ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಯೋಧರ ಪಡೆಯಲ್ಲಿ ಕಳವಳ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ: 15ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್‌–19 ದೃಢ
Last Updated 3 ಜುಲೈ 2020, 21:31 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 15ಕ್ಕೂ ಹೆಚ್ಚು ಮಂದಿಗೆ ಕೋವಿಡ್‌–19 ತಗುಲಿದೆ.

‘ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳದೆಯೇ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇವೆ. ನಗರದಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿರುವುದರಿಂದ ಅನುಕ್ಷಣವೂ ಆತಂಕದಿಂದ ಕರ್ತವ್ಯ ನಿರ್ವಹಿಸಬೇಕಿದೆ. ನಮ್ಮ ಸುರಕ್ಷತೆ ಬಗ್ಗೆ ಬಿಬಿಎಂಪಿ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ನೌಕರರು ಒತ್ತಾಯಿಸಿದ್ದಾರೆ.

‘ಪೊಲೀಸ್‌ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದರೆ ಸ್ಥೈರ್ಯ ತುಂಬುವ ಕೆಲಸವಾದರೂ ನಡೆಯುತ್ತಿದೆ. ನಮ್ಮಲ್ಲಿ ಅದೂ ಇಲ್ಲ. ಸೋಂಕು ತಗುಲಿದರೂ ಕೇಳುವವರಿಲ್ಲ. ನಮ್ಮದೇ ವಿಭಾಗದ ಅಧಿಕಾರಿಯೊಬ್ಬರಿಗೆ ಇತ್ತೀಚೆಗೆ ಸೋಂಕು ದೃಢಪಟ್ಟಿತು. ಯಾವ ಆಸ್ಪತ್ರೆಗೆ ದಾಖಲಾಗಬೇಕು ಎಂದು ಅವರಿಗೆ ಮಾಹಿತಿ ನೀಡುವವರಿಲ್ಲ. ಇದನ್ನು ತಿಳಿಯಲು ಕನಿಷ್ಠ 15 ಅಧಿಕಾರಿಗಳಿಗೆ ಫೋನಾಯಿಸಿದ್ದರು. ಇದು ನಮ್ಮವರ ಅವಸ್ಥೆ’ ಎಂದು ಹಿರಿಯ ಅಧಿಕಾರಿಯೊಬ್ಬರು ವಸ್ತುಸ್ಥಿತಿ ಬಿಚ್ಚಿಟ್ಟರು.

ಭದ್ರತೆಯೂ ಇಲ್ಲ: ‘ಕೊರೊನಾ ನಿಯಂತ್ರಣದ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಕೇಂದ್ರ ಸರ್ಕಾರ ₹ 50 ಲಕ್ಷ ವಿಮೆ ಸೌಲಭ್ಯ ಕಲ್ಪಿಸಿದೆ. ಆದರೆ, ಅದು ಆರೋಗ್ಯ ವಿಭಾಗದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರಿಗೆ ಹಾಗೂ ಈ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಸೀಮಿತ. ಕೋವಿಡ್‌ ನಿಯಂತ್ರಣದಲ್ಲಿ ಇಡೀ ಬಿಬಿಎಂಪಿ ಯಂತ್ರವೇ ತೊಡಗಿಸಿಕೊಂಡಿದ್ದರೂ ಪಾಲಿಕೆಯ ಕೆಲ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದು ಯಾವ ನ್ಯಾಯ’ ಎಂದು
ಪ್ರಶ್ನಿಸುತ್ತಾರೆ ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್‌.

‘ಪಾಲಿಕೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಕ್ರಮ ಕೈಗೊಂಡಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವುದರಿಂದ ನಮ್ಮವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಹಾಗಾಗಿ ಹೆಚ್ಚು ಮುಂಜಾಗ್ರತೆ ವಹಿಸಬೇಕು. ಮಾಸ್ಕ್ ಧರಿಸದೆ ಎಲ್ಲೂ ಅಡ್ಡಾಡಬಾರದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಕೋವಿಡ್‌ ವಿಮೆ ವ್ಯಾಪ್ತಿಯಲ್ಲಿ ಬರುತ್ತಾರೆ. ಯಾರಾದರೂ ಬಿಟ್ಟು ಹೋಗಿದ್ದರೆ ಅವರನ್ನು ಇದರ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು.

‘55 ವರ್ಷ ದಾಟಿದವರಿಗೂ ಇಲ್ಲ ವಿನಾಯಿತಿ’
‘ಪೊಲೀಸ್‌ ಇಲಾಖೆಯೂ ಸೇರಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ 50 ವರ್ಷ ದಾಟಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಆದರೆ, ಬಿಬಿಎಂಪಿಯಲ್ಲಿ 55 ವರ್ಷ ದಾಟಿದವರಿಗೂ ಯಾವುದೇ ವಿನಾಯಿತಿ ಇಲ್ಲ. ನಾವೆಲ್ಲ ಜೀವ ಕೈಯಲ್ಲಿ ಹಿಡಿದು ಕೆಲಸಕ್ಕೆ ಹೋಗಬೇಕಾದ ಸ್ಥಿತಿ ಇದೆ. ಮೂರು ತಿಂಗಳಿಂದ ರಜೆಯೂ ಇಲ್ಲ’ ಎಂದು ಕಂದಾಯ ವಿಭಾಗದ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು.

ಬಿಬಿಎಂಪಿ ನೌಕರರ ಸಂಘದ ಬೇಡಿಕೆ
*ಬಿಬಿಎಂಪಿ ನೌಕರರ ಚಿಕಿತ್ಸೆಗೂ ಪ್ರತ್ಯೇಕ ಕೋವಿಡ್‌ ಆಸ್ಪತ್ರೆ ಆರಂಭಿಸಬೇಕು

*ಬಿಬಿಎಂಪಿ ಸಿಬ್ಬಂದಿ ಕ್ವಾರಂಟೈನ್‌ಗೆ ಒಳಗಾಗಲು ಸುಸಜ್ಜಿತ ಹೋಟೆಲ್‌ ಕಾಯ್ದಿರಿಸಬೇಕು

*ಬಿಬಿಎಂಪಿ ಆರೋಗ್ಯ ಕಾರ್ಡ್‌ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ ಸೋಂಕಿತ ನೌಕರರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಯಸಿದರೆ ಚಿಕಿತ್ಸೆ ವೆಚ್ಚವನ್ನು ಮುಂಗಡವಾಗಿ ಪಾವತಿಸಬೇಕು

ಯಾರಿಗೆಲ್ಲ ಸೋಂಕು?

*ವಲಯವೊಂದರ ಆರೋಗ್ಯ ವೈದ್ಯಾಧಿಕಾರಿ

*ಪೂರ್ವ ವಲಯದ ವಾರ್ಡ್‌ ಒಂದರ ವೈದ್ಯಾಧಿಕಾರಿ

*ಆರ್.ಆರ್‌.ನಗರ ವಲಯದ ಕಂದಾಯ ಪರೀವೀಕ್ಷಕ

*ಪೂರ್ವ ವಲಯದ ಕಂದಾಯ ಪರಿವೀಕ್ಷಕ

*ಪೂರ್ವ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌

*ಪಶ್ಚಿಮ ವಲಯದ ವಾರ್ಡ್‌ ಒಂದರ ಕಂದಾಯ ವಸೂಲಿಗಾರ

*ವಿಶೇಷ ಆಯುಕ್ತರೊಬ್ಬರ ಆಪ್ತ ಸಹಾಯಕ

*ನಗರ ಯೋಜನೆ ಹೆಚ್ಚುವರಿ ನಿರ್ದೇಶಕರ ಕಚೇರಿ ಸಹಾಯಕ

*ಸಿದ್ದಯ್ಯ ಆಸ್ಪತ್ರೆಯ ವಾಹನ ಚಾಲಕ

*ಕೆ.ಆರ್‌.ಮಾರುಕಟ್ಟೆ ಸಹಾಯಕ ಸಿಬ್ಬಂದಿ

*ಶ್ರದ್ಧಾಂಜಲಿ ವಾಹನದ ಚಾಲಕ

*ಹೆರಿಗೆ ಅಸ್ಪತ್ರೆಯೊಂದರ ಆಯಾ

*ಪಾಲಿಕೆಯ ಆಸ್ಪತ್ರೆಯೊಂದರ ಆಯಾ

*ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್‌) ಕಚೇರಿಯ ಸಹಾಯಕ ಸಿಬ್ಬಂದಿ

*ಆರೋಗ್ಯ ವೈದ್ಯಾಧಿಕಾರಿ ಜೊತೆ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಹಾಯಕ ಸಿಬ್ಬಂದಿ (ಹೊರಗುತ್ತಿಗೆ ಆಧಾರದಲ್ಲಿ)

*
ನಮ್ಮನ್ನು ಕೊರೊನಾ ಯೋಧರೆಂದು ಕರೆದರೆ ಸಾಲದು. ನಮ್ಮ ಬಗ್ಗೆ ಕಾಳಜಿಯನ್ನೂ ವಹಿಸಬೇಕು.
-ಎ.ಅಮೃತರಾಜ್‌, ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT