ಭಾನುವಾರ, ಸೆಪ್ಟೆಂಬರ್ 26, 2021
24 °C
ಶೇ 2ರಷ್ಟು ನಗರ ಭೂಸಾರಿಗೆ ಉಪಕರ ಈ ವರ್ಷದಿಂದ ಜಾರಿ

ಬಿಬಿಎಂಪಿ: ಈ ಬಾರಿ ಆಸ್ತಿ ತೆರಿಗೆ ತುಸು ದುಬಾರಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ನಿವಾಸಿಗಳಿಗೆ 2021–22ನೇ ಸಾಲಿನಲ್ಲಿ ಆಸ್ತಿ ತೆರಿಗೆ ತುಸು ದುಬಾರಿ ಆಗಲಿದೆ. ಈ ಆರ್ಥಿಕ ವರ್ಷದಿಂದ ಆಸ್ತಿ ತೆರಿಗೆ ಮೇಲೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರವನ್ನು ಸೇರಿಸಿ ಪಾವತಿಸಬೇಕಾಗುತ್ತದೆ.

ಇದುವರೆಗೆ ಆಸ್ತಿ ತೆರಿಗೆ ಮೇಲೆ ಶೇ 24ರಷ್ಟು ಉಪಕರವನ್ನು ಸಂಗ್ರಹಿಸಲಾಗುತ್ತಿದೆ. ಈ ಆರ್ಥಿಕ ವರ್ಷದಿಂದ ಉಪಕರದ ಪ್ರಮಾಣ ಶೇ 26ಕ್ಕೆ ಹೆಚ್ಚಳವಾಗಲಿದೆ.

2020ರ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 143ರ ಅಡಿ ಆಸ್ತಿ ತೆರಿಗೆ ಮೇಲೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರ  ಸಂಗ್ರಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. 2021–22ನೇ ಸಾಲಿನಲ್ಲಿ ಆಸ್ತಿ ತೆರಿಗೆ ಜೊತೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರವನ್ನು ಸೇರಿಸಿ ಸಂಗ್ರಹಿಸುವ ಬಗ್ಗೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಸೋಮವಾರ (ಮಾ 29ರಂದು) ಸುತ್ತೋಲೆ ಹೊರಡಿಸಿದ್ದಾರೆ. 

1976ರ ಕೆಎಂಸಿ ಕಾಯ್ದೆ ಅಡಿಯೂ ಆಸ್ತಿ ತೆರಿಗೆ ಜೊತೆ ನಗರ ಭೂಸಾರಿಗೆ ಉಪಕರವನ್ನು ಸಂಗ್ರಹಿಸಲು ಅವಕಾಶವಿತ್ತು.  ಗೌತಮ್‌ ಕುಮಾರ್‌ ಅವರು ಮೇಯರ್‌ ಆಗಿದ್ದಾಗ 2020ರ ಜೂನ್‌ನಲ್ಲಿ ನಡೆದ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಕೌನ್ಸಿಲ್‌ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದರು. ಪ್ರತಿಭಟನೆಗೆ ಮಣಿದ ಆಡಳಿತ ಪಕ್ಷವು ಉಪಕರ ವಿಧಿಸುವ ನಿರ್ಣಯವನ್ನು ಹಿಂಪಡೆದಿತ್ತು.

ಗೌರವ ಗುಪ್ತ ಅವರು ಬಿಬಿಎಂಪಿಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಬಳಿಕ 2020ರ ಸೆ. 29ರಂದು ನಡೆದ ಸಭೆಯಲ್ಲಿ ಭೂಸಾರಿಗೆ ಉಪಕರ ವಿಧಿಸುವ ಪ್ರಸ್ತಾವವನ್ನು ಮತ್ತೆ ಪಾಲಿಕೆ ಸಭೆಯ ಮುಂದೆ ಆಯುಕ್ತರು ಮಂಡಿಸಿದ್ದರು. ಆಡಳಿತಾಧಿಕಾರಿಯವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು.

ಉಪಕರಗಳ ವಿವರ

ಆರೋಗ್ಯ ಉಪಕರ; ಶೇ 15

ಭಿಕ್ಷುಕರ ಉಪಕರ; ಶೇ 3

ಗ್ರಂಥಾಲಯ ಉಪಕರ; ಶೇ 6

ನಗರ ಭೂಸಾರಿಗೆ ಉಪಕರ; ಶೇ 2

ಏಪ್ರಿಲ್‌ನಲ್ಲಿ ತೆರಿಗೆ ಪಾವತಿಸಿದರೆ ಶೇ 5 ರಿಯಾಯಿತಿ

‘2021–22ನೇ ಸಾಲಿನ ತೆರಿಗೆ ಪಾವತಿ ಗುರುವಾರದಿಂದಲೇ ಆರಂಭವಾಗಲಿದೆ. ಏಪ್ರಿಲ್ 30ರ ಒಳಗೆ ತೆರಿಗೆ ಪಾವತಿಸುವವರಿಗೆ ತೆರಿಗೆ ಮೊತ್ತದಲ್ಲಿ ಶೇ 5ರಷ್ಟು ರಿಯಾಯಿತಿ ಸಿಗಲಿದೆ. ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ವಿಶೇಷ ಆಯುಕ್ತ ಎಸ್‌.ಬಸವರಾಜ್ ತಿಳಿಸಿದರು.

‘ಪಾಲಿಕೆಯ ವೆಬ್‌ಸೈಟ್‌ನಲ್ಲಿ ( bbmptax.karnataka.gov.in) ಘೋಷಣೆಯನ್ನು ಸಲ್ಲಿಸಿ ಆನ್‌ಲೈನ್‌ ಮೂಲಕ ಅಥವಾ ಬ್ಯಾಂಕ್ ಚಲನ್ ಮೂಲಕ ಆಸ್ತಿತೆರಿಗೆಯನ್ನು ಪಾವತಿಸಬಹುದು. ಚಲನ್‌ಗಳನ್ನು ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ, ಐ.ಸಿ.ಐ.ಸಿ.ಐ ಮತ್ತು ಆಕ್ಸಿಸ್ ಬ್ಯಾಂಕ್‌ಗಳ ಆಯ್ದ ಶಾಖೆಗಳಲ್ಲಿ (ಶಾಖೆಗಳ ವಿವರಗಳು ಪಾಲಿಕೆ ವೆಬ್‌ಸೈಟ್‌ನಲ್ಲಿ ಲಭ್ಯ) ಪಾವತಿಸಬಹುದು. ಪೇ-ಯು ಅಥವಾ ಹೆಚ್‌ಡಿಎಫ್‌ಸಿ ಗೇಟ್‌ವೇ ಬಳಸಿ ಆನ್‌ಲೈನ್ ಮೂಲಕವುಯ ಪಾವತಿಸಬಹುದು’ ಎಂದು ಅವರು ಮಾಹಿತಿ ನೀಡಿದರು.

ಶಿಕ್ಷಣ ಸಂಸ್ಥೆಗಳಿಗಿಲ್ಲ ರಿಯಾಯಿತಿ

‘ಬಿಬಿಎಂಪಿ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ಆಸ್ತಿ ತೆರಿಗೆ ರಿಯಾಯಿತಿಯನ್ನು ಈ ವರ್ಷದಿಂದ ರದ್ದುಪಡಿಸಲಾಗಿದೆ. ಬಿಬಿಎಂಪಿ ಕಾಯ್ದೆ ಪ್ರಕಾರ, ಸರ್ಕಾರಿ ಹಾಗೂ ಬಿಬಿಎಂಪಿಯ ಶಿಕ್ಷಣ ಸಂಸ್ಥೆಗಳು ಹೊರತುಪಡಿಸಿ ಉಳಿದೆಲ್ಲ ಶಿಕ್ಷಣ ಸಂಸ್ಥೆಗಳು ತಮ್ಮ ಕಟ್ಟಡಗಳಿಗೆ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ಬಸವರಾಜ್‌ ತಿಳಿಸಿದರು. 

₹ 2,837 ಕೋಟಿ ತೆರಿಗೆ ಸಂಗ್ರಹ

ಬಿಬಿಎಂಪಿಯು 2020–21ನೇ ಸಾಲಿನಲ್ಲಿ ಒಟ್ಟು ₹ 2,837 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಆರ್ಥಿಕ ವರ್ಷದ ಕೊನೇಯ ದಿನವಾದ ಬುಧವಾರ ₹ 27 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗಿದೆ.

‘ಬುಧವಾದವರೆಗೆ ಒಟ್ಟು ₹ 2,837 ಕೋಟಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಭಾಗಶಃ ಪಾವತಿಯಾಗಿರುವ ₹ 60 ಕೋಟಿ ಹಾಗೂ ಚಲನ್‌ ಮತ್ತು ಆನ್‌ಲೈನ್‌ ಮೂಲಕ ಪಾವತಿಯಾಗಿರುವ ₹ 2777.44 ಕೋಟಿ ಆಸ್ತಿ ತೆರಿಗೆಯೂ ಸೇರಿದೆ. ಇನ್ನೂ 8613 ಚಲನ್‌ಗಳನ್ನು ಆಸ್ತಿ ಮಾಲೀಕರು ಪಾವತಿಸಿದ್ದು, ಇದರಿಂದ ₹ 57.37 ಕೋಟಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಎಸ್‌.ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2020–21ನ ಸಾಲಿನ ತೆರಿಗೆ ಬಾಕಿ ಉಳಿಸಿಕೊಂಡವರು ಇನ್ನು ತಿಂಗಳಿಗೆ ಶೇ 2ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

2019–20ನೇ ಸಾಲಿಗೆ ಹೋಲಿಸಿದರೆ ತರಿಗೆ ಸಂಗ್ರಹದಲ್ಲಿ ತುಸು ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ. ₹ 2,686 ಕೋಟಿ ತೆರಿಗೆ ಸಂಗ್ರಹವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು