ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಕಾರ್ಯದಲ್ಲಿ ತೊಡಗಿದರೆ ವೇತನಕ್ಕೆ ಕತ್ತರಿ

ಪರಿಸರ ಎಂಜಿನಿಯರ್‌ಗಳಿನ್ನು ಕಸ ನಿರ್ವಹಣೆಗೆ ಸೀಮಿತ: ನಗರಾಭಿವೃದ್ಧಿ ಇಲಾಖೆ ಸೂಚನೆ
Last Updated 5 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪರಿಸರ ಎಂಜಿನಿಯರ್‌ಗಳನ್ನು ಇನ್ನು ಕಡ್ಡಾಯವಾಗಿ ಕಸ ನಿರ್ವಹಣೆಯ ಕಾರ್ಯಕ್ಕೆ ಮಾತ್ರ ನಿಯೋಜಿಸಬೇಕು. ಇತರ ಯಾವುದೇ ವಿಭಾಗಗಳ ಪ್ರಭಾರ ಹೊಣೆಯನ್ನು ಅವರಿಗೆ ವಹಿಸಬಾರದು. ಒಂದು ವೇಳೆ ಬೇರೆ ವಿಭಾಗದಲ್ಲಿ ಕಾರ್ಯನಿರ್ವಹಿಸಿದರೆ ಅವರಿಗೆ ವೇತನವನ್ನೇ ನೀಡಬಾರದು.’

ಬಿಬಿಎಂಪಿಗೆ ನಗರಾಭಿವೃದ್ದಿ ಇಲಾಖೆ ನೀಡಿರುವ ಸ್ಪಷ್ಟ ಸೂಚನೆ ಇದು. ಕಸ ನಿರ್ವಹಣೆ ಕುರಿತು ಚರ್ಚಿಸಲು ಆ.1ರಂದು ನಡೆದ ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಬಿ.ಎಚ್‌.ಅನಿಲ್‌ ಕುಮಾರ್‌ ಈ ಕುರಿತು ನಿರ್ದೇಶನ ನೀಡಿದ್ದು, ಸಭೆಯ ನಡಾವಳಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಸಹಾಯಕ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಪರಿಸರ ಎಂಜಿನಿಯರ್‌ಗಳು ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೆ, ಅವರನ್ನು ತಕ್ಷಣವೇ ಕಸ ನಿರ್ವಹಣೆ ವಿಭಾಗಕ್ಕೆ ವರ್ಗ ಮಾಡಬೇಕು’ ಎಂದೂ ಎಸಿಎಸ್‌ ನಿರ್ದೇಶನ ನೀಡಿದ್ದಾರೆ.

ಕಸ ನಿರ್ವಹಣೆ ಸೂಕ್ಷ್ಮ ವಿಷಯ. ಈ ಕಾರ್ಯವನ್ನು ಪಾಲಿಕೆಯು ಕಡ್ಡಾಯವಾಗಿ ನಿರ್ವಹಿಸಬೇಕು. ಕಸ ವಿಲೇವಾರಿ ವ್ಯವಸ್ಥೆಯ ನ್ಯೂನತೆಗಳಿಂದಾಗಿ ಪಾಲಿಕೆಯ ಜೊತೆ ರಾಜ್ಯ ಸರ್ಕಾರವೂ ಮುಜುಗರಕ್ಕೆ ಒಳಗಾಗುವ ಸನ್ನಿವೇಶಗಳು ಪದೇ ಪದೇ ಸೃಷ್ಟಿಯಾಗುತ್ತಿವೆ. ಇದಕ್ಕೆ ಅಧಿಕಾರಿ ವೃಂದದ ನಿರ್ಲಕ್ಷ್ಯವೇ ಕಾರಣ. ಹಸಿರು ನ್ಯಾಯಮಂಡಳಿ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಕಾಲಕಾಲಕ್ಕೆ ನೀಡಿರುವ ನಿರ್ದೇಶನಗಳಿಗೆ ಅನುಗುಣವಾಗಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸದಿದ್ದರೆ ಅಥವಾ ಆದೇಶ ಹಾಗೂ ಸೂಚನೆಗಳನ್ನು ಪಾಲನೆ ಮಾಡದಿದ್ದರೆ ಶಿಸ್ತುಕ್ರಮಕ್ಕೆ ಗುರಿಯಾಗಬೇಕಾದೀತು ಎಂದೂ ಎಚ್ಚರಿಕೆ ನೀಡಿದ್ದಾರೆ.

ಭಾರಿ ಪ್ರಮಾಣದ ಕಸ ರಾತ್ರಿ ವಿಲೇವಾರಿ

ಅಪಾರ್ಟ್‌ಮೆಂಟ್ ಸಮುಚ್ಚಯಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ಉತ್ಪತ್ತಿಯಾಗುವ ಭಾರಿ ಪ್ರಮಾಣದ ಕಸವನ್ನು ರಾತ್ರಿ 10ರಿಂದ ಬೆಳಿಗ್ಗೆ 6ರ ಒಳಗೆ ವಿಲೇ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಮನೆ ಮನೆಗಳಲ್ಲಿ ಸಂಗ್ರಹಿಸುವ ಕಸ ಮತ್ತು ಅಪಾರ್ಟ್‌ಮೆಂಟ್ ಸಮುಚ್ಚಯ, ವಾಣಿಜ್ಯ ಸಂಕೀರ್ಣಗಳಲ್ಲಿ ಉತ್ಪತ್ತಿಯಾಗುವ ಭಾರಿ ಪ್ರಮಾಣದ ಕಸವನ್ನು ಒಂದೇ ಅವಧಿಯಲ್ಲಿ ಸಂಗ್ರಹಿಸಲಾಗುತ್ತಿತ್ತು. ಎರಡೂ ಕಸವನ್ನು ಮಿಶ್ರ ಮಾಡುವುದಕ್ಕೆ ಇದರಿಂದ ಅವಕಾಶ ಸಿಗುತ್ತಿತ್ತು. ಇದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

‘ಕಸ ವಿಂಗಡಣೆ ಶೇ 40ಕ್ಕಿಂತಲೂ ಕಡಿಮೆ’

ನಗರದಲ್ಲಿ ಉತ್ಪತ್ತಿಯಾಗುವ ಕಸದಲ್ಲಿ ಶೇ 20ರಿಂದ ಶೇ 40ರಷ್ಟು ಕಸವನ್ನು ಮಾತ್ರ ಹಸಿ ಕಸ ಮತ್ತು ಒಣ ಕಸ ಎಂದು ವಿಂಗಡಣೆ ಮಾಡಲಾಗುತ್ತಿದೆ. 2016ರ ಕಸ ನಿರ್ವಹಣೆ ನಿಯಮಗಳ ಪ್ರಕಾರ ಯಾವುದಕ್ಕೂ ಬಳಸಲು ಸಾಧ್ಯವಿಲ್ಲದ ನಿಷ್ಕ್ರಿಯ ಕಸವನ್ನು (ಇನರ್ಟ್‌) ಮಾತ್ರ ಭೂಭರ್ತಿ ಕೇಂದ್ರಗಳಲ್ಲಿ ವಿಲೇ ಮಾಡಬೇಕು ಎಂಬ ನಿಯಮವಿದೆ. ಕಸ ವಿಂಗಡಣೆ ಪ್ರಕ್ರಿಯೆ ಸಮರ್ಪಕವಾಗಿ ನೋಡಿಕೊಳ್ಳುವಂತೆಯೂ ನಗರಾಭಿವೃದ್ಧಿ ಇಲಾಖೆ ಪಾಲಿಕೆಗೆ ಸೂಚಿಸಿದೆ.

ಸಭೆಯ ಇತರ ನಿರ್ಣಯಗಳು

* ನಿಷೇಧಿತ ಪ್ಲಾಸ್ಟಿಕ್‌ ಬಳಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪ್ರತಿ ತಿಂಗಳೂ ವರದಿ ಸಲ್ಲಿಸಬೇಕು

* ಆಯಾ ವಲಯದ ಅಧಿಕಾರಿಗಳು ಕಸ ವಿಲೇವಾರಿ ಬಗ್ಗೆ ನಿಗಾ ಇಡಲು ನಿತ್ಯ ಬೆಳಿಗ್ಗೆ ಪರಿವೀಕ್ಷಣೆ ನಡೆಸಬೇಕು

* ಪ್ರತಿ ಶನಿವಾರ ಪಾಲಿಕೆಯ ಯಾವುದಾದರೂ ಒಂದು ವಾರ್ಡ್‌ನಲ್ಲಿ ಸ್ವಚ್ಛತಾ ಆಂದೊಲನ ಹಮ್ಮಿಕೊಳ್ಳಬೇಕು

* ಹಸಿ ಕಸ ಮತ್ತು ಒಣ ಕಸವನ್ನು ಮನೆಯಲ್ಲೇ ವಿಂಗಡಿಸುವ ಬಗ್ಗೆ ಮನೆಯ ಮಾಲೀಕರಿಂದ ಮತ್ತು ವಾರ್ಡ್‌ ಸಮಿತಿಗಳಿಂದ ಪ್ರಮಾಣಪತ್ರ ಪಡೆಯಬೇಕು

* ಅವೆನ್ಯೂ ರಸ್ತೆ, ಕೆ.ಆರ್‌.ಮಾರುಕಟ್ಟೆ ಬಳಿ ಕಸ ವಿಲೇವಾರಿ ಆಗದೇ ರಾಶಿ ಬಿದ್ದ ಬಗ್ಗೆ ಆ ವಲಯದ ಆರೊಗ್ಯಾಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು

* ಆಟೊ ಟಿಪ್ಪರ್‌ಗಳಲ್ಲಿ ಕಸ ಸಾಗಿಸುವಾಗ ಅದನ್ನು ಕಡ್ಡಾಯವಾಗಿ ಮುಚ್ಚಿರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT