ಸೋಮವಾರ, ಜನವರಿ 24, 2022
28 °C

ವಾರ್ಡ್‌ ಹಂತದಲ್ಲೇ ಟ್ರಯಾಜ್‌: ಬಿಬಿಎಂಪಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟವರಿಗೆ ಯಾವ ತರಹದ ಚಿಕಿತ್ಸೆಯ ಆಗತ್ಯವಿದೆ, ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ವೈದ್ಯಕೀಯ ತಪಾಸಣೆ (ಟ್ರಯಾಜ್‌) ನಡೆಸುವುದಕ್ಕೆ ವಾರ್ಡ್‌ ಹಂತದಲ್ಲೇ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

‘ಈಗಾಗಲೇ ಚಾಲ್ತಿಯಲ್ಲಿರುವ ಸಂಚಾರ ಟ್ರಯಾಜಿಂಗ್‌ ವ್ಯವಸ್ಥೆ ಮುಂದುವರಿಯಲಿದೆ. ಅದರ ಜೊತೆಗೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯದ ಬಗ್ಗೆ ತಿಳಿದುಕೊಳ್ಳಲು ಆಯಾ ವಾರ್ಡ್‌ನಲ್ಲೇ ವೈದ್ಯಕೀಯ ತಪಾಸಣೆ ನಡೆಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

‘ಸೋಂಕಿತರಲ್ಲಿ ಶೇ 95ರಷ್ಟು ಮಂದಿ ಆಸ್ಪತ್ರೆ ಸೇರುವ ಪ್ರಮೇಯವೇ ಎದುರಾಗದು. ಅವರು ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಎರಡನೇ ಅಲೆಯ ಸಂದರ್ಭದಲ್ಲೂ ವಾರ್ಡ್ ಮಟ್ಟದಲ್ಲಿ ವೈದ್ಯಕೀಯ ಟ್ರಯಾಜಿಂಗ್‌ ವ್ಯವಸ್ಥೆ ಪ್ರಾರಂಭಿಸಿದ್ದೆವು. ಈ ಸಲ ಅದರ ಪ್ರಯೋಜನ ಪೂರ್ಣಪ್ರಮಾಣದಲ್ಲಿ ಸಿಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ದಿನಕ್ಕೆ ಒಂದು ಸಾವಿರದಷ್ಟಿದ್ದ ಪ್ರಕರಣಗಳ ಸಂಖ್ಯೆ ಮರುದಿನ 2 ಸಾವಿರಕ್ಕೆ, ಅದರ ಮೂರನೇ ದಿನ ಮೂರು ಸಾವಿರಕ್ಕೆ ಹೆಚ್ಚಳ ಆಗುತ್ತಿದೆ. ಇದನ್ನು ನಿಯಂತ್ರಿಸದಿದ್ದರೆ ಜನರ ಜೀವನ ಅಸ್ತವ್ಯಸ್ತ ಆಗಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈಗಲೇ ನಿರ್ಬಂಧ ವಿಧಿಸಿದರೆ ಸೋಂಕು ಹರಡುವಿಕೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು’ ಎಂದು ತಿಳಿಸಿದರು.

‘ಜನ ಪರಸ್ಪರ ಬೆರೆತಾಗ ಮಾತ್ರ ಸೋಂಕು ಹರಡುತ್ತದೆ. ಹಾಗಾಗಿ ಹೆಚ್ಚು ಜನ ಸೇರುವ ಕಡೆ ಹೋಗುವುದನ್ನು ತಪ್ಪಿಸಬೇಕಿದೆ. ಈ ಕಾರಣದಿಂದಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರ ಸಂಖ್ಯೆಗೆ ಮಿತಿ ನಿಗದಿಪಡಿಸಿದ್ದೇವೆ. ಕಾರ್ಯಕ್ರಮಗಳಲ್ಲಿ ಜನ ಸೇರುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂಬುದೇ ಇದರ ಹಿಂದಿನ ಉದ್ದೇಶ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದೇ ಜನರ ಪಾಲಿನ ರಕ್ಷಾ ಕವಚ. ಲಸಿಕೆ ಹಾಕಿಸಿಕೊಂಡವರಿಗೆ ಸೊಂಕು ತಗುಲಿದರೂ, ಅವರು ಗಂಭೀರ ಅನಾರೋಗ್ಯಕ್ಕೆ ಒಳಗಾಗುವ ಸ್ಥಿತಿ ಎದುರಾಗದು’ ಎಂದರು. ‘ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಇಲ್ಲದವರು ಕೋವಿಡ್‌ ಆರೈಕೆ ಕೇಂದ್ರಕ್ಕೆ ತೆರಳಬಹುದು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಇಂತಹ ಕೇಂದ್ರದ ಸ್ಥಾಪನೆಗೆ ಕ್ರಮ ಕೈಗೊಂಡಿದ್ದೇವೆ’ ಎಂದರು.

‘ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಒಮೈಕ್ರಾನ್‌ನಲ್ಲಿರುವ ತೀವ್ರತೆ ಕಡಿಮೆ ಇದೆ. ಸೋಂಕಿತರು ಆಸ್ಪತ್ರೆಗೆ ಸೇರುವ ಪ್ರಮೇಯ ಕಡಿಮೆ. ದಾಖಲಾದರೂ ಐದೇ ದಿನಗಳಲ್ಲಿ ಗುಣಮುಖರಾಗಿ ಮರಳಬಹುದು’ ಎಂದರು.

‘ಲಸಿಕೆಯ ಎರಡೂ ಡೋಸ್‌ ಪಡೆದವರಿಗಷ್ಟೇ ಪ್ರವೇಶ’

‘ಬಾರ್ ಮತ್ತು ರೆಸ್ಟೋರಂಟ್‌ಗಳಿಗೆ ಲಸಿಕೆಯ ಎರಡು ಡೋಸ್‌ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶ. ಶೇ 50ರಷ್ಟು ಸಾಮರ್ಥ್ಯದಲ್ಲಿ ಮಾತ್ರ ಕಾರ್ಯಾಚರಣೆ ನಡೆಸಲು ನಿರ್ಬಂಧ ವಿಧಿಸಲಾಗಿದೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

‘ಸಾರ್ವಜನಿಕ ವಾಹನ ಬಳಕೆಗೂ ಲಸಿಕೆಯ ಎರಡೂ ಡೋಸ್‌ ಪಡೆದಿರುವುದನ್ನು ಕಡ್ಡಾಯಗೊಳಿಸಬೇಕು ಎಂಬ ಷರತ್ತು ವಿಧಿಸುವಂತೆ ಬಿಬಿಎಂಪಿ ಕೋರಿತ್ತು. ಆದರೆ, ಸರ್ಕಾರ ಈ ಕುರಿತು ಇನ್ನೂ ಆದೇಶ ಹೊರಡಿಸಿಲ್ಲ’ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

‘ಆಮ್ಲಜನಕ ಪೂರೈಕೆ, ಹಾಸಿಗೆ ಕೊರತೆ ಇಲ್ಲ’

‘ನಗರದಲ್ಲಿ ಕೋವಿಡ್‌ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ 300 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿರುವವರಲ್ಲಿ ಶೇ 90ರಷ್ಟು ಮಂದಿ ಸಾಮಾನ್ಯ ಹಾಸಿಗೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಮ್ಲಜನಕ ಪೂರಣ ವ್ಯವಸ್ಥೆ ಅಗತ್ಯ ಇಲ್ಲ. ಆಮ್ಲಜನಕದ ಕೊರತೆಯೂ ಇಲ್ಲ. ಈ ಬಗ್ಗೆ ಆತಂಕ ಬೇಡ’ ಎಂದು ಗೌರವ್‌ ಗುಪ್ತ ತಿಳಿಸಿದರು.

‘ಆಮ್ಲಜನಕ ಪೂರೈಕೆ/ವೆಂಟಿಲೇಟರ್‌ ವ್ಯವಸ್ಥೆ ಇರುವ 7 ಸಾವಿರ ಹಾಸಿಗೆಗಳು ಹಾಗೂ 12 ಸಾವಿರದಷ್ಟು ಸಾಮಾನ್ಯ ಹಾಸಿಗೆಗಳು ಕೋವಿಡ್‌ ಚಿಕಿತ್ಸೆಗೆ ಲಭ್ಯ ಇವೆ’ ಎಂದು ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು