ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಆ್ಯಂಟಿಜೆನ್‌ ಪರೀಕ್ಷೆ ತೀವ್ರಗೊಳಿಸಲಿದೆ ಪಾಲಿಕೆ

Last Updated 15 ಜುಲೈ 2020, 19:47 IST
ಅಕ್ಷರ ಗಾತ್ರ

ಬೆಂಗಳೂರು: ಸಮುದಾಯಕ್ಕೆ ಕೊರೊನಾ ಸೋಂಕು ಹಬ್ಬಿರುವ ಬಲವಾದ ಸಂದೇಹ ವ್ಯಕ್ತವಾಗಿರುವ ಕಾರಣ ಲಾಕ್‌ಡೌನ್‌ ಅವಧಿಯಲ್ಲಿ ನಗರದಲ್ಲಿ ವ್ಯಾಪಕವಾಗಿ ಪ್ರತಿಜನಕ ಪರೀಕ್ಷೆ (ಆ್ಯಂಟಿಜೆನ್ ಟೆಸ್ಟ್‌) ನಡೆಸುವ ಮೂಲಕ ಕೋವಿಡ್‌ ಪ್ರಕರಣಗಳನ್ನು ಪತ್ತೆ ಹಚ್ಚಲು ಬಿಬಿಎಂಪಿ ಮುಂದಾಗಿದೆ‌.

‘ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಈ ಮಾದರಿಯ ಪರೀಕ್ಷೆಯನ್ನು ಸೋಮವಾರದಿಂದಲೇ ಆರಂಭಿಸಲಾಗಿದೆ. ಕಂಟೈನ್‌ಮೆಂಟ್‌ ಅಲ್ಲದ ಯಾವ ಪ್ರದೇಶಗಳಲ್ಲಿ ಈ ಮಾದರಿಯ ಪರೀಕ್ಷೆ ಹಮ್ಮಿಕೊಳ್ಳಬೇಕು ಎಂಬುದನ್ನು ಗುರುವಾರ ನಿರ್ಧರಿಸಲಿದ್ದೇವೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಕೆಮ್ಮು, ಶೀತ ಜ್ವರದ ಲಕ್ಷಣವಿದ್ದವರನ್ನು (ಐಎಲ್‌ಐ), ಉಸಿರಾಟದ ತೊಂದರೆ ಇರುವವರನ್ನು (ಸಾರಿ), ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮುಂತಾದ ಆರೋಗ್ಯ ಸಮಸ್ಯೆ ಹೊಂದಿದ್ದವರನ್ನು ಅಥವಾ ಅನ್ಯ ಕಾಯಿಲೆ ಇರುವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ’ ಎಂದು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆಯ್ದ ಪ್ರಯೋಗಾಲಯಗಳ ಸಿಬ್ಬಂದಿಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಪರೀಕ್ಷಾ ಕಿಟ್‌ನೊಂದಿಗೆ ಸ್ಥಳಕ್ಕೆ ತೆರಳಿ ಮಾದರಿ ಸಂಗ್ರಹಿಸುತ್ತಾರೆ. ಆ್ಯಂಟಿಜೆನ್‌ ಪರೀಕ್ಷೆ ವಿಧಾನದಲ್ಲಿ ಅರ್ಧ ಗಂಟೆಯಲ್ಲಿ ಪರೀಕ್ಷೆಯ ಫಲಿತಾಂಶ ಪಡೆದು ಅದನ್ನು ಐಸಿಎಂಆರ್‌ ಪೋರ್ಟಲ್‌ನಲ್ಲಿ ದಾಖಲು ಮಾಡಲಾಗುತ್ತದೆ. ಸೋಂಕು ದೃಢಪಟ್ಟವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ರೋಗ ಲಕ್ಷಣಗಳಿಲ್ಲದಿದ್ದರೆ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಅಥವಾ ಮನೆಯಲ್ಲೇ ಪ್ರತ್ಯೇಕವಾಗಿ ಆರೈಕೆಗೆ ಒಳಗಾಗುವ ಸೌಲಭ್ಯಗಳಿದ್ದರೆ, ಅದಕ್ಕೂ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ತಿಳಿಸಿದರು.

‘ಕಂಟೈನ್‌ಮೆಂಟ್‌ ವಲಯಗಳಲ್ಲದ ಪ್ರದೇಶಗಳಲ್ಲೂ ಕೆಮ್ಮು, ಶೀತ ಜ್ವರದ ಲಕ್ಷಣ ಇರುವವರನ್ನು ಹಾಗೂ ಉಸಿರಾಟದ ಸಮಸ್ಯೆ ಇರುವವರನ್ನು ಕ್ಷಿಪ್ರ ಪರೀಕ್ಷೆಗೆ (ರ‍್ಯಾಪಿಡ್‌ ಟೆಸ್ಟ್‌) ಒಳಪಡಿಸಲಿದ್ದೇವೆ. ಇದಕ್ಕೆ ಬೇಕಾದ ಮೂಲಸೌಕರ್ಯ ಹೊಂದಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಕ್ಷಿಪ್ರ ಪರೀಕ್ಷೆಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಿಜಕ್ಕೂ ಸೋಂಕಿತರ ಪ್ರಮಾಣ ಎಷ್ಟಿದೆ ಎಂಬ ಖಚಿತ ಅಂದಾಜು ಸಿಗಲಿದೆ. ಸೋಂಕು ನಿಯಂತ್ರಣಾ ಚಟುವಟಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಇದು ನೆರವಾಗಲಿದೆ’ ಎಂದರು.

ಚಾಲಕರ ಲೈಸೆನ್ಸ್‌ ಕಿತ್ತುಕೊಳ್ಳುತ್ತಿರುವ ಅಧಿಕಾರಿಗಳು
ಕೋವಿಡ್ ಪತ್ತೆಗೆ ಕ್ಷಿಪ್ರ ಪರೀಕ್ಷೆಗಳನ್ನು ನಡೆಸುವ ಸಿಬ್ಬಂದಿಗೆ ಬಿಬಿಎಂಪಿ ಹೆಚ್ಚುವರಿ ವಾಹನಗಳನ್ನು ಹೊಂದಿಸಬೇಕಿದೆ. ಇದಕ್ಕಾಗಿ ಬೇರೆ ಇಲಾಖೆಗಳು ಬಳಸುತ್ತಿರುವ ವಾಹನಗಳನ್ನು ಬಳಸಿಕೊಳ್ಳಲು ಪಾಲಿಕೆ ಮುಂದಾಗಿದೆ. ಆದರೆ, ಬಿಬಿಎಂಪಿಗಾಗಿ ಕರ್ತವ್ಯ ನಿರ್ವಹಿಸಲು ಅನ್ಯ ಇಲಾಖೆಗಳ ವಾಹನ ಚಾಲಕರು ಹಿಂದೇಟು ಹಾಕುತ್ತಿದ್ದಾರೆ.

‘ಕೋವಿಡ್ ಪರೀಕ್ಷೆ ಕರ್ತವ್ಯಕ್ಕೆ ನೆರವಾಗಲು ಒಪ್ಪದಿದ್ದರೆ ನಮ್ಮ ವಾಹನ ಚಾಲನಾ ಪರವಾನಗಿ ಕಿತ್ತುಕೊಳ್ಳಲಾಗುತ್ತಿದೆ’ ಎಂದು ಕೆಲವು ಚಾಲಕರು ದೂರಿದ್ದಾರೆ.

‘ನಾನು ಲೋಕೋಪಯೋಗಿ ಇಲಾಖೆಯ ವಾಹನವೊಂದರಲ್ಲಿ ಚಾಲಕನಾಗಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಇಲಾಖೆಯ ಸಿಬ್ಬಂದಿಯೊಬ್ಬರನ್ನು ಬಿಟ್ಟುಬರಲು ಹೊರಟಿದ್ದಾಗ ಕೆ.ಆರ್‌.ವೃತ್ತದ ಬಳಿ ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ವಾಹನ ಅಡ್ಡಗಟ್ಟಿದರು. ಬುಧವಾರದಿಂದ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಇದಕ್ಕೊಪ್ಪದಿದ್ದಾಗ ನನ್ನ ವಾಹನ ಚಾಲನಾ ಪರವಾನಗಿಯನ್ನೇ ಕಿತ್ತುಕೊಂಡರು. ನನ್ನಂತೆಯೇ ಇತರ ಚಾಲಕರಿಗೂ ಇದೇ ಅನುಭವ ಆಗಿದೆ’ ಎಂದು ಚಾಲಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಪರೀಕ್ಷೆಗೆ ನಾವು ಪಾಲಿಕೆ ಸಿಬ್ಬಂದಿಯನ್ನು ಕರೆದೊಯ್ಯಬೇಕು. ಅವರಿಗೆ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ ಕಿಟ್‌) ನೀಡುತ್ತಾರೆ. ನಮ್ಮ ಸುರಕ್ಷತೆಗೆ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ’ ಎಂದು ಅವರು ಹೇಳಿದರು.

‘ಕೋವಿಡ್‌ ಪರೀಕ್ಷೆ ಸಲುವಾಗಿ ಅನ್ಯ ಇಲಾಖೆಗಳ 200 ವಾಹನಗಳನ್ನು ಬಳಸುತ್ತಿರುವುದು ನಿಜ. ವಾಹನ ಚಾಲಕರು ಪಾಲಿಕೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆದೊಯ್ದರೆ ಸಾಕು. ವಾಹನದಿಂದ ಇಳಿಯಬೇಕಾಗಿಯೂ ಇಲ್ಲ. ಹಾಗಾಗಿ ಅವರು ಆತಂಕ ಪಡುವ ಅಗತ್ಯ ಇಲ್ಲ’ ಎಂದು ವಾಹನ ನಿಯೋಜನೆಯ ಹೊಣೆ ಹೊತ್ತಿರುವ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT