ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆಯುವವರಿಗೆ ಬಲವಂತದಿಂದ ಕೋವಿಡ್‌ ಪರೀಕ್ಷೆ

Last Updated 25 ಆಗಸ್ಟ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಿತ್ಯ ಹೆಚ್ಚೂ ಕಡಿಮೆ 52 ಸಾವಿರದಿಂದ 63 ಸಾವಿರ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೆಲವು ಸರ್ಕಾರಿ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ಪಡೆಯಲು ಬಂದವರನ್ನು ಬಲವಂತದಿಂದ ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಇಷ್ಟೊಂದು ಸಂಖ್ಯೆಯ ಪರೀಕ್ಷೆಗಳು ಸಾಧ್ಯವಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ಮೂಲಗಳ ಪ್ರಕಾರ, ಪೂರ್ವ ವಲಯದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡುವ ಪ್ರತಿ 10 ಮಂದಿಯಲ್ಲಿ ಮೂವರು ಲಸಿಕೆ ಪಡೆಯಲು ಬಂದವರೇ ಆಗಿದ್ದಾರೆ. ಅವರನ್ನು ಒತ್ತಾಯಪೂರ್ವಕವಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಶಾಂತಿನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆ ಪಡೆಯಲು ತೆರಳಿದ್ದ ಐವರು ಸದಸ್ಯರ ಕುಟುಂಬವೊಂದು ತನಗಾದ ಅನುಭವವನ್ನು ಹಂಚಿಕೊಂಡಿದೆ.

‘ಲಸಿಕೆಯ ನೀಡುವುದಕ್ಕೆ ಮುನ್ನ ಆರ್‌ಟಿಪಿಸಿಆರ್‌ ಪರೀಕ್ಷೆಗಾಗಿ ಗಂಟಲ ದ್ರವದ ಮಾದರಿಯನ್ನು ನೀಡಬೇಕಾಗುತ್ತದೆ ಎಂದು ಹೇಳಿದರು’ ಎಂಬುದಾಗಿ 48 ವರ್ಷದ ಮಹಿಳೆಯೊಬ್ಬರು ತಿಳಿಸಿದರು. ಅವರಿಗೆ ಕೋವಿಡ್‌ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಸೋಂಕಿನ ಯಾವುದೇ ಲಕ್ಷಣ ಹೊಂದಿಲ್ಲದ ಆ ಮಹಿಳೆಯು ಈಗ ಆತಂಕಕ್ಕೆ ಒಳಗಾಗಿದ್ದಾರೆ.

‘ಬಿಬಿಎಂಪಿಯು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯನ್ನು (ಆರ್‌ಎಟಿ) ಮಾಡುತ್ತಿದ್ದರೆ, ಸೋಂಕು ಹೊಂದಿರುವವರಿಗೆ ಲಸಿಕೆ ನೀಡಬಾರದು ಎಂಬ ಕಾರಣಕ್ಕೆ ಪರೀಕ್ಷೆ ಮಾಡಿದ್ದಾರೆ ಎಂದು ಭಾವಿಸಬಹುದಿತ್ತು. ಆದರೆ, ಅವರು ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ, ಅದರ ಫಲಿತಾಂಶಕ್ಕೂ ಕಾಯದೆಯೇ ಕೋವಿಡ್‌ ಲಸಿಕೆಯನ್ನು ನೀಡುವುದು ಅರ್ಥವಿಲ್ಲದ ನಡೆ’ ಎಂದು ಅವರು ತಿಳಿಸಿದರು.

ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಯೊಬ್ಬ‌ರು, ‘ಈ ವಿಚಾರ ತಿಳಿದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಐಸಿಎಂಆರ್‌ ನಿಯಮಗಳ ಪ್ರಕಾರ ಕೊರೋನಾ ಸೋಂಕು ಪತ್ತೆಯಾದ ವ್ಯಕ್ತಿ ಗುಣಮುಖರಾಗಿ ಮೂರು ತಿಂಗಳು ಕಳೆಯುವವರೆಗೆ ಅವರಿಗೆ ಲಸಿಕೆ ನೀಡುವಂತಿಲ್ಲ. ಆದರೆ, ಕೆಲವು ಬಿಬಿಎಂಪಿ ತಂಡಗಳು ಉದ್ದೇಶಪೂರ್ವಕವಾಗಿ ಈ ನಿಯಮವನ್ನು ಉಲ್ಲಂಘಿಸುತ್ತಿವೆ. ಅವರಿಗೆ ದೈನಂದಿನ ಗುರಿ ಸಾಧನೆಯಷ್ಟೇ ಮುಖ್ಯ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್‌ ಆಫ್‌ ಬಯೊಸೈನ್ಸಸ್‌ನ ವೈರಾಣು ತಜ್ಞ ಡಾ.ಶಾಹಿದ್‌ ಜಮೀಲ್‌, ‘ಕೊರೊನಾ ಸೋಂಕು ಇರುವಾಗ ಲಸಿಕೆ ಪಡೆದರೆ, ಆರೋಗ್ಯದ ಮೇಲೆ ಯಾವುದೇ ನೇರ ಪರಿಣಾಮ ಉಂಟಾಗದು. ಆದರೆ, ಲಸಿಕೆಯ ಡೋಸ್ ವ್ಯರ್ಥವಾಗುತ್ತದೆ ಅಷ್ಟೇ’ ಎಂದರು.

‘ಕೊರೊನಾ ಸೋಂಕು ಹೊಂದಿರುವ ವ್ಯಕ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿರುತ್ತವೆ. ಅವರಲ್ಲಿ ಪ್ರತಿಕಾಯಗಳು ಸ್ಥಿರೀಕರಣಗೊಳ್ಳಬೇಕಾದರೆ, ಲಸಿಕೆ ನೀಡುವುದಕ್ಕೆ ಮುನ್ನ ಅವರ ರೋಗ ನಿರೋಧಕತೆಯ ನಿರ್ದಿಷ್ಟ ಮಟ್ಟಕ್ಕೆ ತಗ್ಗಬೇಕು. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರವು, ಕೋವಿಡ್‌ನಿಂದ ಗುಣಮುಖರಾದವರು ಮೂರು ತಿಂಗಳು ಕಳೆದ ಬಳಿಕ ಲಸಿಕೆ ಪಡೆಯಬೇಕು ಎಂದು ಸಮಯ ನಿಗದಿ ಪಡಿಸಿದೆ’ ಎಂದು ಅವರು ವಿವರಿಸಿದರು.

‘ಕೋವಿಡ್ ಇರುವಾಗಲೇ ಲಸಿಕೆ ಪಡೆದಿರುವ ಮಹಿಳೆ ಮುಂದೆ ಲಸಿಕೆಯ ಎರಡನೇ ಡೋಸ್‌ ಪಡೆದರೂ ಅದು ಮೊದಲ ಡೋಸ್‌ ಪಡೆದ ಹಾಗೆ’ ಎಂದು ಅವರು ತಿಳಿಸಿದರು.

ಗುರಿ ಸಾಧನೆಗೆ ಕೋವಿಡ್‌ ಪರೀಕ್ಷೆ: ಅಲ್ಲಗಳೆದ ಬಿಬಿಎಂಪಿ

ಲಸಿಕೆ ಪಡೆಯುವವರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸುವುದು ಶಿಷ್ಟಾಚಾರಕ್ಕೆ ವಿರುದ್ಧವಾದುದು ಎಂಬುದನ್ನು ಪೂರ್ವ ವಲಯದ ಅಧಿಕಾರಿ ಡಾ.ಶ್ರೀನಿವಾಸ್‌ ಒಪ್ಪಿಕೊಂಡರು. ‘ಸೋಂಕಿನ ಲಕ್ಷಣ ಇರುವವರನ್ನು ರ‍್ಯಾಟ್‌ ಪರೀಕ್ಷೆಗೆ ಒಳಪಡಿಸಬಹುದು’ ಎಂದು ಅವರು ಅಭಿಪ್ರಾಯಪ‍ಟ್ಟರು. ಲಸಿಕೆ ಪಡೆಯಲು ಬಂದವರನ್ನು ಪಿಎಚ್‌ಸಿಗಳಲ್ಲಿ ಕೋವಿಡ್‌ ಪರೀಕ್ಷೆಗೆ ನಿಗದಿ ಪಡಿಸಿದ ದೈನಂದಿನ ಗುರಿ ಸಾಧನೆ ಸಲುವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂಬುದನ್ನು ಅವರು ಅಲ್ಲಗಳೆದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ನಗರದ ಎಲ್ಲ ಪಿಎಚ್‌ಸಿಗಳ ಸಿಬ್ಬಂದಿಗೆ ಈ ವಿಚಾರವಾಗಿ ಎಚ್ಚರಿಕೆ ನೀಡುತ್ತೇವೆ. ಈ ಬಗ್ಗೆ ಸಲಹೆಗಳನ್ನೂ ನೀಡಲಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT