ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಕಂಟೈನ್‌ಮೆಂಟ್‌ ವಲಯಗಳ ಏರಿಕೆ

ಕೋವಿಡ್‌ ಮೂರನೇ ಅಲೆ ಸಾಧ್ಯತೆ * ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ
Last Updated 6 ಆಗಸ್ಟ್ 2021, 21:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಕ್ರಮೇಣವಾಗಿ ಏರುತ್ತಿದ್ದು, ಮೂರನೇ ಅಲೆ ಪ್ರಾರಂಭವಾಗಿರುವ ಸಾಧ್ಯತೆ ದಟ್ಟವಾಗುತ್ತಿದೆ. ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಮೂರಕ್ಕಿಂತ ಹೆಚ್ಚು ಪ್ರಕರಣಗಳಿರುವ 155 ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ.

ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಸೋಂಕು ಪ್ರಮಾಣ ಹೆಚ್ಚಾಗುತ್ತಿದ್ದು, ಕೇರಳ, ಮಹಾರಾಷ್ಟ್ರಗಳಿಂದ ಬರುತ್ತಿರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದ್ದು, ಮೂರು ದಿನಗಳ ಅವಧಿಯ ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿಗಳನ್ನು ‍ಪರಿಶೀಲಿಸಲಾಗುತ್ತಿದೆ. ವರದಿ ಇಲ್ಲದವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ, ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿದೆ.

‘ಹದಿನಾಲ್ಕು ದಿನಗಳ ಹಿಂದೆ ದಿನದಲ್ಲಿ 300ರಿಂದ 350 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದವು. ಈಗ, ದಿನಕ್ಕೆ 450ರಿಂದ 460 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬರುತ್ತಿರುವವರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘155 ಕ್ಲಸ್ಟರ್‌ಗಳ ಪೈಕಿ, ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ 78 ಹಾಗೂ ಮನೆಗಳಲ್ಲಿ 70 ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ. ವಸತಿ ನಿಲಯಗಳಲ್ಲಿ 4 ಹಾಗೂ ಹೋಟೆಲ್‌ಗಳಲ್ಲಿ 3 ಕ್ಲಸ್ಟರ್‌ಗಳಿವೆ‘ ಎಂದರು.

‘ಕೇರಳ, ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರನ್ನು ಹೋಟೆಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸುವ ಕಾರ್ಯ ಗುರುವಾರದಿಂದ ಪ್ರಾರಂಭವಾಗಿದೆ. ಗುರುವಾರವೇ 25 ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ’ ಎಂದು ಅವರು ತಿಳಿಸಿದರು.

‘ಹೋಟೆಲ್‌ಗಳಲ್ಲಿನ ಕ್ವಾರಂಟೈನ್‌ ದರವನ್ನು ಸರ್ಕಾರ ಶೀಘ್ರವೇ ಪ್ರಕಟಿಸಲಿದೆ. ಈ ಹಿಂದೆ ಕ್ವಾರಂಟೈನ್‌ಗೆ ಮೀಸಲಾಗಿದ್ದ 10ರಿಂದ 15 ಹೋಟೆಲ್‌ಗಳಲ್ಲಿಯೇ ಈ ಬಾರಿಯೂ ಪ್ರಯಾಣಿಕರನ್ನು ಕ್ವಾರಂಟೈನ್‌ ಮಾಡಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಹೋಟೆಲ್‌ಗಳ ಮಾಲೀಕರೊಂದಿಗೆ ಮಾತುಕತೆ ನಡೆಯುತ್ತಿದೆ’ ಎಂದೂ ಅವರು ಮಾಹಿತಿ ನೀಡಿದರು.

ಕೋವಿಡ್ ಪರೀಕ್ಷೆ:

‘ಹೊರರಾಜ್ಯಗಳಿಂದ ಬರುತ್ತಿರುವವರ ಮೇಲೆ ನಿಗಾ ಇಡಲಾಗಿದ್ದು, ನಿತ್ಯ 2000 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ರೈಲು, ಬಸ್‌ ನಿಲ್ದಾಣಗಳಲ್ಲಿ 9 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಪ್ರಯಾಣಿಕರಲ್ಲಿ ಶೇ 2ಕ್ಕಿಂತ ಕಡಿಮೆ ಪ್ರಕರಣಗಳು ಮಾತ್ರ ಕಂಡು ಬಂದಿವೆ. ಸೋಂಕು ದೃಢಪಟ್ಟವರನ್ನು ತಕ್ಷಣವೇ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ’ ಎಂದು ರಂದೀಪ್‌ ಮಾಹಿತಿ ನೀಡಿದರು.

‘ಬೊಮ್ಮನಹಳ್ಳಿಯಲ್ಲಿ ಒಂದು ಡೆಲ್ಟಾ ಪ್ರಕರಣ ಪತ್ತೆಯಾಗಿದೆ. ಅವರಿಗೆ ಜುಲೈ 14ರಂದು ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಮುಂದುವರಿಸಲಾಗಿದೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಕ್ವಾರಂಟೈನ್‌ನಲ್ಲಿ ಇಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT