ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ವಿಭಜನೆ: ನೀವೇನನ್ನುತ್ತೀರಿ?

Published 22 ಜೂನ್ 2024, 4:06 IST
Last Updated 22 ಜೂನ್ 2024, 4:06 IST
ಅಕ್ಷರ ಗಾತ್ರ

ಅಭಿವೃದ್ಧಿಯೇ‌ ಧ್ಯೇಯವಾಗಲಿ

ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿರುವುದರಿಂದ ಅದಕ್ಕೆ ಅನುಗುಣವಾಗಿ ವಿಭಜಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗಿರುವ ಬ್ರ್ಯಾಂಡನ್ನು ಹೆಚ್ಚಿಸಿಕೊಳ್ಳಬೇಕು. ಈ ವಿಭಜನೆ ರಾಜಕೀಯ ಪಕ್ಷಗಳ ಲಾಭಕ್ಕೆ ಅನುಗುಣವಾಗಿ ಅಥವಾ ಜಾತಿಗಳ‌ ಆಧಾರದಲ್ಲಿ ಇರಬಾರದು. ತಜ್ಞರು, ನಾಗರಿಕರ ಸಲಹೆ ಪಡೆದು ಇಡೀ ಬೆಂಗಳೂರನ್ನು ಯಶಸ್ವಿಯಾಗಿ ನಿರ್ವಹಿಸುವ ಗುರಿಯನ್ನು ಮನದಲ್ಲಿಟ್ಟುಕೊಂಡು ವಿಭಜಿಸಿ ಉತ್ತಮ ಆಡಳಿತ ನೀಡಬೇಕು.

–ಡಾ.ಮಂಜುನಾಥ್, ಕೆಂಪೇಗೌಡ ಲೇಔಟ್, ರಾಜಗೋಪಾಲನಗರ.

ವಿಭಜನೆ– ಜನಸ್ನೇಹಿ ಕೇಂದ್ರವಾಗಲಿ

ಬಿಬಿಎಂಪಿ ವಿಭಜನೆ, ಬೆಳೆಯುತ್ತಿರುವ ನಗರಕ್ಕೆ ಅತ್ಯವಶ್ಯಕ. ಜನಸಂಖ್ಯೆಗೆ ಅನುಗುಣವಾಗಿ ವಿಂಗಡಣೆಯಾದರೆ, ಅಭಿವೃದ್ಧಿಗೆ ಹೆಚ್ಚು ಸಹಕಾರಿ. ಜನರ ದೂರು ದುಮ್ಮಾನಗಳ ಪರಿಹಾರಕ್ಕೆ ಅನುಕೂಲಕರ. ಜನಸ್ನೇಹಿ ಕೇಂದ್ರವಾಗಿ ಶೀಘ್ರ ಪರಿಹಾರ ದೊರೆಯಲಿದೆ. ಈ ವಿಂಗಡನೆ ಶೀಘ್ರ ಗತಿಯಲ್ಲಿ ಕರಾರುಪತ್ರಗಳು ಕಾರ್ಯರೂಪದಲ್ಲಿ ಬರಲಿ.

–ಸಾಗರ್ ದ್ರಾವಿಡ್, ಗೋವಿಂದರಾಜನಗರ

ಚುನಾವಣೆ ಅನಿವಾರ್ಯ

ಆಡಳಿತದ ಹಿತದೃಷ್ಟಿಯಿಂದ ಬಿಬಿಎಂಪಿಯನ್ನು ಐದು ವಿಭಾಗಗಳನ್ನಾಗಿ ಮಾಡಲು ಚಿಂತಿಸಲಾಗಿದೆ. ಇದು ಒಳ್ಳೆಯದ್ದೇ ಆಗಿದೆ. ಆಡಳಿತ ವ್ಯವಸ್ಥೆಯನ್ನು ಬಿಗಿ ಮಾಡಲು ಖಾಲಿ ಇರುವ ಎಲ್ಲಾ ಸಿಬ್ಬಂದಿಯನ್ನು ಭರ್ತಿ ಮಾಡಿಕೊಳ್ಳಬೇಕು. ಗುತ್ತಿಗೆ ನೌಕರ ನೇಮಕಾತಿ ನಿರ್ಬಂಧಿಸಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು. ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಡೆಸುವುದು ಪಾಲಿಕೆ ಆಡಳಿತಕ್ಕೆ ಅನಿವಾರ್ಯ.

–ಸಂಜನಹಳ್ಳಿ ನಾರಾಯಣ

ಬೇಗ ಚುನಾವಣೆ ನಡೆಸಿ

ಪಾಲಿಕೆ ಚುನಾವಣೆ ನಡೆಸಲು ನಾಲ್ಕು ವರ್ಷದಿಂದ ಆಡಳಿತಾರೂಢ ಸರ್ಕಾರಗಳು ಮೀನಮೇಷ ಎಣಿಸುತಿವೆ. ಎಲ್ಲಾ ಸಣ್ಣ ವಿಚಾರಕ್ಕೂ ಎಂಎಲ್ಎ ಹತ್ತಿರ ಹೋಗುವುದಕ್ಕೆ ಆಗುವುದಿಲ್ಲ. ಅದೇ ಪಾಲಿಕೆ ಸದಸ್ಯರು ಇದ್ದರೆ ಅದನ್ನೆಲ್ಲ ಬಗೆ ಹರಿಸುತ್ತಾರೆ. ನೀರಿನ ಸಮಸ್ಯೆ, ಬೀದಿ ದೀಪ, ರಸ್ತೆ ರಿಪೇರಿ ಕೆಲಸ ಸರಾಗ. ಆದ್ದರಿಂದ ಆದಷ್ಟು ಬೇಗ ಪಾಲಿಕೆ ಚುನಾವಣೆ ನಡೆಸಿದರೆ ಒಳ್ಳೆಯದು.

–ಮುನಿಸ್ವಾಮಪ್ಪ, ಟಿ. ದಾಸರಹಳ್ಳಿ

ಚಿಂತನೆಯಿಂದ ದೂರ ಸರಿಯಲಿ

ಆಡಳಿತದ ನೆಪಮಾಡಿಕೊಂಡು ಈಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವ ಚಿಂತನೆಯಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಪರ ಭಾಷಿಕರಿಗೆ ಬೆಂಗಳೂರಿನ ಮೇಲೆ ರಾಜಕೀಯ ಹಿಡಿತ ಸಾಧಿಸಲು ನಾವುಗಳೇ ಕಂಬಳಿ ಹಾಕಿ ಸ್ವಾಗತ ನೀಡಿದಂತಾಗುತ್ತದೆ.

–ಭೀಮಾಶಂಕರ ಪಾಟೀಲ್, ಕರ್ನಾಟಕ ನವನಿರ್ಮಾಣ ಸೇನೆ

ಮತ್ತಷ್ಟು ವಿಭಜನೆ ಅಗತ್ಯವಿಲ್ಲ

ಬಿಬಿಎಂಪಿಯನ್ನು ವಿಭಜಿಸುವುದು ತೆರಿಗೆದಾರರ ಹಣವನ್ನು ಪೋಲು ಮಾಡುವುದಷ್ಟೇ ಗುರಿಯಾಗಿರುತ್ತದೆ. ಒಂದು ವೇಳೆ ವಿಭಜನೆ ಮಾಡಿ ಅವುಗಳಿಗೆ ಚುನಾವಣೆ ನಡೆದರೆ ಅಧಿಕಾರಿಗಳಷ್ಟೇ ಅಲ್ಲ ಆಯ್ಕೆಯಾದ ಕಾರ್ಪೊರೇಟರ್‌ಗಳೂ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮಾಡಿ, ಸಾರ್ವಜನಿಕರ ಹಣವನ್ನು ದೋಚುವುದೇ ಅವರ ಮುಖ್ಯ ಕಾಯಕವಾಗುತ್ತದೆ. ಈಗಿರುವ ಎಂಟು ವಲಯಗಳೇ ಸಾಕು. ಅಧಿಕಾರಿಗಳು, ಚುನಾವಣೆ ನಡೆದರೆ ಆಯ್ಕೆಯಾಗಿ ಬರುವವರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು. ಮತ್ತಷ್ಟು ವಿಭಜನೆಯ ಅಗತ್ಯವಿಲ್ಲ.

–ಪ್ರಗತಿ ವೆಂಕಟೇಶ್ ಬಾಬು, ಸ್ವಾತಿನಗರ, ಕೆಂಗೇರಿ

ರಾಜಕೀಯ ಹಿತಾಸಕ್ತಿಗಾಗಿ ಮಾತ್ರ

ಬಿಬಿಎಂಪಿ ವಿಭಜನೆ ರಾಜಕೀಯ ಹಿತಾಸಕ್ತಿಗಾಗಿ ಮಾತ್ರ. ಇದರಿಂದ ಸಾಮಾನ್ಯ ಜನರಿಗೆ ಉಪಯೋಗವಿಲ್ಲ. ಕನ್ನಡದ ಅಸ್ಮಿತೆಗೆ ಧಕ್ಕೆಯಾಗುತ್ತದೆ. ಅದರ ಬದಲು ವಲಯಗಳಿಗೆ ಅಧಿಕಾರ ನೀಡಿದರೆ ಜನರು ಮುಖ್ಯ ಕಚೇರಿಗೆ ಅಲೆದಾಟ ತಪ್ಪುತ್ತದೆ. ಆದಷ್ಟು ಬೇಗ ಚುನಾವಣೆ ನಡೆಸಬೇಕು.

–ಕೃಷ್ಣಮೂರ್ತಿ, ಮತ್ತಿಕೆರೆ

ವಿಭಜನೆ ಖಂಡಿತಾ ಆಗಬೇಕು

ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರನ್ನು ಮುಖ್ಯವಾಗಿ ಸ್ವಚ್ಛ, ಕಸಮುಕ್ತ ನಗರವಾಗಿಸಬೇಕು. ಹೆಚ್ಚಿನ ಸಿಬ್ಬಂದಿ, ಮೇಲ್ವಿಚಾರಕರು, ಅಧಿಕಾರಿಗಳನ್ನು ನೇಮಿಸಿ ಕೆಲಸದ ವಿಂಗಡಣೆ ಮಾಡುವುದರಿಂದ, ಸ್ಥಳೀಯ ಸಮಸ್ಯೆಗಳು ಶೀಘ್ರ ನಿವಾರಣೆಯಾಗುತ್ತವೆ. ದಿನವೂ ಬೀದಿ ಗುಡಿಸುವ, ಕಸಸಂಗ್ರಹವಾಗಲೇಬೇಕು. ಆಗಷ್ಟೇ ಆರೋಗ್ಯಪೂರ್ಣ, ಸುಂದರ ಬಡಾವಣೆಗಳನ್ನು ನೋಡುವಂತಾಗುತ್ತದೆ. ಪಾಲಿಕೆ ವಿಭಜನೆ ಖಂಡಿತಾ ಆಗಬೇಕು.

–ಕೆ.ಎಂ. ರುಕ್ಮಿಣಿ ವೆಂಕುಮಾರ್, ಬೆಮೆಲ್ ಲೇಔಟ್, ರಾಜರಾಜೇಶ್ವರಿ ನಗರ

ಭ್ರಷ್ಟಾಚಾರರಹಿತ ಆಡಳಿತ ಬೇಕು

ನಗರ ಪಾಲಿಕೆ ವಿಭಜನೆಯಿಂದ ನಗರವಾಸಿಗಳಿಗೆ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದರೆ ಮಾತ್ರ ಅನುಕೂಲವಾಗುತ್ತದೆ. ಪಾಲಿಕೆಯಲ್ಲಿ ಸದಸ್ಯರೇ ಇಲ್ಲದೆ ಆಡಳಿತ ನಡೆಯುತ್ತಿದೆ. ಸರ್ಕಾರಗಳು ಹೇಳುವುದು ಒಂದು ಮಾಡುವುದು ಇನ್ನೊಂದು. ಒಂದೇ ಇರಲಿ ಅಥವಾ ವಿಭಜಿತವಾಗಿರಲಿ ಜನರಿಗೆ ಸೌಕರ್ಯ ನೀಡುವ ಬದ್ಧತೆ ಸರ್ಕಾರಕ್ಕಿರಬೇಕು.

–ನಿಡಸಾಲೆ ಪುಟ್ಟಸ್ವಾಮಯ್ಯ, ನಾಗರಭಾವಿ

ಹಣ ಕ್ರೋಡೀಕರಣ ಬಹಳ ಕಷ್ಟ

ಐದು ಗ್ಯಾರಂಟಿಗಳಿಗೆ ಹಣ ಪೂರೈಕೆಯಾಗದ್ದು, ಕುಂಠಿತಗೊಂಡಿರುವ ಅಭಿವೃದ್ಧಿ ಕೆಲಸ, ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ಸರಿಯಾಗಿ ವೇತನ ವಿಲೇವಾರಿ ಆಗದಿರುವುದನ್ನು ನೋಡಿದರೆ ಸರ್ಕಾರದ ಸಂದಿಗ್ಧ ಪರಿಸ್ಥಿತಿ ಜಗಜ್ಜಾಹೀರಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಬಿಬಿಎಂಪಿ ಐದು ವಿಭಾಗಗಳಾಗಿ ವಿಂಗಡಿಸಿ ಅವುಗಳ ಆಡಳಿತಕ್ಕೆ ಬೇಕಾದ ಸಿಬ್ಬಂದಿ, ಕಟ್ಟಡ, ಪರಿಕರಗಳು ಹಾಗೂ ಇನ್ನು ಇತರೆ ಅವಶ್ಯಕತೆಗಳನ್ನು ಪೂರೈಸಲು ಹಣ ಕ್ರೋಢೀಕರಣ ಬಹಳ ಕಷ್ಟ. ಆದ್ದರಿಂದ ಈಗಿರುವ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗಲಿ.

–ಕೆ.ಎಸ್. ಕುಮಾರಸ್ವಾಮಿ, ಎಂ.ಸಿ. ಲೇಔಟ್ ವಿಜಯನಗರ

ಸಾಗರ್ ದ್ರಾವಿಡ್
ಸಾಗರ್ ದ್ರಾವಿಡ್
ಸಂಜನಹಳ್ಳಿ ನಾರಾಯಣ
ಸಂಜನಹಳ್ಳಿ ನಾರಾಯಣ
ಮುನಿಸ್ವಾಮಪ್ಪ
ಮುನಿಸ್ವಾಮಪ್ಪ
ಭೀಮಾಶಂಕರ ಪಾಟೀಲ್
ಭೀಮಾಶಂಕರ ಪಾಟೀಲ್
ಪ್ರಗತಿ ವೆಂಕಟೇಶ್ ಬಾಬು
ಪ್ರಗತಿ ವೆಂಕಟೇಶ್ ಬಾಬು
ಕೃಷ್ಣಮೂರ್ತಿ
ಕೃಷ್ಣಮೂರ್ತಿ
ಕೆ.ಎಂ. ರುಕ್ಮಿಣಿ ವೆಂಕುಮಾರ್
ಕೆ.ಎಂ. ರುಕ್ಮಿಣಿ ವೆಂಕುಮಾರ್
ನಿಡಸಾಲೆ ಪುಟ್ಟಸ್ವಾಮಯ್ಯ
ನಿಡಸಾಲೆ ಪುಟ್ಟಸ್ವಾಮಯ್ಯ
ಕೆ.ಎಸ್. ಕುಮಾರಸ್ವಾಮಿ
ಕೆ.ಎಸ್. ಕುಮಾರಸ್ವಾಮಿ
ಡಾ.ಮಂಜುನಾಥ್
ಡಾ.ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT