ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜಿಂಗ್‌ ಪಾಯಿಂಟ್‌ಗೆ ತೊಡಕು: ಅಪಾರ್ಟ್‌ಮೆಂಟ್‌ಗಳಲ್ಲಿ ವಾಹನ ಮಾಲೀಕರ ಪೇಚಾಟ

Last Updated 13 ಜನವರಿ 2023, 20:27 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ಮಾಲಿನ್ಯ ತಡೆ ಹಾಗೂ ಮಿತವ್ಯಯಿ ಎಂಬ ಕಾರಣಕ್ಕೆ ಹೆಚ್ಚು ಉತ್ಪಾದನೆ ಹಾಗೂ ಮಾರಾಟ
ವನ್ನೂ ಕಾಣುತ್ತಿರುವ ಎಲೆಕ್ಟ್ರಿಕ್‌ ವಾಹನಗಳ (ಇವಿ) ಚಾರ್ಚಿಂಗ್‌ಗೆ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ತೊಡಕಾಗಿದೆ. ಪ್ರತ್ಯೇಕ ‘ಚಾರ್ಜಿಂಗ್‌ ಪಾಯಿಂಟ್‌’ ಸ್ಥಾಪಿಸಲು ಫ್ಲ್ಯಾಟ್‌ ಮಾಲೀಕರಿಗೆ ಅನುಮತಿ ಸಿಗುತ್ತಿಲ್ಲ.

ಇವಿ ಚಾರ್ಚಿಂಗ್‌ಗಾಗಿ ವಾಹನ ನಿಲುಗಡೆ ಪ್ರದೇಶದಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಸ್ಥಾಪಿಸಲು ಫ್ಲ್ಯಾಟ್‌ ಮಾಲೀಕರು ಮುಂದಾಗುತ್ತಿದ್ದಾರೆ. ವಾಹನ ಕಂಪನಿ ಇದನ್ನು ಅಳವಡಿಸಿಕೊಡುತ್ತದೆ. ಆದರೆ, ಅವರಿಗೆ ಅಸೋಸಿಯೇಷನ್‌ನಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಬೇಕು. ಈ ಎನ್‌ಒಸಿ ನೀಡಲು ಕೆಲವು ಅಸೋಸಿಯೇಷನ್‌ಗಳು ನಿರಾಕರಿಸಿವೆ. ಕಟ್ಟಡ ಬೈಲಾದಲ್ಲೂ ಇದಕ್ಕೆ ಅವಕಾಶವಿಲ್ಲ. ಹೀಗಾಗಿ ಕೆಲವು ಫ್ಲ್ಯಾಟ್‌ಮಾಲೀಕರು ಇಂಧನ ಇಲಾಖೆ, ಬೆಸ್ಕಾಂಗೆ ಪತ್ರ ಬರೆದು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಮನವಿಗಳನ್ನು ಪರಿಗಣಿಸಿರುವ ಇಂಧನ ಇಲಾಖೆಯ ಹೆಚ್ಚುವರಿಕಾರ್ಯದರ್ಶಿ ಅಪರ್ಣಾ ಪಾವಟೆ, ‘ಖಾಸಗಿ ಸಮುಚ್ಚಯಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ‘ಚಾರ್ಜಿಂಗ್‌ ಪಾಯಿಂಟ್‌’ ಅಳವಡಿಕೊಳ್ಳಲು ಸಮಸ್ಯೆ ಉಂಟಾಗುತ್ತಿದೆ. ಕಟ್ಟಡ ನಿರ್ಮಾಣ ಬೈಲಾದಲ್ಲಿ ತಿದ್ದುಪಡಿಯಾಗಬೇಕಿದೆ. ಇದನ್ನು ನಗರಾಭಿವೃದ್ಧಿ ಇಲಾಖೆ ಪರಿಶೀಲಿಸಬೇಕು’ ಎಂದು ಡಿ.26ರಂದು ಟಿಪ್ಪಣಿ ಬರೆದು ಕಳುಹಿಸಿದ್ದಾರೆ.

‘ಅಪಾರ್ಟ್‌ಮೆಂಟ್‌ನಲ್ಲಿ ನಮ್ಮ ಫ್ಲ್ಯಾಟ್‌ಗೆ ಇರುವ ಮೀಟರ್‌ನಿಂದಲೇ ಚಾರ್ಜಿಂಗ್‌ ಸೌಲಭ್ಯದ ಪ್ಲಗ್‌ ಅಳವಡಿಸಿ ಕೊಡುವಂತೆ ಮನವಿ ಮಾಡಿದ್ದೆ. ಆದರೆ, ಅಸೋಸಿಯೇಷನ್‌ನವರು ಅನುಮತಿ ನೀಡಿಲ್ಲ. ನಿಲುಗಡೆ ಪ್ರದೇಶವೆಲ್ಲ ಹಾಳಾಗುತ್ತೆ ಎನ್ನುತ್ತಾರೆ’ ಎಂದು ರಂಜನ್‌ ದೂರಿದರು.

‘ವಾಹನ ನಿಲುಗಡೆ ಪ್ರದೇಶದಲ್ಲಿ ನಾಲ್ಕಾರು ವಾಹನಗಳಿಗೆ ಪ್ರತ್ಯೇಕ‌ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರೆ ನೆಲವೆಲ್ಲ ಹಾಳಾಗುತ್ತದೆ. ಎಲ್ಲೆಡೆ ವೈರ್‌ಗಳು ಹರಡಿಕೊಳ್ಳುತ್ತವೆ. ಸುರಕ್ಷತೆ ವಿಷಯದಲ್ಲೂ ಸಮಸ್ಯೆಯಾಗುತ್ತದೆ’ ಎಂದು ಅಪಾರ್ಟ್‌ಮೆಂಟ್‌ ರೆಸಿಡೆಂಟ್ಸ್‌ ಅಸೋಸಿಯೇಷನ್‌ವೊಂದರ ಶ್ರೀನಿವಾಸ್‌ ಹೇಳಿದರು.

ಅಪಾರ್ಟ್‌ಮೆಂಟ್‌ಗಳಲ್ಲಿ ವಾಹನನಿಲುಗಡೆ ಪ್ರದೇಶ ‘ಕಾಮನ್‌ ಫ್ಲೋರ್‌ ಯುಟಿಲಿಟಿ’ ಸ್ಥಳವಾಗಿದ್ದು, ಈ ಪ್ರದೇಶದಲ್ಲಿ ‘ಚಾರ್ಜಿಂಗ್‌ ಪಾಯಿಂಟ್‌’ಗೆ ಅವಕಾಶ ಕೊಟ್ಟರೆ ಅದೆಲ್ಲವೂ ವಾಣಿಜ್ಯವಾಗುತ್ತದೆ. ಅದರಂತೆ ಬೆಸ್ಕಾಂಗೆ ವಿದ್ಯುತ್‌ ದರ ಪಾವತಿಸಬೇಕಾಗುತ್ತದೆ. ನಾಲ್ಕೈದು ವಾಹನಗಳಿಗೆ ಅನುಕೂಲ ಆಗಿ, ಉಳಿದ ಎಲ್ಲರಿಗೂ ಇದು ಹೊರೆಯಾಗುತ್ತದೆ ಎಂಬುದು ಅಪಾರ್ಟ್‌ಮೆಂಟ್‌ ರೆಸಿಡೆಂಟ್ಸ್‌ ಅಸೋಸಿಯೇಷನ್‌ಗಳ ವಾದವಾಗಿದೆ.

ಹೊಸ ಬೈಲಾ ಸಿದ್ಧ..
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಉಪವಿಧಿಗಳು (ಬೈಲಾ) 2003ರಲ್ಲಿ ರಚನೆಯಾಗಿವೆ. ಇವುಗಳನ್ನು ಪರಿಷ್ಕರಿಸಿ ಹೊಸದಾದ ಹಲವು ನಿಯಮಗಳನ್ನು ರಚಿಸಿ ‘ಹೊಸ ಬೈಲಾ’ ಸಿದ್ಧಪಡಿಸಲಾಗಿದೆ. ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯಕ್ಕೆ (ಡಿಟಿಸಿಪಿ) ಬೈಲಾ ಕರಡು ಕಳುಹಿಸಿಕೊಡಲಾಗಿದೆ. ಅದಕ್ಕೆ ಅನುಮೋದನೆ ಸಿಕ್ಕ ಕೂಡಲೇ ಜಾರಿ ಮಾಡಲಾಗುತ್ತದೆ. ಆಗ ಚಾರ್ಜಿಂಗ್‌ ಸೌಲಭ್ಯ ಅಳವಡಿಸಿಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಗಿರೀಶ್‌ ತಿಳಿಸಿದರು.

ಎಲೆಕ್ಟ್ರಿಕಲ್‌ ಆ್ಯಂಡ್‌ ಕಂಪ್ಯೂಟರ್‌ ಎಂಜಿನಿಯರಿಂಗ್‌ ಬಿಲ್ಡಿಂಗ್‌ (ಇಸಿಇಬಿ) ಷರತ್ತನ್ನು ಕಟ್ಟಡ ನಕ್ಷೆ ಅನುಮೋದನೆಯಲ್ಲಿ ಆರು ತಿಂಗಳಿನಿಂದ ಸೇರಿಸಲಾಗಿದೆ. ಇಂತಹ ಕಟ್ಟಡಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕಾಗುತ್ತದೆ. ಆದರೆ ಆರು ತಿಂಗಳ ಹಿಂದೆ ನಕ್ಷೆ ಪಡೆದಿರುವ ಕಟ್ಟಡಗಳಿಗೆ ಇದು ಅನ್ವಯಿಸುವುದಿಲ್ಲ. ಹೀಗಾಗಿ ಹೊಸ ಬೈಲಾ ಬಂದ ಮೇಲೆ ಹಿಂದಿನ ಕಟ್ಟಡಗಳಿಗೂ ಇದು ಅನ್ವಯವಾಗುವಂತೆ ನಿಯಮಗಳನ್ನು ರೂಪಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಕಿಯೋಸ್ಕ್‌ಗಳ ಬಳಕೆ ಉತ್ತಮ...
‘ಅಪಾರ್ಟ್‌ಮೆಂಟ್‌ಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ಗೆ ಖಾಸಗಿ ಸಂಸ್ಥೆಗಳು ಉಚಿತವಾಗಿ ಸ್ಥಾಪನೆ ಮಾಡುತ್ತಿರುವ ಕಿಯೋಸ್ಕ್‌ಗಳು ಉತ್ತಮ. ಎಲ್ಲವನ್ನೂ ಸಂಸ್ಥೆಗೆ ನಿರ್ವಹಿಸಿ, ಕ್ಯೂಆರ್‌ ಕೋಡ್‌ ಮೂಲಕ ಪ್ರೀಪೇಯ್ಡ್‌ ಸೌಲಭ್ಯದಲ್ಲಿ ವಾಹನವನ್ನು ಚಾರ್ಜಿಂಗ್‌ ಮಾಡಿಕೊಳ್ಳಬಹುದು. ಇದು ವೇಗವಾಗಿಯೂ ಆಗುತ್ತದೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ’ ಎಂದು ಕ್ರೆಡೈ- ಬೆಂಗಳೂರು ಅಧ್ಯಕ್ಷ ಭಾಸ್ಕರ್‌ ಟಿ. ನಾಗೇಂದ್ರಪ್ಪ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT