ಬುಧವಾರ, ಆಗಸ್ಟ್ 21, 2019
22 °C
120 ಮಿ.ಮೀಗಿಂತ ಹೆಚ್ಚು ಮಳೆಯಾದರೆ ಪ್ರವಾಹ

ಮಳೆ ಬಂದರೆ 182 ಕಡೆ ಅಪಾಯ

Published:
Updated:

ಬೆಂಗಳೂರು: ನಗರದಲ್ಲಿ ಭಾರಿ ಮಳೆಯಾದರೆ ಪರಿಸ್ಥಿತಿ ಎದುರಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ 182 ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದೆ.

ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಅವರನ್ನು ಕಚೇರಿಗೆ ಶುಕ್ರವಾರ ಕರೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮೇಯರ್ ಗಂಗಾಂಬಿಕೆ ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಮೇಯರ್, ‘ಪ್ರವಾಹ ಪರಿಸ್ಥಿತಿ ಎದುರಿಸಲು ಬೆಂಗಳೂರು ಅಭಿವೃದ್ಧಿ ಸಚಿವರ ಜತೆ ಸಭೆ ನಡೆಸಲಾಗಿತ್ತು. ಆ ಬಳಿಕ ರಾಜಕಾಲುವೆ ವಿಭಾಗದ ಅಧಿಕಾರಿಗಳು 1 ಸಾವಿರಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ ತೊಂದರೆ ಆಗದಂತೆ ಕ್ರಮ ವಹಿಸಿದ್ದಾರೆ’ ಎಂದರು.

‘ಸದ್ಯ 182 ಸೂಕ್ಷ್ಮ ಪ್ರದೇಶಗಳಲ್ಲಿ ಮಾತ್ರ ಪ್ರವಾಹ ಉಂಟಾಗುವ ಪರಿಸ್ಥಿತಿ ಇದೆ. 80 ರಿಂದ 120 ಮಿ.ಮೀ ಮಳೆಯಾದರೆ ತೊಂದರೆ ಇಲ್ಲ. 120 ಮಿ.ಮೀ ಮೇಲ್ಪಟ್ಟು ಮಳೆಯಾದರೆ ಸಮಸ್ಯೆ ಎದುರಾಗಲಿದೆ. ಈ ಪೈಕಿ 28 ಅತಿ ಸೂಕ್ಷ್ಮ ಪ್ರದೇಶಗಳಿವೆ. ಇದರಲ್ಲಿ 18 ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ(ಕೆಎಸ್‌ಎನ್‌ಎಂಡಿಸಿ) ಸಹಯೋಗದಲ್ಲಿ ನೀರಿನ ಮಟ್ಟ ಅಳೆಯುವ ಸಂವೇದಕಗಳನ್ನು (ಸೆನ್ಸರ್) ಅಳವಡಿಸಲಾಗಿದೆ. ಉಳಿದ 10 ಕಡೆಯೂ ಶೀಘ್ರ ಸೆನ್ಸರ್ ಅಳವಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಸೆನ್ಸಾರ್ ಕಾರ್ಯ ನಿರ್ವಹಿಸುವ ವಿಧಾನ: ಒಂದು ಸೆನ್ಸರ್ ಯುನಿಟ್‌ಗೆ ₹35 ಸಾವಿರ ವೆಚ್ಚವಾಗುತ್ತದೆ. ಆದರೆ, ಕೆಎಸ್‌ಎನ್ಎಂಡಿಸಿ ಉಚಿತವಾಗಿ ಒದಗಿಸಿದೆ. ಸೌರಶಕ್ತಿ ಆಧರಿಸಿ ಈ ಸೆನ್ಸರ್ ಕಾರ್ಯನಿರ್ವಹಿಸಲಿದೆ. ರಾಜಕಾಲುವೆಯಲ್ಲಿ ನೀರು ಹರಿವು ಎಷ್ಟಿದೆ ಎಂಬ ಸಿಗ್ನಲ್‌ ಅನ್ನು ಕೆಎಸ್‌ಎನ್‌ಎಂಡಿಸಿಗೆ ಸೆನ್ಸರ್‌ಗಳು ರವಾನಿಸಲಿದೆ. ಹಸಿರು ಮತ್ತು ನೀಲಿ ಬಣ್ಣದ ಸಿಗ್ನಲ್ ಇದ್ದರೆ ಅಪಾಯವಿಲ್ಲ. ಕೆಂಪು ಬಣ್ಣದ ಸಿಗ್ನಲ್ ಬಂದರೆ ಅಪಾಯ, ಅದು ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಉಂಟಾಗಲಿದೆ ಎಂದೇ ಅರ್ಥ. ಈ ಮಾಹಿತಿ ಆಧರಿಸಿ ಪ್ರವಾಹ ಪರಿಸ್ಥಿತಿ ಉಂಟಾಗಲಿರುವ ಪ್ರದೇಶದ ಜನರನ್ನು ಬೇರೆಡೆ ತೆರಳಲು ಸೂಚನೆ ನೀಡಿ ಅಪಾಯದಿಂದ ಪಾರು ಮಾಡಬಹುದು’ ಎಂದು ಮೇಯರ್ ವಿವರಿಸಿದರು.

ತಾತ್ಕಾಲಿಕ ನಿಯಂತ್ರಣಾ ಕೊಠಡಿ: ‘ಅನಾಹುತಗಳನ್ನು ನಿಭಾಯಿಸಲು 9 ಕಡೆ ಶಾಶ್ವತ ನಿಯಂತ್ರಣಾ ಕೊಠಡಿಗಳನ್ನು ಈ ಹಿಂದೆಯೇ ಸ್ಥಾಪಿಸಲಾಗಿದೆ. ಇದೀಗ ಎಲ್ಲಾ ವಲಯದ ಪ್ರತಿ ಉಪವಿಭಾಗದ ಕಚೇರಿಗಳಲ್ಲಿ 63 ತಾತ್ಕಾಲಿಕ ನಿಯಂತ್ರಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ತುರ್ತು ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಯಂತ್ರಗಳು, ಸಲಕರಣೆಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಮರ ತೆರವಿಗೆ 28 ತಂಡ

ಮಳೆಯಲ್ಲಿ ಉರುಳುವ ಮರಗಳನ್ನು ತೆರವುಗೊಳಿಸಲು ಸದ್ಯ 21 ತಂಡಗಳಿದ್ದು, ಹೆಚ್ಚುವರಿಯಾಗಿ 7 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲೂ 7 ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ.

ಮರ ಕಟಾವು ಮಾಡಲು ಬೇಕಿರುವ ಸಲಕರಣೆ ನೀಡಲಾಗಿದ್ದು, ಸಾಗಿಸಲು ವಾಹನಗಳನ್ನೂ ನಿಯೋಜನೆ ಮಾಡಲಾಗಿದೆ ಎಂದು ಮೇಯರ್ ತಿಳಿಸಿದರು.

ನಗರಾಭಿವೃದ್ಧಿ ಇಲಾಖೆ ಸೂಚನೆ

ಪ್ರವಾಹ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಅನಾಹುತ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ನಿರ್ದೇಶನ ನೀಡಿದೆ. ತಗ್ಗು ಪ್ರದೇಶಗಳ ಪಟ್ಟಿ ಸಹಿತ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಈ ಸೂಚನೆ ನೀಡಿದೆ.

ಪ್ರವಾಹ ಸಾಧ್ಯತೆಯ ಸ್ಥಳಗಳು

ಪೂರ್ವ– 11, ಪಶ್ಚಿಮ– 33, ದಕ್ಷಿಣ– 26, ಯಲಹಂಕ– 5, ಮಹದೇವಪುರ– 15, ಬೊಮ್ಮನಹಳ್ಳಿ– 7, ರಾಜರಾಜೇಶ್ವರಿನಗರ– 36, ದಾಸರಹಳ್ಳಿ– 27, ಕೋರಮಂಗಲ ವ್ಯಾಲಿ– 22.

Post Comments (+)