ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘ ಸಂಸ್ಥೆಗಳ ಅನುದಾನಕ್ಕೆ ಕತ್ತರಿ

ಬಿಜೆಪಿ ನೇತೃತ್ವದ ಆಡಳಿತದ ಕ್ರಮ
Last Updated 13 ಮಾರ್ಚ್ 2020, 22:32 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ (ಬಿಬಿಎಂ‍ಪಿ) ಕಾಂಗ್ರೆಸ್‌ –ಜೆಡಿಎಸ್ ಮೈತ್ರಿ ಆಡಳಿತ ಅವಧಿಯಲ್ಲಿ ಸಂಘ ಸಂಸ್ಥೆಗಳಿಗೆ ಮಂಜೂರಾಗಿದ್ದ ಅನುದಾನಕ್ಕೆ ಈಗಿನ ಬಿಜೆಪಿ ನೇತೃತ್ವದ ಆಡಳಿತವು ಕತ್ತರಿ ಹಾಕಿದೆ.

ಕೆಲವು ಸಂಘ ಸಂಸ್ಥೆಗಳಿಗೆ ಹಂಚಿಕೆಯಾದ ಮೊತ್ತದಲ್ಲಿ ಭಾರಿ ಕಡಿತ ಮಾಡಿದ್ದು, ಹಿಂದಿನ ಪಟ್ಟಿಯಲ್ಲಿ ಇಲ್ಲದಿದ್ದ ಅನೇಕ ಸಂಸ್ಥೆಗಳಿಗೆ ಹೊಸತಾಗಿ ಅನುದಾನ ನೀಡಲಾಗಿದೆ.

ಕಾಂಗ್ರೆಸ್‌ನ ಗಂಗಾಂಬಿಕೆ ಅವರು ಮೇಯರ್‌ ಆಗಿದ್ದ ಅವಧಿಯಲ್ಲಿ 2019ರ ಆ. 31ರಂದು ನಡೆದ ಕೌನ್ಸಿಲ್‌ ಸಭೆಯಲ್ಲಿ ಒಟ್ಟು 52 ಸಂಘ ಸಂಸ್ಥೆಗಳಿಗೆ ₹8 ಕೋಟಿ ಅನುದಾನ ಹಂಚಿಕೆ ಮಾಡಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಪೈಕಿ ಕರ್ನಾಟಕ ಚಿತ್ರಕಲಾ ಪರಿಷತ್‌
(₹1 ಕೋಟಿ), ಬೆಂಗಳೂರು ವಕೀಲರ ಸಂಘ (₹2 ಕೋಟಿ), ರಂಗ ಕಹಳೆ ಸಂಸ್ಥೆಗಳು (₹60 ಲಕ್ಷ ) ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಒಟ್ಟು ₹3.45ಲಕ್ಷ ಅನುದಾನವನ್ನು 2020ರ ಜ. 30ರವರೆಗೆ ಬಿಡುಗಡೆ ಮಾಡಲಾಗಿತ್ತು.

₹ 4.55 ಕೋಟಿ ಬಿಡುಗಡೆಯಾಗಿರಲಿಲ್ಲ. ಈ ಮೊತ್ತವನ್ನು ಈಗಿನ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮರುಹಂಚಿಕೆ ಮಾಡಿದ್ದು, ಈ ಪ್ರಸ್ತಾವವನ್ನು ಕೌನ್ಸಿಲ್‌ ಸಭೆಯಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ.

ವಿಭೂತಿಪುರದ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀವೀರಭದ್ರ ಚಾರಿಟಬಲ್‌ ಟ್ರಸ್ಟ್‌ಗೆ ಈ ಹಿಂದೆ ₹75 ಲಕ್ಷ ಅನುದಾನ ಮಂಜೂರು ಮಾಡಲಾಗಿತ್ತು. ಉಚಿತ ಆರೋಗ್ಯ ಸೇವೆ ನೀಡುವ ಆಸ್ಪತ್ರೆ, ಉಚಿತ ಡಯಾಲಿಸಿಸ್‌ ಸೇವೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇನ್ನಿತರ ಕಾರ್ಯಕ್ರಮಗಳಿಗೆ ಈ ಟ್ರಸ್ಟ್‌ಗೆ ನೀಡಿದ್ದ ಅನುದಾನವನ್ನು ₹ 4 ಲಕ್ಷಕ್ಕೆ ಕಡಿತಗೊಳಿಸಲಾಗಿದೆ. ಉದಯಭಾನು ಕಲಾಸಂಘದ ಅನುದಾನವನ್ನು ₹10 ಲಕ್ಷದಿಂದ ₹5 ಲಕ್ಷಕ್ಕೆ ಇಳಿಸಲಾಗಿದೆ.

ಹಲಸೂರಿನ ಸೋಮೇಶ್ವರಪುರ ವೆಲ್‌ಫೇರ್‌ ಅಸೋಸಿಯೇಷನ್‌ ಟ್ರಸ್ಟ್‌ಗೆ ₹10 ಲಕ್ಷ, ಹಲಸೂರಿನ ರಾಮಕೃಷ್ಣ ಮಠಕ್ಕೆ ₹10 ಲಕ್ಷ, ಹಲಸೂರಿನ ಕರ್ನಾಟಕ ಸಂರಕ್ಷಣಾ ಸಂಘಕ್ಕೆ ₹10 ಲಕ್ಷ, ಜೆ.ಪಿ.ನಗರ ಕ್ಷತ್ರಿಯ ಯೂತ್‌ ಚಾರಿಟಬಲ್‌ ಟ್ರಸ್ಟ್‌ಗೆ ₹8 ಲಕ್ಷ, ಎನ್‌ಜಿಆರ್‌ ವೆಲ್‌ಫೇರ್‌ ಅಸೋಸಿಯೇಷನ್‌ಗೆ ₹ 8 ಲಕ್ಷ ಅನ್ನು ಹೊಸತಾಗಿ ಹಂಚಿಕೆ ಮಾಡಲಾಗಿದೆ.

ಕೌನ್ಸಿಲ್‌ನಲ್ಲಿ ಕೈಗೊಂಡ ನಿರ್ಣಯವನ್ನು ಬದಲಿಸಿರುವುದಕ್ಕೆ ವಿರೋಧ ಪಕ್ಷ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

‘ಒಬ್ಬ ಮೇಯರ್‌ ಅವಧಿಯಲ್ಲಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿದ್ದನ್ನು ಇನ್ನೊಬ್ಬ ಮೇಯರ್‌ ಆಡಳಿತದಲ್ಲಿ ಕಡಿತ ಮಾಡಿ ಮರುಹಂಚಿಕೆ ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ. ಒಂದೇ ವಾರ್ಡ್‌ನ ಹತ್ತಕ್ಕೂ ಅಧಿಕ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದಾರೆ. ಈವರೆಗೆ ಇಂತಹ ಪರಂಪರೆ ಇರಲಿಲ್ಲ. ಬಿಜೆಪಿ ಅವಧಿಯಲ್ಲಿ ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಲಾಗುತ್ತಿದೆ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಟೀಕಿಸಿದರು.

‘ನನ್ನ ಅವಧಿಯಲ್ಲಿ ಹಂಚಿಕೆ ಮಾಡಿದ್ದ ಅನುದಾನವನ್ನು ಮನಬಂದಂತೆ ಮರುಹಂಚಿಕೆ ಮಾಡಿದ್ದಾರೆ. ಕೌನ್ಸಿಲ್ ನಿರ್ಣಯಕ್ಕೆ ಬೆಲೆಯೇ ಇಲ್ಲದಂತಾಗಿದೆ’ ಎಂದು ನಿಕಟಪೂರ್ವ ಮೇಯರ್‌ ಗಂಗಾಂಬಿಕೆ ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಮೇಯರ್‌ ಎಂ.ಗೌತಮ್‌ ಕುಮಾರ್ ಅವರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಯತ್ನಿಸಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

*
ಕೌನ್ಸಿಲ್‌ ನಿರ್ಣಯವನ್ನು ಬದಲಿಸುವುದು ಒಳ್ಳೆಯ ಸಂಪ್ರದಾಯವಲ್ಲ. ಬಿಜೆಪಿಗೆ ಬೇಕಿದ್ದರೆ ಬಜೆಟ್‌ನಲ್ಲಿ ಬೇಕಾದ ಸಂಸ್ಥೆಗಳಿಗೆ ಹೊಸತಾಗಿ ಅನುದಾನ ನೀಡಲಿ.
-ಗಂಗಾಂಬಿಕೆ, ಮಾಜಿ ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT