ಮಂಗಳವಾರ, ಜನವರಿ 19, 2021
26 °C
ಬಿಬಿಎಂಪಿ ವ್ಯಾಪ್ತಿಗೆ 243 ವಾರ್ಡ್‌

ಮೇಯರ್‌, ಉಪಮೇಯರ್‌ಗೆ 30 ತಿಂಗಳ ಅಧಿಕಾರಾವಧಿ: ಹೊಸ ಕಾಯ್ದೆ 11ರಿಂದ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕಾಯ್ದೆ–2020 ಇದೇ 11 ರಿಂದ ಜಾರಿಗೆ ಬರಲಿದೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ಮಸೂದೆ ಬಗ್ಗೆ ಸುದೀರ್ಘ ಚರ್ಚೆ ನಡೆದು ಅಂಗೀಕಾರ ನೀಡಲಾಗಿತ್ತು. ಡಿ.19ರಂದೇ ರಾಜ್ಯಪಾಲ ವಜುಭಾಯಿ ವಾಲಾ ಅವರು ಮಸೂದೆ ಒಪ್ಪಿಗೆ ನೀಡಿದ್ದರು. ಇದೀಗ ಕಾಯ್ದೆಯ ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಹೊಸ ವ್ಯವಸ್ಥೆಯಲ್ಲಿ 243 ವಾರ್ಡ್‌ಗಳಿರಲಿವೆ. ಮೇಯರ್‌, ಮುಖ್ಯ ಆಯುಕ್ತ, ವಲಯ ಆಯುಕ್ತ, ವಲಯ ಸಮಿತಿಗಳು, ಸ್ಥಾಯಿ ಸಮಿತಿಗಳು, ವಾರ್ಡ್‌ ಸಮಿತಿಗಳು ಮತ್ತು ಪ್ರದೇಶ ಸಭಾಗಳು ಇರುತ್ತವೆ. ಮೇಯರ್‌ ಮತ್ತು ಉಪಮೇಯರ್‌ ಅವರು 30 ತಿಂಗಳ ಅಧಿಕಾರ ಅವಧಿ ಹೊಂದಿರುತ್ತಾರೆ. ಸದ್ಯ ಬಿಬಿಎಂಪಿಗೆ ಚುನಾವಣೆ ನಡೆಯದ ಕಾರಣ, ಮುಖ್ಯ ಆಯುಕ್ತರೇ ಆಡಳಿತ ನಡೆಸಲಿದ್ದಾರೆ.

ಮುಖ್ಯ ಆಯುಕ್ತರಾಗುವ ವ್ಯಕ್ತಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಂತದ ಅಧಿಕಾರಿಯಾಗಿರಬೇಕು. ಮುಖ್ಯ ಆಯುಕ್ತರು ಎರಡು ವರ್ಷ ಕಾಲ (ಸರ್ಕಾರಕ್ಕೆ ತೃಪ್ತಿದಾಯಕವಾಗಿ ಕಾರ್ಯ ನಿರ್ವಹಿಸಿದರೆ) ಹುದ್ದೆಯಲ್ಲಿ ಮುಂದುವರಿಯಬೇಕು. ಬಿಬಿಎಂಪಿ ಆಡಳಿತವು ಇನ್ನಷ್ಟು ಪರಿಣಾಮಕಾರಿಯಾಗಿರಬೇಕು ಎಂದು ಬಯಸಿದರೆ ಸರ್ಕಾರ ಅವರನ್ನು ವರ್ಗಾವಣೆ ಮಾಡಬಹುದು. ಮುಖ್ಯ ಆಯುಕ್ತರನ್ನು ವರ್ಗಾವಣೆ ಮಾಡುವುದಕ್ಕೆ ಮುನ್ನ ಪಾಲಿಕೆ ಜೊತೆ ಸಮಾಲೋಚನೆ ನಡೆಸಬೇಕು ಹಾಗೂ ಅದಕ್ಕೆ ಕಾರಣಗಳನ್ನೂ ನಮೂದಿಸಬೇಕು.

ವಲಯ ಆಯುಕ್ತರು ವಲಯದ ಆಡಳಿತವನ್ನು ನಿರ್ವಹಿಸುವ ನೋಡಲ್‌ ಅಧಿಕಾರಿ ಆಗಿರುತ್ತಾರೆ. ನಿರ್ದಿಷ್ಟಪಡಿಸಿದ ವಿಷಯಗಳ ಮೇಲೆ ವಾರ್ಡ್‌ ಸಮಿತಿ ಮತ್ತು ಪ್ರದೇಶ ಸಭಾದ ಮೇಲ್ವಿಚಾರಣೆ, ನಿರ್ದೇಶನ ಮತ್ತು ಸಮನ್ವಯದ ಕಾರ್ಯನಿರ್ವಹಿಸುತ್ತಾರೆ. ಮೇಯರ್‌ ಮತ್ತು ಮುಖ್ಯ ಆಯುಕ್ತರ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು.

ಕ್ಷೇತ್ರ ಸಮಾಲೋಚನಾ ಸಮಿತಿಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಸ್ಥಾಪಿಸಬೇಕು. ಸ್ಥಳೀಯ ಶಾಸಕರು ಇದರ ಅಧ್ಯಕ್ಷನಾಗಿರುತ್ತಾರೆ. ಇದರಲ್ಲಿ ಪಾಲಿಕೆ ಸದಸ್ಯರು ಮತ್ತು ನಾಮಕರಣಗೊಂಡ ಸದಸ್ಯರೂ ಇರುತ್ತಾರೆ. ವಲಯ ಸಮಿತಿಗಳ ಕಾರ್ಯ ನಿರ್ವಹಣೆಯಲ್ಲಿ ಅಗತ್ಯ ನೆರವು ಮತ್ತು ಸಲಹೆಗಳನ್ನು ನೀಡಬೇಕು. ಹಿಂದುಳಿದ ವಾರ್ಡ್‌ಗಳ ಅಭಿವೃದ್ಧಿಗೆ ಸಲಹೆ ನೀಡುವುದು ಮತ್ತು ಜನಸಾಮಾನ್ಯರ ದೂರು ಆಲಿಸಿ ಅದಕ್ಕೆ ಪರಿಹಾರ ಒದಗಿಸುವುದು ಸಮಿತಿಯ ಪ್ರಮುಖ ಕಾರ್ಯಗಳು.

ವಲಯ ಆಯುಕ್ತರು ಈ ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ತಿಂಗಳಿಗೆ ಒಂದು ಬಾರಿಯಾದರೂ ಸಮಿತಿ ಸಭೆಯನ್ನು ನಡೆಸಲು ಕ್ರಮಕೈಗೊಳ್ಳಬೇಕು. ಈ ಸಭೆ ನಡೆಸಲು ಒಟ್ಟು ಸದಸ್ಯ ಬಲದ ನಾಲ್ಕನೇ ಒಂದಂಶ ಸದಸ್ಯರು ಹಾಜರಿರಬೇಕು. ಸಭೆಯ ನಡಾವಳಿಗಳನ್ನು ದಾಖಲಿಸಿ ಮುಖ್ಯ ಆಯುಕ್ತರಿಗೆ ಕಳುಹಿಸಿಕೊಡುವ ಹೊಣೆ ವಲಯ ಆಯುಕ್ತರದು.

ವಲಯ ಸಮಿತಿಗಳ ಕಾರ್ಯನಿರ್ವಹಣೆಗಾಗಿಯೇ ಪಾಲಿಕೆ ಕಚೇರಿಯನ್ನು ಹಾಗೂ ಸಿಬ್ಬಂದಿಯನ್ನು ಒದಗಿಸಲಿದೆ. ಕಸ ನಿರ್ವಹಣೆಯಲ್ಲಿ ಪರಿಣಿತರೊಬ್ಬರನ್ನು ಹಾಗೂ ನಗರ ಆಡಳಿತದ ತಜ್ಞರೊಬ್ಬರನ್ನು ಸಮಿತಿ ಸದಸ್ಯರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡಲಿದೆ.

ಆ ವಲಯದ ಉಸ್ತುವಾರಿಯಾಗಿರುವ ಎಂಜಿನಿಯರ್‌, ಆಯಾ ವಲಯದ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಜಲಮಂಡಳಿಯ ಕೆಲಸ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳು, ವಾರ್ಡ್‌ಗಳ ಸಂಚಾರ ವ್ಯವಸ್ಥೆ ನಿರ್ವಹಣೆಯ ಹೊಣೆ ಹೊತ್ತ ಪೊಲೀಸ್‌ ಅಧಿಕಾರಿ ಹಾಗೂ ಬೆಸ್ಕಾಂ ಅಧಿಕಾರಿಗಳೂ ಸಮಿತಿಯ ಅಧಿಕಾರೇತರ ಸದಸ್ಯರಾಗಿರುತ್ತಾರೆ.

ಅನುದಾನ ಹಂಚಿಕೆ

ಬಿಬಿಎಂಪಿ ಬಜೆಟ್‌ನಲ್ಲಿ ನಿರ್ದಿಷ್ಟ ವಲಯಕ್ಕೆ ನಿಗದಿಪಡಿಸಲಾದ ಅನುದಾನವನ್ನು ವಲಯ ಸಮಿತಿಯು ವಾರ್ಡ್‌ ಸಮಿತಿಗಳಿಗೆ ಹಂಚಿಕೆ ಮಾಡಲಿದೆ. ಈ ಅನುದಾನಗಳ ಹಂಚಿಕೆ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿಯೇ ನಡೆಯಬೇಕು. ವಾರ್ಡ್‌ ಸಮಿತಿಯು ನಿಗದಿತ ಅವಧಿಯಲ್ಲಿ ಅದನ್ನು ಉಪಯೋಗಿಸಿಕೊಂಡು ಬಳಕೆ ಪ್ರಮಾಣ ಪತ್ರವನ್ನು ವಲಯ ಸಮಿತಿಗೆ ಸಲ್ಲಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು