ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆ ಸಂರಕ್ಷಣೆ– ಎಚ್ಚರಿಕೆಯ ಹೆಜ್ಜೆ ಅಗತ್ಯ

‘ಬಿಬಿಎಂಪಿ ಕಾಯ್ದೆ 2020’ರ ಸೆಕ್ಷನ್ 298ರಲ್ಲಿ ನಗರದ ಪರಂಪರೆ ಸಂರಕ್ಷಣೆ ವಿಚಾರ ಪ್ರಸ್ತಾಪ
Last Updated 17 ಫೆಬ್ರುವರಿ 2021, 22:30 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ತಲೆ ಎತ್ತಿದ ನಗರ ಬೆಂಗಳೂರು. ಹಲವಾರು ಕೋಟೆ ಕೊತ್ತಲಗಳು, ಅರಮನೆಗಳು, ಈ ನಗರದ ಪಾರಂಪರಿಕ ಹಿರಿಮೆಯನ್ನು ಈಗಲೂ ಸಾರುತ್ತಿವೆ. ನೆಲದ ಪರಂಪರೆಯ ತಳಹದಿಯ ಮೇಲೆ ಭವಿಷ್ಯದ ನಗರವನ್ನು ಕಟ್ಟುವುದಕ್ಕೆ ಕಾಯ್ದೆಯ ಬಲವೂ ಬೇಕು.

ಇನ್ನೊಂದೆಡೆ, ‘ಸಾವಿರ ಕೆರೆಗಳ ಬೀಡು’ ಎಂದು ಹೆಸರಾಗಿದ್ದ ಈ ನಗರದ ಅನೇಕ ಐತಿಹಾಸಿಕ ಕೆರೆಗಳು ಹೇಳಹೆಸರಿಲ್ಲದಂತಾಗಿವೆ. ಶತಮಾನಗಳಷ್ಟು ಹಳೆಯ ದೇಗುಲಗಳ ಆಸುಪಾಸಿನಲ್ಲಿದ್ದ ಶಾಸನಗಳೂ ಕಣ್ಮರೆಯಾಗಿವೆ. ಇತಿಹಾಸದ ಹೆಜ್ಜೆ ಗುರುತುಗಳನ್ನು, ಕುರುಹುಗಳನ್ನು ಕಳೆದುಕೊಳ್ಳುವುದಕ್ಕೆ ಕಾಯ್ದೆಯ ಬಲವಿಲ್ಲದಿರುವುದೂ ಕಾರಣ. ಇದನ್ನು ಮನಗಂಡು ‘ಬಿಬಿಎಂಪಿ ಕಾಯ್ದೆ 2020’ಯ ಸೆಕ್ಷನ್ 298 ರಲ್ಲಿ ನಗರದ ಪರಂಪರೆ ಸಂರಕ್ಷಣೆ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ.

ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಪರಂಪರೆ ಸಂರಕ್ಷಣೆ ಸಮಿತಿ ರಚನೆ, ಇಂತಹ ಕಟ್ಟಡಗಳ ಅಥವಾ ಪ್ರಾಂತಗಳ ಪಟ್ಟಿ ತಯಾರಿಸುವುದು, ಅವುಗಳಿಗೆ ಶ್ರೇಣಿ ನೀಡುವ ಹಾಗೂ ಪ್ರೋತ್ಸಾಹಧನ ನೀಡುವಂತಹ ಅಂಶಗಳನ್ನು ಕಾಯ್ದೆಯಲ್ಲಿ ಅಡಕಗೊಳಿಸಲಾಗಿದೆ. ಇದನ್ನು ನಗರ ಯೋಜನಾ ತಜ್ಞರು ಸ್ವಾಗತಿಸಿದ್ದಾರೆ. ಅದರ ಜೊತೆಗೇ, ಪರಂಪರೆ ರಕ್ಷಣೆಗೆ ಇನ್ನಷ್ಟು ಅಂಶಗಳನ್ನು ಸೇರಿಸುವ ಅಗತ್ಯವೂ ಇದೆ ಎನ್ನುವುದು ಅವರ ಅಭಿಪ್ರಾಯ.

‘ಬಿಬಿಎಂಪಿ ಕಾಯ್ದೆಯಲ್ಲಿ ಪರಂಪರೆ ಎಲ್ಲೆಗಳಲ್ಲಿರುವ ಪಟ್ಟಿ ಮಾಡಿದ ಖಾಸಗಿ ಕಟ್ಟಡಗಳ ಮರು ನಿರ್ಮಾಣಕ್ಕಾಗಿ ಮುಖ್ಯ ಆಯುಕ್ತರ ಅಧ್ಯಕ್ಷತೆಯ ಪರಂಪರೆ ಸಂರಕ್ಷಣಾ ತಾಂತ್ರಿಕ ಸಮಿತಿಯ ಅನುಮೋದನೆ ಪಡೆಯಬೇಕು ಎಂದಷ್ಟೇ ಗೊತ್ತುಪಡಿಸಲಾಗಿದೆ. ಈ ಬಗ್ಗೆ ವಿಶೇಷ ಕಟ್ಟಡ ಬೈಲಾಗಳನ್ನು ನೇರವಾಗಿ ಬಿಬಿಎಂಪಿ ಕಾಯ್ದೆಯಲ್ಲಿಯೇ ವಿವರವಾಗಿ ಅಳವಡಿಸಿಕೊಳ್ಳುವುದು, ಪರಿಣಾಮಕಾರಿ ನಿರ್ವಹಣೆಗೆ ಅವಶ್ಯಕ’ ಎಂದು ಅಭಿಪ್ರಾಯಪಡುತ್ತಾರೆ ಸೆಂಟರ್ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ ಸಂಸ್ಥೆಯ ನಿರ್ದೇಶಕ ಸಿ.ಆರ್‌.ರವೀಂದ್ರ.

‘ನಗರ ಪರಂಪರೆಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿಯನ್ನು ಪರಂಪರೆ ಸಂರಕ್ಷಣಾ ನಿಯಂತ್ರಕ ಪ್ರಾಧಿಕಾರವೆಂದು ಘೋಷಿಸಿಕೊಳ್ಳುವುದು ಸೂಕ್ತ. ಪರಂಪರೆ ಸಂರಕ್ಷಣಾ ಸಮಿತಿಯು ತನ್ನ ತೀರ್ಮಾನಗಳನ್ನು ಅಥವಾ ಸಲಹೆ, ಸೂಚನೆ, ಶಿಫಾರಸ್ಸುಗಳನ್ನು ದಾಖಲಿಸುವ ಪೂರ್ವದಲ್ಲಿ ಬಿಬಿಎಂಪಿ ಕೌನ್ಸಿಲ್‌ನಿಂದ/ ಸ್ಥಾಯಿ ಸಮಿತಿಯಿಂದ ಅನುಮೋದನೆಯನ್ನು (ಪರಂಪರೆ ಸಂರಕ್ಷಣಾ ನಿಯಂತ್ರಕ ಪ್ರಾಧಿಕಾರ) ಪಡೆಯತಕ್ಕದ್ದು ಎಂಬ ಅಂಶವನ್ನು ಸೇರಿಸಬೇಕು’ ಎಂದು ಅವರು ಸಲಹೆ ನೀಡಿದರು.

‘ಪರಂಪರೆ ಸಂರಕ್ಷಣೆ ಸಮಿತಿಯು ತನ್ನ ಶಿಫಾರಸ್ಸನ್ನು ಪಾರಂಪರಿಕ ಸ್ಥಳಗಳ ಆವರಣಗಳ ಕಟ್ಟಡ ನಿರ್ಮಾಣ ನಕ್ಷೆಯನ್ನು ಮಂಜೂರು ಮಾಡುವ ಪೂರ್ವದಲ್ಲಿ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರಗಳನ್ನು ಎಷ್ಟು ಪ್ರಮಾಣದಲ್ಲಿ ನೀಡಬಹುದು ಎಂಬ ಸೂಚನೆಗಳನ್ನು ಪಾಲಿಕೆಯ ನಗರ ಯೋಜನೆ ವಿಭಾಗದ ಅಧಿಕಾರಿಗಳಿಗೆ ನೀಡಬೇಕು. ಪಾರಂಪರಿಕ ಸ್ಥಳಗಳ ಆವರಣದಲ್ಲಿ ಅಭಿವೃದ್ಧಿ ಹಕ್ಕು ಪ್ರಮಾಣದ ಪತ್ರಗಳನ್ನು ಉಪಯೋಗಿಸಲು ಅನುಮತಿ ನೀಡಬಹುದೇ ಅಥವಾ ಎಷ್ಟರ ಮಟ್ಟಿಗೆ ನೀಡಬಹುದು ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಇದು ಭವಿಷ್ಯದಲ್ಲಿ ಕೆಲವು ಸಮಸ್ಯೆಗಳಿಗೆ ಕಾರಣವಾಗಲಿದೆ’ ಎಂದು ವಿವರಿಸಿದರು.

‘ನಗರಾಭಿವೃದ್ಧಿ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ಬೆಂಗಳೂರು ನಗರದ ಪರಂಪರೆಯ ನಿಯಂತ್ರಣಕ್ಕೆ ಸಂಬಂಧಿಸಿದ ಅಂಶಗಳು 1961ರ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ (ಕೆಟಿಸಿಪಿ) ಕಾಯ್ದೆ ಮತ್ತು 1976ರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಾಯ್ದೆಗಳಲ್ಲೂ ಸಂಯೋಜಿಸಲಾಗಿದ್ದು, ಇವುಗಳು ಇನ್ನೂ ಜಾರಿಯಲ್ಲಿವೆ. ಬಿಡಿಎ ಕಾಯ್ದೆಯ ಸೆಕ್ಷನ್‌ 51ರಡಿ ‘ಬೆಂಗಳೂರು ಅರ್ಬನ್‌ ಆರ್ಟ್‌ ಕಮಿಷನ್‌’ ಅನ್ನು ಪುನರ್ರಚಿಸಿ 2020ರ ಬಿಬಿಎಂಪಿ ಕಾಯ್ದೆಯಲ್ಲೂ ಇದಕ್ಕೆ ಸಂಬಂಧಿಸಿ ನೇರ ಉಪವಿಧಿಗಳನ್ನು ಕಲ್ಪಿಸಿಕೊಳ್ಳುವುದು ಸಮಂಜಸ. ಇಲ್ಲದಿದ್ದರೆ ಇವುಗಳಿಂದ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ’ ಎಂದು ವಿಶ್ಲೇಷಿಸುತ್ತಾರೆ ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಪಿ.ಜಿ.ಶೆಣೈ.

‘ಬೆಂಗಳೂರು ಅರ್ಬನ್‌ ಆರ್ಟ್‌ ಕಮಿಷನ್‌ ಮತ್ತು ಬೆಂಗಳೂರು ಪರಂಪರೆ ಸಂರಕ್ಷಣಾ ಸಮಿತಿಯು ಕೇಂದ್ರ ಸರ್ಕಾರದ ಪ್ರಾಚೀನ ಸ್ಮಾರಕಗಳ ಮತ್ತು ಪ್ರಾಚ್ಯ ತಾಣಗಳ ಮತ್ತು ಕುರುಹುಗಳ (ತಿದ್ದುಪಡಿ ಮತ್ತು ಊರ್ಜಿತಗೊಳಿಸುವಿಕೆ) ಕಾಯ್ದೆ –2010’ರ ಅಡಿಯಲ್ಲಿ ರಚಿಸುವ ನಿಯಮಾವಳಿಗಳಿಗೆ ಮತ್ತು ಕೇಂದ್ರ ಸರ್ಕಾರವು ಕಾಲ ಕಾಲಕ್ಕೆ ನೀಡುವ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕಾಗಿರುತ್ತದೆ. ಬಿಬಿಎಂಪಿ ಕಾಯ್ದೆಯಲ್ಲಿ ‘ಪಾರಂಪರಿಕ ಕಟ್ಟಡ’ ‘ಪರಂಪರೆ ವಲಯ’ ಮತ್ತು ‘ಪರಂಪರೆ ಪ್ರಾಂತ’ ಎಂಬ ಪದಗಳನ್ನು ವಿವರಣೆಗಳೊಂದಿಗೆ ವ್ಯಾಖ್ಯಾನಿಸಬೇಕು. ಪರಂಪರೆ ಪ್ರಾಂತವನ್ನು ಬಿಬಿಎಂಪಿ ಅಧಿಸೂಚಿಸಿದ ಪ್ರದೇಶವೆಂದು ಘೋಷಿಸಬೇಕು. ಐತಿಹಾಸಿಕ ಪ್ರಾಮುಖ್ಯತೆ ಇರುವ ಖಾಸಗಿ ಕಟ್ಟಡಗಳು ಎಲ್ಲಿ ನೆಲೆಗೊಂಡಿವೆ ಎಂಬುದನ್ನು ಮತ್ತು ಈ ಕಟ್ಟಡಗಳ ವಿನ್ಯಾಸಗಳನ್ನು ಕಾಯ್ದುಕೊಳ್ಳಲು ಅವು ಬಿಬಿಎಂಪಿ ಪರಂಪರೆ ಸಂರಕ್ಷಣೆ ಸಮಿತಿಯ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ ಎಂದು ನಿರ್ಬಂಧಗಳನ್ನುಈ ಅಧಿಸೂಚನೆಯಲ್ಲಿ ಅಳವಡಿಸಬೇಕು. ಇಂತಹ ಅಧಿಸೂಚನೆಗಳನ್ನು ಹೊರಡಿಸಲು ಅನುಸರಿಸಬೇಕಾದ ವಿಧಾನಗಳನ್ನು ರೀತಿ ರಿವಾಜುಗಳನ್ನು ಪರಂಪರೆ ಸಂರಕ್ಷಣೆ ಕುರಿತ ಬೈಲಾಗಳಲ್ಲಿ ಸರಿಯಾಗಿ ನಿರೂಪಿಸಬೇಕು’ ಎಂದು ಅವರು ಸಲಹೆ ನೀಡಿದರು.

ಪರಂಪರೆ ರಕ್ಷಣೆ–ಬಿಬಿಎಂಪಿಯ ಹೊಣೆಗಳು
ಪಾರಂಪರಿಕ ಕಟ್ಟೆ, ತಾಣ, ಐತಿಹಾಸಿಕ ವಾಸ್ತುಶಿಲ್ಪದ, ಸಾಂಸ್ಕೃತಿಕ, ಪ್ರಾಕೃತಿಕ ಅಥವಾ ಜೀವಪರಿಸರೀಯ ಮಹತ್ವ ಹೊಂದಿದ ಅಥವಾ ನಿಸರ್ಗ ರಮಣೀಯ ಸೌಂದರ್ಯವಿರುವ ಪ್ರದೇಶಗಳಿಗೆ ಹೊಸ ಅಭಿವೃದ್ಧಿಯಿಂದ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಕಾಪಾಡುವುದು.

* ನಗರದ ಭೂದೃಶ್ಯವೂ ಸೇರಿದಂತೆ ನಗರ ವಿನ್ಯಾಸ ಮತ್ತು ಕಟ್ಟಡ ನಿರ್ಮಾಣದ ವೇಳೆ ವೈಶಿಷ್ಟ್ಯದ ಮೂಲ ಅಂಶ ವೃದ್ಧಿಸುವುದು.
*ಪಾರಂಪರಿಕ ಪ್ರಾಂತ ಅಥವಾ ಕಟ್ಟಡಗಳೆಂದು ಗುರುತಿಸಿರುವ ಕಟ್ಟಡಗಳ ನೆಲಸಮಗೊಳಿಸುವಿಕೆ, ಮಾರ್ಪಾಡು ಮಾಡುವಿಕೆ, ವಿಸ್ತರಣೆ, ಮರುನಿರ್ಮಾಣ, ರಕ್ಷಣೆಗೆ ಮಾರ್ಗಸೂಚಿ ನೀಡುವುದು

‘ಪರಂಪರೆ–ವೆಬ್‌ಸೈಟ್‌ನಲ್ಲೇ ಸಿಗಲಿ ವಿವರ’
‘ಪರಂಪರೆ ಸಂರಕ್ಷಣೆ ಸಮಿತಿಯ ಎಲ್ಲ ಚಟುವಟಿಕೆಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಸಮಿತಿಯ ಶಿಫಾರಸ್ಸಿನ ಮೇಲೆ ಬಿಬಿಎಂಪಿ ಪಟ್ಟಿಮಾಡಬೇಕಾಗಿರುವ ಪಾರಂಪರಿಕ ಕಟ್ಟಡಗಳು ಮತ್ತು ಸ್ಥಳಾವರಣಗಳ ಪಟ್ಟಿಯ ಜೊತೆಗೆ ಜಿಐಸ್‌ ತಂತ್ರಾಂಶ ಬಳಸಿ ವಲಯವಾರು ನಕ್ಷೆಯನ್ನು ಅಧಿಸೂಚನೆಗಳಿಗೆ ಜೋಡಿಸಸುವ ಕುರಿತು ಉಪವಿಧಿಗಳನ್ನು ಕಲ್ಪಿಸಬೇಕು. ನಾಗರಿಕರು ನಗರದ ಪರಂಪರೆಯ ಸಂರಕ್ಷಣೆಯ ನಿಟ್ಟಿನಲ್ಲಿ ತಮ್ಮ ಹೊಣೆ ಮತ್ತು ಪಾತ್ವನ್ನು ಅರ್ಥಮಾಡಿಕೊಂಡು ಸ್ಪಂದಿಸಲು ಇಂತಹ ಪಾರದರ್ಶಕ ಪ್ರಕ್ರಿಯೆಗಳು ನೆರವಾಗುತ್ತದೆ’ ಎನ್ನುತ್ತಾರೆ ಪಿ.ಜಿ.ಶೆಣೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT