೆ ನೀಡಿದರು.

ಜಗತ್ತನ್ನೇ ಕಾಡುತ್ತಿರುವ ಕೋವಿಡ್‌ ವಿರುದ್ಧದ ಸಮರ ಗೆಲ್ಲಬೇಕಾದರೆ ಧೈರ್ಯ ಬಹಳ ಮುಖ್ಯ. ಏನೇ ಸಮಸ್ಯೆ ಬಂದರೂ ಎದೆಗುಂದಬಾರದು. ತಮ್ಮ ಆಸುಪಾಸಿನ ನಿವಾಸಿಗಳಿಗೆ ಕೋವಿಡ್‌ ದೃಢಪಟ್ಟರೆ, ಅವರಿಗೆ ಸಾಧ್ಯವಾದಷ್ಟು ಮಟ್ಟಿಗ ನೆರವಾಗಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಜತೆ ಕಿಟ್‌ ವಿತರಿಸಿದ ಕ್ಷಣ. ಪಾಲಿಕೆ ಸದಸ್ಯ ಕೇಶವಮೂರ್ತಿ ಇದ್ದಾರೆ

ನೊಂದವರಿಗೆ ಸಾಂತ್ವನ– ನೆರವಿನ ಭರವಸೆ

*ನನಗೀಗ 72 ವರ್ಷ. ಕೊರೊನಾ ಬಂದ ಬಳಿಕ ಬಹಳ ತೊಂದರೆಯಾಗಿದೆ. ಜೀವನ ನಡೆಸುವುದು ಹೇಗೆಂದೇ ತೋಚುತ್ತಿಲ್ಲ.
-ಬಾಲಸುಬ್ರಹ್ಮಣ್ಯ,9ನೇ ಅಡ್ಡ ರಸ್ತೆ , ಜೆ.ಸಿ.ನಗರ

ಶಿವರಾಜು: ಆದಷ್ಟು ಮನೆಯಲ್ಲೇ ಇರಿ.ಹೊರಗೆ ಹೋಗದಿರಿ. ಜೀವ ಇದ್ದರೆ ಜೀವನ ನಡೆಸಬಹುದು. ಸರ್ಕಾರ ಸೌಲಭ್ಯ ಕೊಡುತ್ತದೋ ಬಿಡುತ್ತದೋ. ಆ ಭಾಗದ ಜನಪ್ರತಿನಿಧಿಯಾಗಿ ನಾನಂತೂ ನಿಮ್ಮ ಜೊತೆ ಇದ್ದೇನೆ. ಪಡಿತರ ಕಿಟ್‌ ಅನ್ನು ಇವತ್ತು ಸಂಜೆ ಒಳಗೆ ಕಳುಹಿಸಿಕೊಡುತ್ತೇವೆ.

_

* ಕುರುಬರಹಳ್ಳಿ ಬಳಿ 16ನೇ ಮುಖ್ಯ ರಸ್ತೆಯಲ್ಲಿ, 10ನೇ ಅಡ್ಡ ರಸ್ತೆ ಬಳಿ ಯಾವಾಗಲೂ ತುಂಬಾ ಹುಡುಗರು ಹರಟೆ ಹೊಡೆಯುತ್ತ ಇರುತ್ತಾರೆ. ಹುಡುಗಿಯರು ಓಡಾಡುವುದು ಕಷ್ಟ. ನಾವು ಈ ಬಗ್ಗೆ ದೂರಿದರೂ ಪ್ರಯೋಜನವಾಗಿಲ್ಲ.
-ವನಿತಾ

ಶಿವರಾಜು: ಆ ಪ್ರದೇಶಕ್ಕೆ ಸಿ.ಸಿ.ಕ್ಯಾಮೆರಾ ಹಾಕಿಸಿದ್ದೇವೆ. ಅದರ ನಿಯಂತ್ರಣ ಕೊಠಡಿ ನನ್ನ ವಾರ್ಡ್‌ ಕಚೇರಿ ಬಳಿಯೇ ಇದೆ. ಅಲ್ಲಿ ಹುಡುಗರು ಗುಂಪು ಕಟ್ಟಿಕೊಂಡು ಸಮಸ್ಯೆ ಮಾಡಿದರೆ ತಕ್ಷಣವೇ ಅಲ್ಲಿಗೆ ಗಸ್ತು ತಿರುಗುವ ಪೊಲೀಸರನ್ನು ಕಳುಹಿಸುತ್ತೇವೆ. ಅವರು ಕ್ರಮ ತೆಗೋತಾರೆ.

*ಸಾರ್‌, ನಾನು ಆಂಜನೇಯ ಗುಡ್ಡದಿಂದ ಜೆ.ಸಿ.ನಗರಕ್ಕೆ ವಾಸ್ತವ್ಯ ಬದಲಿಸಿದ್ದೇನೆ. ಪಡಿತರ ಚೀಟಿಗೆ ಅರ್ಜಿ ಹಾಕಿದ್ದೇವೆ. ಇನ್ನೂ ಕಾರ್ಡ್‌ ಬಂದಿಲ್ಲ.
-ಮೋಹನ್‌,ಶಂಕರಮಠ

ಶಿವರಾಜು: ಈಗಾಗಲೇ ಅರ್ಜಿಯನ್ನು ಇಲಾಖೆಗೆ ಕಳುಹಿಸಿಕೊಟ್ಟಿದ್ದೇವೆ. ಕೊರೊನಾ ಬಂದ ಬಳಿಕ ಇಲಾಖೆ ಏನೂ ಕ್ರಮ ತೆಗೆದುಕೊಂಡಿಲ್ಲ. ಪಡಿತರ ಚೀಡಿ ನೀಡುವ ಪ್ರಕ್ರಿಯೆಯನ್ನು ಇಲಾಖೆ ಪುನರಾರಂಭಿಸಿದ ಬಳಿಕ ನಿಮಗೂ ಕಾರ್ಡ್‌ ಸಿಗಲಿದೆ.

_

*ಪಡಿತರ ಚೀಟಿಗೆ ಅರ್ಜಿ ಹಾಕಿದ್ದೇನೆ. ಇನ್ನೂ ಕಾರ್ಡ್‌ ಬಂದಿಲ್ಲ.
-ಬಿ.ಎನ್‌.ಮೂರ್ತಿ,ಪ್ರಕಾಶ ನಗರ

ಶಿವರಾಜು: ನಿಮ್ಮ ಮೊಬೈಲ್ ನಂಬರ್‌ ಬರೆದಿಟ್ಟುಕೊಂಡಿದ್ದೇನೆ. ಪಡಿತರ ಚೀಟಿ ನೀಡುವ ಪ್ರಕ್ರಿಯೆ ಮತ್ತೆ ಪ್ರಾರಂಭವಾದಾಗ ತಕ್ಷಣ ನಿಮಗೆ ಮಾಹಿತಿ ನೀಡುತ್ತೇವೆ.

_

*ಗಾಡಿ ಓಡಿಸುತ್ತಿದ್ದೆ. ಈಗ ಜೀವನ ಬಹಳ ಕಷ್ಟ ಆಗಿದೆ.
-ಕೃಷ್ಣ

ಶಿವರಾಜು: ನಿಮ್ಮ ಮೊಬೈಲ್ ಸಂಖ್ಯೆ ಬರೆದಿಟ್ಟುಕೊಂಡಿದ್ದೇನೆ, ನಿಮಗೆ ಪಡಿತರ ಕಿಟ್‌ ಕೊಡಿಸುತ್ತೇನೆ. ನಮ್ಮ ಕೈಯಿಂದ ಆಗುವ ಸಹಾಯ ಮಾಡುತ್ತೇನೆ.

_

*ಶಾಲಾ ಕಾಲೇಜುಗಳಿಗೆ ರಜೆ ಇದೆ. ಕೊರೊನಾ ಹಬ್ಬುತ್ತಿರುವ ಸಂದರ್ಭದಲ್ಲಿ ಕೆಲವು ಯುವಕರು ಸುಮ್ಮನೆ ಅಡ್ಡಾಡುತ್ತಿದ್ದಾರೆ. ಅಧಿಕಾರಿಗಳ ಜೊತೆ ಚರ್ಚಿಸಿ ದಯವಿಟ್ಟು ಇದಕ್ಕೆ ಕಡಿವಾಣ ಹಾಕಿಸಿ.
-ಜಗದೀಶ್‌

ಶಿವರಾಜು: ಈ ಬಗ್ಗೆ ಈಗಾಗಲೇ ಕ್ರಮಕೈಗೊಂಡಿದ್ದೇವೆ. ಬಿಬಿಎಂಪಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜೊತೆ ಮಾತನಾಡಿ, ಎಲ್ಲೂ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದೇವೆ.

_

* ಸೋಂಕು ಈ ಪರಿ ಹೆಚ್ಚಲು ಕಾರಣವೇನು? ಇದಕ್ಕೆ ಹೊಣೆ ಯಾರು?
-ನಾಗರಾಜು

ಶಿವರಾಜು: ಸೋಂಕು ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕಿದೆ. ಜನರಲ್ಲಿ ಧೈರ್ಯ ತುಂಬ ಬೇಕಿದೆ. ಕೈಮೀರುವ ಹಂತ ತಲುಪದಂತೆ ಎಚ್ಚರವಹಿಸಬೇಕಿದೆ. ಪ್ರತಿಯೊಬ್ಬರ ಜವಾಬ್ದಾರಿಯೂ ಇದೆ.

_

*ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ದಿನಕ್ಕೆ ₹ 10 ಸಾವಿರದಿಂದ ₹15 ಸಾವಿರ ಬಿಲ್‌ ಮಾಡುತ್ತಿವೆ. ಬಡವರಾದ ನಾವು ಎಲ್ಲಿಗೆ ಹೋಗಬೇಕು? ಎಲ್ಲಿ ಆಸ್ಪತ್ರೆ ಲಭ್ಯ, ಹಾಸಿಗೆ ಇದೆಯೋ ಇಲ್ಲವೋ ಒಂದೂ ತಿಳಿಯುತ್ತಿಲ್ಲ. ಜನ ಸಾಯುತ್ತಿದ್ದಾರೆ.
-ವೆಂಕಟಾಚಲಯ್ಯ,ರಾಜಾಜಿನಗರ

ಶಿವರಾಜು: ಇಂತಹ ಸಮಸ್ಯೆಗಳು ಆಗಬಾರದು ಎಂದು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ರಾಜಾಜಿನಗರಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಪಶ್ಚಿಮ ವಲಯದ ಜಂಟಿ ಆಯುಕ್ತರ ಗಮನಕ್ಕೆ, ಆ ಭಾಗದ ಮುಖಂಡರ ತರುತ್ತೇವೆ. ಆಸ್ಪತ್ರೆ ಮತ್ತು ಹಾಸಿಗೆಗಳ ಲಭ್ಯತೆ ಬಗ್ಗೆ ಮಾಹಿತಿ ಕೊಡುವಂತೆ ಸೂಚಿಸುತ್ತೇವೆ. ಸರ್ಕಾರ ಜೊತೆಗೂ ನಿಮ್ಮ ಧ್ವನಿಯಾಗಿ ಮಾತನಾಡುತ್ತೇವೆ.

_

*ನಾನು ಮೊದಲು ಪ್ರಕಾಶ್ ನಗರದಲ್ಲಿದ್ದೆ. ಈಗ ಕುರುಬರಹಳ್ಳಿಯಲ್ಲಿ ನೆಲೆಸಿದ್ದೇವೆ. ಅರ್ಜಿ ಕೊಟ್ಟಿದ್ದರೂ ನನಗೆ ಇನ್ನೂ ಪಡಿತರ ಚೀಟಿ ಸಿಕ್ಕಿಲ್ಲ.
-ಶೇಷಾದ್ರಿ,ಕುರುಬರಹಳ್ಳಿ

ಶಿವರಾಜು: ಕೊರೊನಾ ಬಂದ ಬಳಿಕ ಪಡಿತರ ಚೀಟಿಗೆ ಸಂಬಂಧಿಸಿದ ಅರ್ಜಿ ವಿಲೇ ಆಗುತ್ತಿಲ್ಲ. ಸರ್ಕಾರ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ ಬಳಿಕ ನಿಮ್ಮ ಗಮನಕ್ಕೆ ತರುತ್ತೇವೆ.

_

* ತುಂಬಾ ಸಮಸ್ಯೆಇದೆ. ಮನೆಯಲ್ಲಿ ಐದು ಜನ ಇದ್ದೇವೆ. ಪಡಿತರ ಒದಗಿಸಿದರೆ ಒಳ್ಳೆಯದಿತ್ತು.
-ನಿರ್ಮಲಾ

ಶಿವರಾಜು: ನಿಮ್ಮ ನಂಬರ್‌ ಪಡೆದುಕೊಂಡಿದ್ದೇನೆ. ಸಂಜೆ ಒಳಗೆ ರೇಷನ್‌ ಕಿಟ್‌ ಕಳುಹಿಸುತ್ತೇನೆ.

_

*ನಮ್ಮ ಪ್ರದೇಶದಲ್ಲಿ ನಮ್ಮಮನೆ ಸೇರಿ ಮೂರು ಮನೆಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ. ಉಳಿದ ಕಡೆಗಳಲ್ಲೆಲ್ಲಾ ನೀರು ಪೂರೈಕೆ ಚೆನ್ನಾಗಿದೆ.
-ಶರ್ಮಾ,ಸುಬ್ರಹ್ಮಣ್ಯ ದೇವಸ್ಥಾನ ಹಿಂಭಾಗ, ವಿಎಚ್‌ಬಿಸಿಎಸ್‌ ಬಡಾವಣೆ

ಶಿವರಾಜು: ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ನಿಮ್ಮ ಮನೆಯಲ್ಲಿ ಸಮಸ್ಯೆ ಇದ್ದರೆ ಖುದ್ದಾಗಿ ಅಧಿಕಾರಿಗಳನ್ನು ಕರೆದುಕೊಂಡು ಬಂದು ಸಮಸ್ಯೆ ಬಗೆಹರಿಸುತ್ತೇನೆ.

ಮಹಿಳೆಗೆ ಹಣ್ಣು ತರಕಾರಿ ವಿತರಿಸಿದ ಪಾಲಿಕೆ ಸದಸ್ಯ

‘ಹೇಗಾದರೂ ಮಾಡಿ ಆಸ್ಪತ್ರೆಗೆ ದಾಖಲಿಸುತ್ತಾರೆ ಎಂಬ ಧೈರ್ಯ ನಮಗಿದೆ’
‘ನಗರದ ಬೇರೆ ವಾರ್ಡ್‌ಗಳ ಪರಿಸ್ಥಿತಿ ಹೇಗಿದೆಯೋ ಗೊತ್ತಲ್ಲ. ಆದರೆ, ನಮಗೇನಾದರೂ ಕೊರೊನಾ ಬಂದರೆ ನಮ್ಮ ಪಾಲಿಕೆ ಸದಸ್ಯರು ಹೇಗಾದರೂ ಮಾಡಿ ಆಸ್ಪತ್ರೆಗೆ ದಾಖಲಿಸುತ್ತಾರೆ ಎಂಬ ಧೈರ್ಯ ನಮಗಿದೆ’

ಜೆ.ಸಿ.ನಗರದ ನಿವಾಸಿ ಮೋಹನ್‌ ಎಂಬುವರು ಎಂ.ಶಿವರಾಜು ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಹೀಗೆ. ‘ಜನ ಸೇವೆ ಮಾಡುವಾಗ ಸೋಂಕು ತಗುಲದಂತೆ ಎಚ್ಚರ ವಹಿಸಿ’ ಎಂದು ಅವರು ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಶಿವರಾಜು, ‘ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಯಾರಿಗೂ ಬರುವುದು ಬೇಡ. ಜನಪ್ರತಿನಿಧಿಯಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ನನ್ನ ಆರೋಗ್ಯದ ಬಗ್ಗೆ ಕಾಳಜಿಯ ಮಾತುಗಳನ್ನಾಡಿದ್ದಕ್ಕೆ ಧನ್ಯವಾದಗಳು’ ಎಂದರು.

ಕೊರೊನಾ ಸಂದರ್ಭದಲ್ಲಿ ಬಂಧುಗಳೂ ನೆರವಿಗೆ ಬಾರದ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಶಿವರಾಜು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬಗ್ಗೆ ಜಗದೀಶ್‌, ವಿನೋದ್‌, ಸುಬ್ರಹ್ಮಣ್ಯ, ಸತ್ಯನಾರಾಯಣ, ಸಂತೋಷ್‌ ಮೊದಲಾದವರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಶಾ ಕಾರ್ಯಕರ್ತೆಯರ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಶಶಿಕಲಾ ಕೃತಜ್ಞತೆ ಸಲ್ಲಿಸಿದರು.

‘ಸೋಂಕು ದೃಢ ಪಟ್ಟಾಗ ಜನ ಆತಂಕಕ್ಕೆ ಒಳಗಾಗುತ್ತಾರೆ. ಆ ಆತಂಕ ಹೋಗಲಾಡಿಸಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ನಮಗೆ ಯಾರೂ ಇಲ್ಲ ಎಂಬ ಭಾವನೆಜನರಿಗೆ ಬಾರದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ನೆರವಿಗೆ ಧಾವಿಸಿ ಈ ರೋಗವನ್ನು ಹಿಮ್ಮೆಟ್ಟಿಸಬೇಕು. ನೀವೂ ನಿಮ್ಮಿಂದಾಷ್ಟು ಮಂದಿಗೆ ನೆರವಾಗಿ’ ಎಂದು ಶಿವರಾಜು ಕೋರಿದರು.

‘ನಾನೊಬ್ಬನೇ ಅನೇಕ ಪಾಲಿಕೆ ಸದಸ್ಯರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಜನ ಅವರ ಜೊತೆ ಕೈಜೋಡಿಸ ಬೇಕು’ ಎಂದರು.

ಅಂಕಿ ಅಂಶ
25 ಸಾವಿರ:ಲಾಕ್‌ ಡೌನ್‌ ಸಂದರ್ಭದಲ್ಲಿ ಶಂಕರ ಮಠ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯರ ನೇತೃತ್ವದಲ್ಲಿ ವಿತರಿಸಿದ ಮಾಸ್ಕ್‌
1.20 ಲಕ್ಷ:41 ದಿನ ಲಾಕ್‌ಡೌನ್ ಜಾರಿಯಲ್ಲಿದ್ದಾಗ ನಿತ್ಯವೂ ಮಧ್ಯಾಹ್ನ ವಿತರಿಸಿದ ಆಹಾರ ಪೊಟ್ಟಣಗಳು
16 ಸಾವಿರ:ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಯಲ್ಲಿ ಎಂ.ಶಿವರಾಜು ಮುಂದಾಳತ್ವದಲ್ಲಿ ವಿತರಿಸಿದ ಆಹಾರ ಧಾನ್ಯಗಳ ಕಿಟ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT