ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಬರುವವರಿಗೆ ಕೋವಿಡ್ ಪರೀಕ್ಷೆ ಮಾಡಿಸಿ: ಅಧಿಕಾರಿಗಳಿಗೆ ಆಯುಕ್ತರ ಸೂಚನೆ

ಲಾಕ್‌ಡೌನ್‌ ಸಡಿಲಗೊಂಡ ಬಳಿಕವೂ ಎಚ್ಚರಿಕೆ ವಹಿಸಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಕಿವಿಮಾತು
Last Updated 14 ಜೂನ್ 2021, 13:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಹರಡುವಿಕೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ ಸೋಮವಾರದಿಂದ ಸಡಿಲವಾಗಿದೆ. ಇದರ ಬೆನ್ನಲ್ಲೇ, ಕೋವಿಡ್ ಪರೀಕ್ಷೆ, ಸೋಂಕು ಹೆಚ್ಚು ಪತ್ತೆಯಾಗುವ ಕಡೆ ಕಂಟೈನ್ಮೆಂಟ್ ವಲಯಗಳನ್ನು ಗುರುತಿಸುವುದು ಮತ್ತು ಸೋಂಕಿತರು ಇತರರ ಸಂಪರ್ಕ ಬಾರದಂತೆ ಪ್ರತ್ಯೇಕಿಸುವ ಪ್ರಕ್ರಿಯೆಗಳನ್ನು ತೀವ್ರಗೊಳಿಸಲುಬಿಬಿಎಂಪಿ ಮುಂದಾಗಿದೆ.

ಹೊರಗಿನಿಂದ ಬರುವವರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ವರ್ಚುವಲ್ ರೂಪದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಸಾರ್ವಜನಿಕರು ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸಿದರೆ, ಮಾತ್ರ ಈ ಸೋಂಕಿನ ವಿರುದ್ಧದ ಹೋರಾಟ ಯಶಸ್ಸು ಕಾಣಲು ಸಾಧ್ಯ. ಕೋವಿಡ್ ಪರೀಕ್ಷೆ, ಕಂಟೈನ್ಮೆಂಟ್ ವಲಯಗಳನ್ನು ಗುರುತಿಸುವುದು ಮತ್ತು ಸೋಂಕಿತರನ್ನು ಪ್ರತ್ಯೇಕಿಸುವ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ಕೋವಿಡ್ ಪರೀಕ್ಷೆ: ಬಿಬಿಎಂಪಿ ಸಿಬ್ಬಂದಿ ನಗರದ ಹಾಸ್ಟೆಲ್‌ಗಳು, ಪೇಯಿಂಗ್ ಗೆಸ್ಟ್ ಕಟ್ಟಡಗಳು, ಕಟ್ಟಡ ನಿರ್ಮಾಣ ತಾಣಗಳು ಹಾಗೂ ಕಾರ್ಖಾನೆಗಳಿಗೆ ತೆರಳಿ ಎಲ್ಲರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು. ಅಪಾರ್ಟ್‌ಮೆಂಟ್‌ಗಳ ಸಮುಚ್ಚಯಗಳಿಗೆ ಹೊರಗಿನಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ಆರ್.ಡಬ್ಲ್ಯು.ಎ) ಪದಾಧಿಕಾರಿಗಳಿಗೆ ಸೂಚನೆ ನೀಡಬೇಕು. ಸೋಂಕಿನ ಲಕ್ಷಣಗಳಿರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬರೂ ಸೊಂಕಿನಿಂದ ರಕ್ಷಣೆ ಪಡೆದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲುನಗರದ ಎಲ್ಲೆಡೆಯೂ ಲಸಿಕಾ ಕಾರ್ಯಕ್ರಮವನ್ನು ಬಿಬಿಎಂಪಿ ನಡೆಸುತ್ತಿದೆ. ಆದರೆ ಪ್ರಕರಣಗಳು ಮತ್ತೆ ಏರಿಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಾಗೂ ಜಾಗೃತಿ ನಾಗರಿಕರ ಮೇಲೆಯೂ ಇದೆ. ಸೋಂಕು ಹರಡುವಿಕೆಯನ್ನು ಸಂಪೂರ್ಣ ನಿಯಂತ್ರಿಸಬೇಕಾದರೆ ಲಾಕ್‌ಡೌನ್‌ ಸಡಿಲಿಕೆ ಬಳಿಕವೂ ಎಲ್ಲರೂ ಜಾಗರೂಕತೆ ವಹಿಸಬೇಕು’ ಎಂದು ಹೇಳಿದರು.

ಲಸಿಕೆ ಕಾರ್ಯಕ್ರಮ:

ಕೋವಿಡ್ ವಿರುದ್ಧದ ಹೋರಾಟವು ದೀರ್ಘವಾದದ್ದು.ಈ ಸೋಂಕನ್ನು ಮಟ್ಟಹಾಕಲು ಎಲ್ಲರೂ ಸುರಕ್ಷಿತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಲಸಿಕೆ ಪಡೆಯಬೇಕು. ನಗರದಲ್ಲಿ 44 ವರ್ಷ ಮೇಲ್ಪಟ್ಟವರು ಹಾಗೂ 18 ರಿಂದ 44 ವರ್ಷದೊಳಗಿನ 40,39,744 ಮಂದಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯುಲು ಅರ್ಹರಿರುವ ಎಲ್ಲರಿಗೂ ತ್ವರಿತವಾಗಿ ಲಸಿಕೆ ನೀಡಬೇಕು. ಎರಡನೇ ಡೋಸ್ ಪಡೆಯಬೇಕಾದವರಿಗೆ ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ತಿಳಿಸಬೇಕು. ಮನೆ-ಮನೆ ಸಮೀಕ್ಷೆ ಮಾಡಿ ಲಸಿಕೆ ಪಡೆಯದವರಿಗೆ ಲಸಿಕೆ ಪಡೆಯುವಂತೆ ಉತ್ತೇಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು

ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಹೆರಿಗೆ ಆಸ್ಪತ್ರೆಗಳು ಹಾಗೂ ರೆಫರಲ್‌ ಆಸ್ಪತ್ರೆಗಳಲ್ಲಿರುವ ಕೊರತೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯ ಆಯುಕ್ತರು ಮುಖ್ಯ ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತರು (ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ವಿಜಯೇಂದ್ರ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಸಲಹೆ ನೀಡಿದರು.

ಕೋವಿಡ್ ನಿಯಂತ್ರಣ: ಬಿಬಿಎಂಪಿ ಸೂಚಿಸಿದ ಕ್ರಮಗಳು

* ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಲಸಿಕಾ ಶಿಬಿರಗಳನ್ನು ಆಯೋಜಿಸಿ

* ಸೋಂಕಿನ ಲಕ್ಷಣ ಕಂಡುಬಂದರೆ ತಕ್ಷಣ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ

* ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿ

* ಕೋವಿಡ್ ನಿಯಂತ್ರಣ ಪೂರಕ ನಡವಳಿಕೆ ರೂಢಿಸಿಕೊಳ್ಳಿ.

* ಅರ್ಹರೆಲ್ಲರೂ ಕೋವಿಡ್ ಲಸಿಕೆ ಪಡೆಯಿರಿ

* ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸೋಂಕು ಪತ್ತೆ ದರ ಕಡಿಮೆಯಾಗಿದೆ. ಕೋವಿಡ್ ಪ್ರಕರಣಗಳು ಮತ್ತೆ ಏರಿಕೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಅರ್ಹರೆಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು

–ಗೌರವ್‌ ಗುಪ್ತ, ಮುಖ್ಯ ಆಯುಕ್ತರು, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT