ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ | ಅನುದಾನ ದುರ್ಬಳಕೆ ಹುನ್ನಾರ: ವಿರೋಧ ಪಕ್ಷ ಆರೋಪ

ಎಸ್ಕ್ರೊ ಖಾತೆಯಲ್ಲಿ ನಾಲ್ಕು ಪಿ–ಕೋಡ್‌ಗಳಿಗೆ ₹ 475 ಕೋಟಿ
Last Updated 3 ಜೂನ್ 2020, 21:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 2020–21ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ನಾಲ್ಕು ಪಿ–ಕೋಡ್‌ಗಳಿಗೆ ಸಂಬಂಧಿಸಿ ₹ 475 ಕೋಟಿ ಅನುದಾನವನ್ನು ಎಸ್ಕ್ರೊ ಖಾತೆಯಲ್ಲಿ ಇಡುವ ಪ್ರಸ್ತಾಪವಿದೆ. ಯಾವ ಕಾಮಗಾರಿಗೆ ಈ ಮೊತ್ತವನ್ನು ಬಳಸಲಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸದೆಯೇ ಇಷ್ಟೊಂದು ಮೊತ್ತವನ್ನು ಎಸ್ಕ್ರೊ ಖಾತೆಯಲ್ಲಿಡುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

‘ಬಿಬಿಎಂಪಿ ಉಸ್ತುವಾರಿ ಹೊಣೆಯೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಳಿಯೇ ಇದೆ. ಈಗಿನ ಪಾಲಿಕೆ ಕೌನ್ಸಿಲ್‌ ಅವಧಿ ಮುಂಬರುವ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಈ ನಡುವೆ ಭಾರಿ ಮೊತ್ತದ ಅನುದಾನವನ್ನು ಎಸ್ಕ್ರೊ ವಿಭಾಗದಲ್ಲಿಟ್ಟಿರುವುದರ ಹಿಂದೆ ಹಣ ದುರ್ಬಳಕೆ ಮಾಡುವ ಹುನ್ನಾರ ಅಡಗಿದೆ’ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಆರೋಪಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರಿಗೆ ಪತ್ರ ಬರೆದಿರುವ ವಾಜಿದ್‌, ‘ಈ ಹಿಂದೆ ಎಸ್ಕ್ರೊ ವಿಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬಿಬಿಎಂಪಿ ನಿಧಿಯನ್ನು ಇಟ್ಟಿರುವ ಉದಾಹರಣೆಗಳಿಲ್ಲ. ಯಾವ ಕಾಮಗಾರಿಗೆ ಇದನ್ನು ಬಳಕೆ ಮಾಡಲಾಗುತ್ತದೆ ಎಂದು ನಮೂದಿಸದೇ ಗುಪ್ತವಾಗಿ ಭಾರಿ ಮೊತ್ತವನ್ನು ತೆಗೆದಿಡುವ ಪ್ರಸ್ತಾಪವೇ ಸಂದೇಹ ಹುಟ್ಟಿಸುತ್ತದೆ. ಬಿಬಿಎಂಪಿಗೂ ಇದರಿಂದ ಆರ್ಥಿಕ ಹೊರೆ ಉಂಟಾಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ಎಸ್ಕ್ರೊ ವಿಭಾಗದಲ್ಲಿ ಇಟ್ಟಿರುವ ಮೊತ್ತವನ್ನು ಕುಡಿಯುವ ನೀರು ಪೂರೈಕೆ, ಒಂಟಿ ಮನೆ ನಿರ್ಮಾಣ, ಕೋವಿಡ್‌ ನಿಯಂತ್ರಣ, ಮುಂತಾದ ತುರ್ತು ಕೆಲಸಗಳಿಗೆ ಹೊರತಾಗಿ ಅನ್ಯ ಕಾಮಗಾರಿಗಳಿಗೆ ಬಳಸಬಾರದು ಎಂದು ತಿದ್ದುಪಡಿ ಆದೇಶವನ್ನು ಹೊರಡಿಸಬೇಕು’ ಎಂದು ಅವರು ನಗರಾಭಿವೃದ್ಧಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.

‘ರಸ್ತೆ ಗುಂಡಿ ಮುಚ್ಚುವುದು, ಮಳೆಗಾಲದ ತುರ್ತು ಕಾಮಗಾರಿಗಳು ಹಾಗೂ ಕೆಲವು ತುರ್ತು ನಿರ್ವಹಣಾ ಕಾರ್ಯವನ್ನು ನಡೆಸುವವರಿಗ ತಕ್ಷಣವೇ ಹಣ ಪಾವತಿಗೆ ಅವಕಾಶ ಕಲ್ಪಿಸುವ ಸಲುವಾಗಿ ಈ ಹಿಂದೆ ಎಸ್ಕ್ರೊ ಖಾತೆಯನ್ನು ಆರಂಭಿಸಲಾಗಿತ್ತು. ಆದರೆ, ₹ 475 ಕೋಟಿಯಷ್ಟು ಬಿಬಿಎಂಪಿ ನಿಧಿಯನ್ನು ಇದಕ್ಕೆ ವರ್ಗಾಯಿಸಿದರೆ, ಎರಡು ಮೂರು ವರ್ಷಗಳಿಂದ ಅನುದಾನ ಬಿಡುಗಡೆಗೆ ಕಾಯುತ್ತಿರುವ ಗುತ್ತಿಗೆದಾರರಿಗೆ ಪಾವತಿಗೆ ಹಣಕಾಸಿನ ಕೊರತೆ ಎದುರಾಗಲಿದೆ. ಈ ನಡೆಯಿಂದ ಗುತ್ತಿಗೆದಾರರಿಗೂ ಅನ್ಯಾಯವಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಎಸ್ಕ್ರೊ ಖಾತೆ?‌
‘ತಕ್ಷಣ ಹಣ ಬಿಡುಗಡೆ ಮಾಡುವ ವ್ಯವಸ್ಥೆ ಇಲ್ಲದಿದ್ದರೆ ಕೆಲವು ತುರ್ತು ಕಾಮಗಾರಿಗಳನ್ನು ನಡೆಸಲು ಗುತ್ತಿಗೆದಾರರು ಮುಂದೆ ಬರುವುದಿಲ್ಲ. ತುರ್ತು ಕಾಮಗಾರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಎಸ್ಕ್ರೊ ಖಾತೆ ತೆರೆಯಲಾಗುತ್ತದೆ. ಅನುದಾನ ಲಭ್ಯತೆ ನೋಡಿಕೊಂಡು ಪಾಲಿಕೆಯ ಹಣಕಾಸು ವಿಭಾಗವು ಈ ಖಾತೆಗೆ ಹಣ ವರ್ಗಾಯಿಸುತ್ತದೆ. ಬೇರೆ ಕಾಮಗಾರಿಗಳ ಜ್ಯೇಷ್ಠತೆ ಇದಕ್ಕೆ ಅನ್ವಯಿಸದ ಕಾರಣ ಹಣ ಬಿಡುಗಡೆಗಾಗಿ ಗುತ್ತಿಗೆದಾರರು ವರ್ಷಗಟ್ಟಲೆ ಕಾಯಬೇಕಾಗಿಲ್ಲ’ ಎಂದು ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಎಸ್ಕ್ರೊ ಖಾತೆ: ಯಾವ ಪಿ–ಕೋಡ್‌ಗೆ ಎಷ್ಟು ಮೊತ್ತ? ( ₹ ಕೋಟಿಗಳಲ್ಲಿ)

ಪಿ–ಕೋಡ್‌; ಮೊತ್ತ

ಪಿ–3075; 250

ಪಿ–0190; 150

ಪಿ–2178; 50

ಪಿ–2573; 25

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT