ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಡೆಂಗಿ ನಿಯಂತ್ರಣಕ್ಕೆ ಮನೆ-ಮನೆ ಸಮೀಕ್ಷೆ

ಈ ವರ್ಷ 1,230 ಪ್ರಕರಣ; ಎಲ್ಲೆಡೆ ಜಾಗೃತಿ: ತುಷಾರ್ ಗಿರಿನಾಥ್
Published 26 ಜೂನ್ 2024, 15:43 IST
Last Updated 26 ಜೂನ್ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಡೆಂಗಿ ಹರಡುವುದನ್ನು ನಿಯಂತ್ರಿಸಲು ಮನೆ–ಮನೆ ಸಮೀಕ್ಷೆ ನಡೆಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ವಲಯ ವ್ಯಾಪ್ತಿಯಲ್ಲಿ ಆರೋಗ್ಯ ಪರಿವೀಕ್ಷಕರು, ಆಶಾ ಕಾರ್ಯಕರ್ತೆಯರು, ಎಎನ್‌ಎಂ ಹಾಗೂ ಲಿಂಕ್ ವರ್ಕರ್‌ಗಳು ಒಂದು ಸಾವಿರ ಮನೆಗಳಿಗೆ ಒಂದು ಬ್ಲಾಕ್‌ ರಚಿಸಿಕೊಳ್ಳಲಿದ್ದಾರೆ. ಅವರು, ಲಾರ್ವಾ ಇರುವ ತಾಣಗಳನ್ನು ಗುರುತಿಸುವ ಜೊತೆಗೆ, ನಾಗರಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಯಾರಿಗಾದರೂ ಜ್ವರ ಬಂದಿದ್ದಲ್ಲಿ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸುತ್ತಾರೆ. ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿದ ವರದಿಯನ್ನು ನೀಡಲು ವಲಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈಡೀಸ್, ಈಜಿಪ್ಟೈ ಎಂಬ ಸೊಳ್ಳೆಗಳಿಂದ ಡೆಂಗಿ ಹರಡುತ್ತದೆ. ಈ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮಾಡಲು ಲಾರ್ವಾ ಉತ್ಪಿತ್ತಿಯಾಗುವ ತಾಣಗಳನ್ನು ಗುರುತಿಸಿ ನಾಶಪಡಿಸಲು ಸೂಚಿಸಲಾಗಿದೆ. ನಗರದಲ್ಲಿ 2024 ಜನವರಿಯಿಂದ ಜೂನ್‌ವರೆಗೆ 1,230 ಪ್ರಕರಣಗಳು ಕಂಡುಬಂದಿದ್ದು,  ಕಳೆದ ವರ್ಷ ಜೂನ್‌ವರೆಗೆ 732 ಪ್ರಕರಣ ದಾಖಲಾಗಿದ್ದವು. ವಲಯವಾರು ಮೈಕ್ರೊ ಪ್ಲಾನ್ ಮಾಡಿಕೊಂಡು ಡೆಂಗಿ ಹರಡುವಿಕೆಯನ್ನು ನಿಯಂತ್ರಿಸಲು ಆದೇಶಿಸಲಾಗಿದೆ ಎಂದರು.

ನಗರದಲ್ಲಿ ಮಳೆ ಬಿಟ್ಟು ಬಿಟ್ಟು ಬರುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜಾಗೃತಿ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಡೆಂಗಿ ಪರೀಕ್ಷೆ: ನಗರದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎನ್.ಎಸ್ 1 ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ರೋಗದ ಲಕ್ಷಣ ಕಂಡುಬಂದರೆ ರಕ್ತದ ಮಾದರಿ ಸಂಗ್ರಹಿಸಿಕೊಂಡು ಪ್ರಯೋಗಾಲಯಗಳಿಗೆ ಕಳುಹಿಸಿಕೊಡಲಾಗುವುದು ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು.

15 ದಿನಕ್ಕೊಮ್ಮೆ ಮನೆ-ಮನೆ ಭೇಟಿ: ಪಾಲಿಕೆ ವ್ಯಾಪ್ತಿಯಲ್ಲಿರುವ 28 ಲಕ್ಷ ಮನೆಗಳಲ್ಲಿ 14 ಲಕ್ಷ ಮನೆಗಳು ಬಡ ವರ್ಗವಿರುವ ಪ್ರದೇಶ, ಜನ ಸಂಖ್ಯೆ ಹೆಚ್ಚಿರುವ ಪ್ರದೇಶ ಹಾಗೂ ತಗ್ಗು ಪ್ರದೇಶಗಳಲ್ಲಿವೆ. ಈ ಪ್ರದೇಶಗಳ ಮನೆಗಳಿಗೆ 15 ದಿನಕ್ಕೊಮ್ಮೆ ಭೇಟಿ ನೀಡಿ, ಲಾರ್ವಾ ಉತ್ಪತ್ತಿ ಪರಿಶೀಲಿಸಲಾಗುತ್ತದೆ. ಮನೆ-ಮನೆ ಸಮೀಕ್ಷೆಯಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು.

ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ತೀವ್ರ ನಿಗಾ

ಮಹದೇವಪುರ ದಕ್ಷಿಣ ವಲಯ ಹಾಗೂ ಪೂರ್ವ ವಲಯಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚು ಕಂಡುಬಂದಿದ್ದು ಆ ಪ್ರದೇಶಗಳಲ್ಲಿ ತೀವ್ರ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ತೋಟಗಾರಿಕಾ ಅರಣ್ಯ ಘನತ್ಯಾಜ್ಯ ಬೃಹತ್ ನೀರುಗಾಲುವೆ ರಸ್ತೆ ಮೂಲಸೌಕರ್ಯ ವಿಭಾಗ ಸೇರಿದಂತೆ ಇನ್ನಿತರ ವಿಭಾಗಗಳ ಜೊತೆ ವಲಯವಾರು ಸಮನ್ವಯ ಸಾಧಿಸಿ ನೀರು ನಿಲ್ಲುವ ಪ್ರದೇಶಗಳನ್ನು ಗುರುತಿಸಿ ನೀರು ನಿಲ್ಲದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT